ಧರ್ಮಸ್ಥಳಕ್ಕೆ ತೆರಳುತ್ತಿದ್ದ ಐರಾವತ ಬಸ್ ಅಪಘಾತ, 8 ಮಂದಿ ಸಾವು , 3 ಲಕ್ಷ ಪರಿಹಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Airavata

ಹಾಸನ,ಜ.13-ಬೆಂಗಳೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಇಂದು ಮುಂಜಾನೆ 3.30ರ ಸಮಯದಲ್ಲಿ ಜಿಲ್ಲೆಯ ಶಾಂತಿಗ್ರಾಮದ ಕೃಷಿ ಕಾಲೇಜು ಬಳಿ ಸಂಭವಿಸಿದೆ.

ದುರಂತದಲ್ಲಿ ಬಸ್‍ನ ಚಾಲಕ ಹಾಗೂ ನಿರ್ವಾಹಕ ಕೂಡ ಅಸುನೀಗಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.   ಚಾಲಕ ಲಕ್ಷ್ಮಣ, ನಿರ್ವಾಹಕ ಶಿವಪ್ಪ ಛಲವಾದಿ, ಮಂಗಳೂರು ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಡಯಾನ(22), ಬೆಂಗಳೂರಿನ ಗಂಗಾಧರ(30), ಬಿಜೋ(25) ಇನ್ನು ಮೂವರ ಹೆಸರು, ವಿಳಾಸ ತಿಳಿದುಬಂದಿಲ್ಲ.

 

Acci-03

ರಾತ್ರಿ 11.30ಕ್ಕೆ ಬೆಂಗಳೂರಿನಿಂದ ಹೊರಟಿದ್ದ ಕೆಎಸ್‍ಆರ್‍ಟಿಸಿಯ ವೋಲ್ವೊ ಐರಾವತ ಬಸ್‍ನಲ್ಲಿ ಸುಮಾರು 42 ಪ್ರಯಾಣಿಕರು ಇದ್ದರು. ಚಾಲಕನ ಅಜಾಗರೂಕತೆ, ಅತಿವೇಗದಿಂದ ಚಾಲನೆ ಮಾಡುತ್ತಿರಲಿಲ್ಲ. ಇಂದು ಮುಂಜಾನೆ 3.30ರಲ್ಲಿ ಹಾಸನದ ರಾಷ್ಟ್ರೀಯ ಹೆದ್ದಾರಿ 48ರ ಬೈಪಾಸ್ ಮೂಲಕ ಸಾಗುವಾಗ ದಟ್ಟ ಮಂಜು ಆವರಿಸಿದ್ದರಿಂದ ರಸ್ತೆ ಕಾಣದೆ ಬಸ್ಸು ರಸ್ತೆ ಬದಿ ಚಲಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Acci-01

ದುರಂತ ನಡೆಯುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆ್ಯಂಬುಲೆನ್ಸ್‍ಗಳು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ರವಾನಿಸಿವೆ.  ಶಾಂತಿಗ್ರಾಮ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ನೂರು ಮೀಟರ್ ದೂರದಲ್ಲಿದ್ದ ನಿವಾಸಿಯೊಬ್ಬರು ಸ್ಥಳಕ್ಕೆ ಧಾವಿಸಿ ಗ್ರಾಮದವರನ್ನು ಕರೆತಂದು ಗಾಯಾಳುಗಳ ರಕ್ಷಣೆಗೆ ಸಾಥ್ ನೀಡಿದರು. ಗಾಢ ನಿದ್ರೆಯ ಮಂಪರಿನಲ್ಲಿದ್ದ ಹಲವರಿಗೆ ಏನಾಯಿತು ಎಂಬುದು ಅರಿವಿಗೆ ಬರುವಷ್ಟರಲ್ಲಿಯೇ ಅಪಘಾತ ಸಂಭವಿಸಿ ಭಾರೀ ಅನಾಹುತ ನಡೆದು ಹೋಯಿತು. ಗಾಯಾಳುಗಳನ್ನು ಹೊರತೆಗೆಯಲು ಪೊಲೀಸರು, ಸ್ಥಳೀಯರು ಹರಸಾಹಸ ಪಡಬೇಕಾಯಿತು.

Acci-02

ಪರಿಹಾರ:
ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ ಮೂರು ಲಕ್ಷ ಪರಿಹಾರ ನೀಡುವುದಾಗಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಘೋಷಿಸಿದ್ದಾರೆ. ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಅವರು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.

WhatsApp Image 2018-01-13 at 9.04.05 AM

WhatsApp Image 2018-01-13 at 9.04.07 AM

WhatsApp Image 2018-01-13 at 9.04.09 AM

Facebook Comments

Sri Raghav

Admin