ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ ಕಾಂಗ್ರೆಸ್’ನ ಮುಖ್ಯಮಂತ್ರಿ ಅಭ್ಯರ್ಥಿ..!

ಈ ಸುದ್ದಿಯನ್ನು ಶೇರ್ ಮಾಡಿ

Siddaramaih--01

ಬೆಂಗಳೂರು, ಜ.13-ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಅನೌಪಚಾರಿಕ ವಾಗಿ ಬಿಂಬಿಸುವುದಾಗಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಪ್ರಮುಖ ನಾಯಕರಿಗೆ ಮುನ್ಸೂಚನೆ ನೀಡಿದೆ.  ದೇವರಾಜ ಅರಸು ನಂತರ ರಾಜ್ಯ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತಾವಧಿ ಪೂರೈಸಿ ಯಶಸ್ಸಿನತ್ತ ದಾಪುಗಾಲು ಹಾಕಿರುವ ಸಿದ್ದರಾಮಯ್ಯ ಅವರು ಕರ್ನಾಟಕದ ಕಾಂಗ್ರೆಸ್ ಮಟ್ಟಿಗೆ ಅತ್ಯಂತ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.

ಇತ್ತೀಚೆಗೆ ನಿರಂತರವಾಗಿ ಒಂದು ತಿಂಗಳ ಕಾಲ ರಾಜ್ಯಾದ್ಯಂತ 120 ಕ್ಷೇತ್ರಗಳಲ್ಲಿ ಸಾಧನಾ ಸಮಾವೇಶ ನಡೆಸಿರುವ ಸಿದ್ದರಾಮಯ್ಯ ಅವರಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದರ ಬಗ್ಗೆ ರಹಸ್ಯ ಮಾಹಿತಿ ಪಡೆದಿರುವ ಹೈಕಮಾಂಡ್ ಖುಷಿಯಾಗಿದ್ದು, ಸಿದ್ದರಾಮಯ್ಯ ಅವರ ನಾಯಕತ್ವ ಪ್ರಶ್ನಾತೀತವಾಗಿದೆ. ಮುಂದಿನ ಅವಧಿಗೂ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ರಾಷ್ಟ್ರ ಕಾಂಗ್ರೆಸ್‍ಗೆ ಒಂದಷ್ಟು ಚೈತನ್ಯ ತುಂಬಲು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ.

ಇಂದು ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಕಾಂಗ್ರೆಸ್ ಸಭೆಯಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಪರಮೇಶ್ವರ್ ಅವರನ್ನು ಮುಂದುವರೆಸುವ ಸಮಯದಲ್ಲಿ ಮುಂದಿನ ಚುನಾವಣೆಯನ್ನು ಸಿದ್ದರಾಮಯ್ಯ ಅವರ ನಾಯಕತ್ವದಲ್ಲೇ ಎದುರಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು.  ಕಾಂಗ್ರೆಸ್‍ನಲ್ಲಿ ಚುನಾವಣಾ ನಾಯಕತ್ವವನ್ನು ಏಕ ವ್ಯಕ್ತಿಯ ಹೆಗಲಿಗೆ ಹೊರಿಸಿದ್ದೇ ಹೊಸ ಸಂಪ್ರದಾಯ. ಪ್ರತಿ ಚುನಾವಣೆಯೂ ಸಾಮೂಹಿಕ ನಾಯಕತ್ವದಲ್ಲೇ ನಡೆಯಬೇಕು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರಗಳು. ಆದರೆ ಈ ಬಾರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ಹೈಕಮಾಂಡ್ ಅಧಿಕೃತ ಹೇಳಿಕೆ ನೀಡಿದಾಗ ಬಹಳಷ್ಟು ಜನಕ್ಕೆ ಆಶ್ಚರ್ಯವಾಗಿತ್ತು.

ನಮ್ಮದು ಅಮೆರಿಕಾದ ಸಂವಿಧಾನವಲ್ಲ. ಅಲ್ಲಿ ಮೊದಲು ನಾಯಕನನ್ನು ಆಯ್ಕೆ ಮಾಡಿ, ನಂತರ ಚುನಾವಣೆ ನಡೆಸಲಾಗುತ್ತದೆ. ಹಾಗಾಗಿ ಅಧ್ಯಕ್ಷೀಯ ಅಭ್ಯರ್ಥಿ ಘೋಷಣೆ ನಂತರವೇ ಅಮೆರಿಕದಲ್ಲಿನ ಪಕ್ಷಗಳು ಚುನಾವಣೆ ಎದುರಿಸುತ್ತವೆ. ಆದರೆ ಭಾರತದ ಸಂವಿಧಾನದಲ್ಲಿ ಚುನಾವಣೆ ನಡೆದು ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಶಾಸಕಾಂಗ ನಾಯಕನನ್ನು ಆಯ್ಕೆ ಮಾಡುತ್ತದೆ. ಆನಂತರ ಮುಖ್ಯಮಂತ್ರಿ ನೇಮಕವಾಗುತ್ತಾರೆ. ಲೋಕಸಭೆಯಲ್ಲೂ ಇದೇ ಮಾದರಿ ಅನುಸರಿಸಲಾಗುತ್ತದೆ. ಹಾಗಾಗಿ ಕಾಂಗ್ರೆಸ್ ಮೊದಲು ಮುಖ್ಯಮಂತ್ರಿಯಾಗಲಿ ಅಥವಾ ಪ್ರಧಾನಮಂತ್ರಿಯನ್ನಾಗಲಿ ಅಧಿಕೃತವಾಗಿ ಘೋಷಿಸುವ ಸಂಪ್ರದಾಯ ರೂಢಿಸಿಕೊಂಡಿಲ್ಲ.

ಬಿಜೆಪಿ ಸೇರಿದಂತೆ ಉಳಿದ ಪಕ್ಷಗಳು ನಾಯಕತ್ವ ವನ್ನು ಆಯ್ಕೆ ಮಾಡಿ ನಂತರ ಚುನಾವಣೆ ಎದುರಿ ಸುವ ಪರಿಪಾಠ ರೂಢಿಸಿಕೊಂಡಿವೆ. ಆದರೆ ಕಾಂಗ್ರೆಸ್ ಮಾತ್ರ ಸಂವಿಧಾನದ ನೆಪ ಹೇಳಿಕೊಂಡು ನಾಯಕತ್ವ ಘೋಷಣೆಗೆ ಸದಾ ಹಿಂದೇಟು ಹಾಕುತ್ತಿರುತ್ತದೆ. ಆದರೆ ಅನೌಪಚಾರಿಕವಾಗಿ ನಾಯಕತ್ವವನ್ನು ಪ್ರತಿ ಬಾರಿಯೂ ಬಿಂಬಿಸಲಾಗುತ್ತದೆ.  ಈ ಬಾರಿ ಕರ್ನಾಟಕದ ಮಟ್ಟಿಗೆ ಹಲವಾರು ಮಂದಿ ಪ್ರಮುಖ ನಾಯಕರು ಮುಖ್ಯಮಂತ್ರಿಯ ಹುದ್ದೆಯ ರೇಸ್‍ನಲ್ಲಿದ್ದಾರೆ. ಸಿದ್ದರಾಮಯ್ಯ 5 ವರ್ಷ ಪೂರೈಸಿದ್ದಾರೆ. ಮುಂದಿನ ಅವಧಿಗೆ ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಗಳು ಕೇಳಿ ಬರುತ್ತಿವೆ.

ಲೋಕಸಭೆಯ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾg, ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವಾರು ಮಂದಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬಂತೆ ಮುಂದಿನ ಸಿಎಂ ತಾವೇ ಎಂದು ಹೇಳಿಕೊಳ್ಳುತ್ತಿದ್ದಾರೆ.

ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಕಳೆದ ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದು, ಚುನಾವಣೆಯಲ್ಲಿ ತಾವು ಸೋತಿದ್ದರಿಂದ ಮುಖ್ಯಮಂತ್ರಿ ಹುದ್ದೆಯನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಪರಮೇಶ್ವರ್ ಈ ಬಾರಿ ಅಧಿಕಾರಕ್ಕಾಗಿ ಪಟ್ಟು ಹಿಡಿಯುವ ನಿರೀಕ್ಷೆಗಳಿವೆ. ಸುಮಾರು 40 ವರ್ಷ ಕಾಂಗ್ರೆಸ್‍ನಲ್ಲಿ ನಿಷ್ಠರಾಗಿ ರುವ ಮಲ್ಲಿಕಾರ್ಜುನ್ ಖರ್ಗೆ ಅವರ ಹಿರಿತನಕ್ಕೆ ಅವಕಾಶ ಕೊಡಲೇಬೇಕೆಂಬ ಬೇಡಿಕೆಗಳು ಕೇಳಿ ಬಂದಿವೆ.  ಈ ಎಲ್ಲಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ಟಿಕೆಟ್ ಹಂಚಿಕೆ ಮತ್ತು ಚುನಾವಣೆ ವೇಳೆ ಗೊಂದಲಗಳಾಗಬಾರದು ಎಂಬ ಕಾರಣಕ್ಕಾಗಿ ಹೈಕಮಾಂಡ್ ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದೆ ಎನ್ನಲಾಗಿದೆ.
ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆ ವಂಚಿತರಿಗೆ ಇನ್ನಷ್ಟು ಪ್ರಮುಖ ಜವಾಬ್ದಾರಿ ನೀಡುವುದಾಗಿ ಹೈಕಮಾಂಡ್ ಸೂಚ್ಯವಾಗಿ ಭರವಸೆ ನೀಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Facebook Comments

Sri Raghav

Admin