ಚೆನ್ನೈನಲ್ಲಿ ಭೋಗಿ ಹಬ್ಬದ ಎಫೆಕ್ಟ್ : ದಟ್ಟ ಹೊಗೆಯಿಂದ ವಿಮಾನ ಸಂಚಾರಕ್ಕೆ ಅಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Plane--02
ಚೆನ್ನೈ, ಜ.13-ತಮಿಳುನಾಡು ರಾಜಧಾನಿಯಲ್ಲಿ ಸಂಕ್ರಾಂತಿ ಹಬ್ಬದ ವೇಳೆ ಆಚರಿಸುವ ಭೋಗಿ ಸಂದರ್ಭದಲ್ಲಿ ದಟ್ಟ ಹೊಗೆಯಿಂಧ ವಿಮಾನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಪ್ರತಿ ವರ್ಷ ಪೊಂಗಲ್ ವೇಳೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಇದಾಗಿದೆ. ಭೋಗಿ ಆಚರಣೆಯಿಂದ ದಟ್ಟ ಹೊಗೆ ಆವರಿಸಿಕೊಂಡು ಮುಂಜಾನೆ 4 ರಿಂದ ಬೆಳಗ್ಗೆ 8 ಗಂಟೆವರೆಗೆ ಚೆನ್ನೈ ಏರ್‍ಪೋರ್ಟ್‍ನಿಂದ ನಿರ್ಗಮಿಸುವ ಮತ್ತು ಆಗಮಿಸುವ ವಿಮಾನಗಳ ಸಂಚಾರಕ್ಕೆ ದಕ್ಕೆಯಾಗಿತ್ತು ಎಂದು ವಿಮಾನ ನಿಲ್ಧಾಣದ ಅಧಿಕಾರಿಗಳು ಹೇಳಿದ್ದಾರೆ.
ಹೊಂಜು ಕವಿದ ಕಾರಣ 18 ವಿಮಾನಗಳನ್ನು ಬೆಂಗಳೂರು ಮತ್ತು ಹೈದರಾಬಾದ್ ವಿಮಾನನಿಲ್ದಾಣಗಳ ಕಡೆಗೆ ಮಾರ್ಗ ಪರಿವರ್ತಿಸಲಾಯಿತು. ಕುವೈತ್, ಶಾಜರ್ ಮತ್ತು ದೆಹಲಿ ಕಡೆಯಿಂದ ಬಂದ ವಿಮಾನಗಳಿಗೆ ಅಡ್ಡಿಯಾಗಿದ್ದಾಗಿ ಅವರು ತಿಳಿಸಿದ್ದಾರೆ.  ಈ ಅವಧಿಯಲ್ಲಿ ಯಾವುದೇ ವಿಮಾನ ಮೇಲೇರಲಿಲ್ಲ. ಇದರಿಂದ ವಿಮಾನಯಾನಕ್ಕೆ ವಿಳಂಬವಾಗಿದ್ದು, ಪ್ರಯಾಣಿಕರು ಏರ್‍ಪೋರ್ಟ್‍ನಲ್ಲಿ ಕಾಯಬೇಕಾಯಿತು. ತಮಿಳುನಾಡಿನ ಅತಿದೊಡ್ಡ ಹಬ್ಬವಾದ ಸುಗ್ಗಿ ಸಂಕ್ರಾಂತಿಗೆ( ಪೊಂಗಲ್ ) ಮುನ್ನ ರಾಜ್ಯದಾದ್ಯಂತ ಭೋಗಿ ಆಚರಿಸಲಾಗುತ್ತದೆ. ಹಳೆ ವರ್ಷಕ್ಕೆ ವಿದಾಯ ಹೇಳಿ ಹೊಸ ವರುಷವನ್ನು ಸ್ವಾಗತಿಸಲು ಹಳೆ ವಸ್ತುಗಳು ಮತ್ತು ಬಟ್ಟೆಗಳನ್ನು ಸುಡುವುದು ವಾಡಿಕೆ. ಈ ಆಚರಣೆ ವೇಳೆ ಚೆನ್ನೈನಲ್ಲಿ ದಟ್ಟ ಹೊಗೆ ಆವರಿಸಿಕೊಳ್ಳುತ್ತವೆ. ನಸುಕಿನಿಂದಲೇ ದಟ್ಟ ಹೊಗೆ ಕವಿದ ಕಾರಣ ಚೆನ್ನೈನಲ್ಲಿ ವಾಹನಗಳ ಸರಣಿ ಅಪಘಾತಗಳು ಸಂಭವಿಸಿ ಕೆಲವರಿಗೆ ಗಾಯಗಳಾಗಿವೆ. ಹೊಗೆ ರಹಿತ ಭೋಗಿ ಆಚರಿಸುವಂತೆ ಸರ್ಕಾರ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ಇದು ಸಾಮಾನ್ಯ ಸಂಗತಿಯಾಗಿದ್ದು, ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗುತ್ತಿದೆ.

Facebook Comments

Sri Raghav

Admin