ಮರಕ್ಕೆ ಅಪ್ಪಳಿಸಿದ ಆಟೋ, ಒಂದೇ ಕುಟುಂಬದ ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Kolar
ಕೋಲಾರ, ಜ.13- ದೇವಸ್ಥಾನಕ್ಕೆ ಹೋಗಿ ವಾಪಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಆಪೆ ಆಟೋ ಮರಕ್ಕೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುಳಬಾಗಿಲು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬಂಗಾರಪೇಟೆ ತಾಲ್ಲೂಕಿನ ಸುಣ್ಣಕುಪ್ಪಂ ಗ್ರಾಮದ ನಿವಾಸಿಗಳಾದ ಪಾರ್ವತಮ್ಮ (37), ಗೌರಮ್ಮ (32) ಮತ್ತು ಭಾಸ್ಕರ್ (35) ಮೃತಪಟ್ಟ ದುರ್ದೈವಿಗಳು. ನಿನ್ನೆ ಬೆಳಗ್ಗೆ ಒಂದೇ ಕುಟುಂಬದ ಏಳು ಮಂದಿ ಕದರಿಪುರ ಗಂಗಮ್ಮ ದೇವಸ್ಥಾನಕ್ಕೆ ಆಪೆ ಆಟೋದಲ್ಲಿ ಹೋಗಿದ್ದರು.

ದೇವಿ ದರ್ಶನ ಮುಗಿಸಿಕೊಂಡು ರಾತ್ರಿ 10.30ರಲ್ಲಿ ತಮ್ಮ ಗ್ರಾಮಕ್ಕೆ ಮರಳುತ್ತಿದ್ದರು. ಆಪೆ ಆಟೋ ಮುಳಬಾಗಿಲು ತಾಲ್ಲೂಕಿನ ಗಾಜಲಬಾವಿ ಗ್ರಾಮ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದೆ. ಪರಿಣಾಮವಾಗಿ ಭಾಸ್ಕರ್, ಪಾರ್ವತಮ್ಮ, ಗೌರಮ್ಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಘಟನೆಯಲ್ಲಿ ಗಾಯಗೊಂಡಿರುವ ನಾಲ್ವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.  ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin