ರಾಜಕೀಯ ಕುಸ್ತಿ ಅಖಾಡವಾದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ, ಕಣಕ್ಕಿಳಿಯೋರು ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

mAHALAKSHMI-LAYOUT

– ಕೆ.ಎಸ್.ಜನಾರ್ದನ್
ಪ್ರತಿಷ್ಠಿತ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರತೊಡಗಿದೆ. ಚುನಾವಣಾ ದಿನಾಂಕ ಪ್ರಕಟ, ಅಭ್ಯರ್ಥಿಗಳ ಘೋಷಣೆಗೂ ಮುನ್ನವೇ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲೂ ಪ್ರಚಾರದ ಭರಾಟೆ ಜೋರಾಗಿದೆ. ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಸಮರ್ಪಕ ಅಭ್ಯರ್ಥಿಗೆ ತಿಣುಕಾಡುತ್ತಿದ್ದರೆ, ಬಿಜೆಪಿ ಒಮ್ಮತದ ಅಭ್ಯರ್ಥಿಗೆ ಸೆಣೆಸಾಡುತ್ತಿದೆ. ಜೆಡಿಎಸ್ ತನ್ನ ಕ್ಷೇತ್ರ ಮರಳಿ ಪಡೆಯಲು ಕಸರತ್ತು ನಡೆಸುತ್ತಿರುವುದು ಕಂಡುಬರುತ್ತಿದೆ.

ಶಾಸಕ ಕೆ.ಗೋಪಾಲಯ್ಯ ಪ್ರತಿನಿಧಿಸುತ್ತಿರುವ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ನಡುವೆ ಪೈಪೋಟಿ ಇದ್ದಂತೆ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತ. ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಹೀಗಾಗಿ ಮೂರೂ ಪಕ್ಷಗಳು ಆ ವರ್ಗದ ಅಭ್ಯರ್ಥಿಗಳಿಗೇ ಮಣೆ ಹಾಕುವ ಬಗ್ಗೆ ಚಿಂತನೆ ನಡೆಸುತ್ತಿವೆ.  ಹಾಲಿ ಶಾಸಕರಾಗಿರುವ ಗೋಪಾಲಯ್ಯ ಅವರೇ ಈ ಬಾರಿಯೂ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ಅಭ್ಯರ್ಥಿ ಆಯ್ಕೆ ಆಖೈರುಗೊಂಡಿಲ್ಲ.

ಒಂದು ಬಾರಿ ಈ ಕ್ಷೇತ್ರದಲ್ಲಿ ಸೋಲನುಭವಿಸಿ 2013ರ ಚುನಾವಣೆಯಲ್ಲಿ ಜಯಗಳಿಸಿರುವ ಗೋಪಾಲಯ್ಯ ಅವರು ಕ್ಷೇತ್ರಾದ್ಯಂತ ಮಿಂಚಿನಂತೆ ಸಂಚರಿಸುತ್ತಿದ್ದಾರೆ. ಮಾಜಿ ಉಪಮೇಯರ್, ಹಾಲಿ ಪಾಲಿಕೆ ಸದಸ್ಯರಾಗಿರುವ ತಮ್ಮ ಪತ್ನಿ ಹೇಮಲತಾ ಗೋಪಾಲಯ್ಯ ಅವರೊಂದಿಗೆ ಪ್ರತಿ ಮನೆಮನೆಗೂ ತೆರಳಿ ಅವರ ಕಷ್ಟ-ಸುಖಗಳಿಗೆ ಸ್ಪಂದಿಸಿ ಮತಗಳಿಕೆಯ ಹಾದಿಯಲ್ಲಿದ್ದಾರೆ. ಹಾಗೆಂದ ಮಾತ್ರಕ್ಕೆ ಚುನಾವಣೆಯಲ್ಲಿ ಗೆಲುವು ಅಷ್ಟು ಸುಲಭವಾಗಿರುವುದಿಲ್ಲ. ಇತರೆ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಪೈಪೋಟಿ ಏರ್ಪಡುವುದರಲ್ಲಿ ಅನುಮಾನವಿಲ್ಲ.  ವಿಶೇಷವಾಗಿ ಈ ಬಾರಿ ಬಿಜೆಪಿ ಈ ಕ್ಷೇತ್ರದಲ್ಲಿ ಹೆಚ್ಚು ಸಂಘಟಿತವಾಗಿದೆ. ಕಾಂಗ್ರೆಸ್‍ನಲ್ಲಿದ್ದ ಹಲವು ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ಬಾರಿ ಗೋಪಾಲಯ್ಯ ವಿರುದ್ಧ ಸ್ಪರ್ಧಿಸಿ ಸೋತಿದ್ದ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಅದೇ ರೀತಿ ಬಿಬಿಎಂಪಿ ಮಾಜಿ ವಿಪಕ್ಷ ನಾಯಕ ಎಂ.ನಾಗರಾಜ್ ಕೂಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವುದು ಕೇಸರಿ ಪಾಳಯವನ್ನು ಬಲಗೊಳಿಸಿದೆ.

ಕೆಪಿಸಿಸಿ ಮಾಜಿ ಸದಸ್ಯ ಸಿ.ರಾಜಣ್ಣ, ಡಾ.ಪ್ರಸನ್ನಕುಮಾರ್ ಸೇರಿದಂತೆ ಹಲವು ಮುಖಂಡರು ಬಿಜೆಪಿ ಸೇರಿದ್ದು, ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಕಳೆದ ಬಾರಿ ಕೆ.ಗೋಪಾಲಯ್ಯ ಅವರಿಗೆ ಬಹಿರಂಗ ಬೆಂಬಲ ನೀಡಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಎಂ.ನಾಗರಾಜ್ ಈ ಬಾರಿ ಬಿಜೆಪಿ ಟಿಕೆಟ್ ತಮಗೆ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಅದೇ ರೀತಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಉಪಮಹಾಪೌರರಾದ ಎಸ್.ಹರೀಶ್ ಕೂಡ ಇಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದರ ಜತೆಗೆ ಒಕ್ಕಲಿಗ ಜನಾಂಗದ ಖ್ಯಾತ ಚಿತ್ರನಟ ಜಗ್ಗೇಶ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಬೇಕು ಎನ್ನುವುದು ಮಾಜಿ ಡಿಸಿಎಂ ಆರ್.ಅಶೋಕ್ ಅವರ ತಂತ್ರವಾಗಿದೆ.
ಈ ಬಾರಿ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ಎಂ.ನಾಗರಾಜ್, ನೆ.ಲ.ನರೇಂದ್ರಬಾಬು, ಎಸ್.ಹರೀಶ್ ಸೇರಿದಂತೆ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವ ಭರವಸೆ ನೀಡಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ದಿನೇಶ್ ಗುಂಡೂರಾವ್ ಬೆಂಬಲಿತ ಗಿರೀಶ್ ಕೆ.ನಾಶಿ, ಪಾಲಿಕೆ ಸದಸ್ಯ ಎಂ.ಶಿವರಾಜ್, ಡಾ.ಜಿ.ಪರಮೇಶ್ವರ್ ಅವರ ರಾಜಕೀಯ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್ ಮುಂತಾದವರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಕ್ಷೇತ್ರದಾದ್ಯಂತ ಫ್ಲಕ್ಸ್, ಬ್ಯಾನರ್‍ಗಳನ್ನು ಹಾಕಿಸುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸಡ್ಡು ಹೊಡೆಯುವಂತಹ ಅಭ್ಯರ್ಥಿಗೆ ಕಾಂಗ್ರೆಸ್‍ನಲ್ಲಿ ಹುಡುಕಾಟ ಶುರುವಾಗಿದ್ದು, ಈ ಕ್ಷೇತ್ರದಲ್ಲೇ ಇರುವ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಚಿಂತನೆಯನ್ನು ಹೈಕಮಾಂಡ್ ನಡೆಸಿದೆ ಎನ್ನಲಾಗಿದೆ.
ಇಲ್ಲಿ ಒಕ್ಕಲಿಗರೇ ನಿರ್ಣಾಯಕರಾಗಿರುವುದರಿಂದ ಅದೇ ಜನಾಂಗದ ಪ್ರಭಾವಿ ಮುಖಂಡರೊಬ್ಬರನ್ನು ಕಣಕ್ಕಿಳಿಸುವ ಬಗ್ಗೆಯೂ ಕೈ ಪಾಳಯದಲ್ಲಿ ಮಾತುಕತೆಗಳು ನಡೆಯುತ್ತಿವೆ.  ಅಭ್ಯರ್ಥಿ ಯಾರೇ ಆದರೂ ಎಲ್ಲರೂ ಒಟ್ಟಾಗಿ ಮನೆ ಮನೆಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸಿ ತಮ್ಮ ತಾಕತ್ತು ಪ್ರದರ್ಶಿಸಲು ಕಾಂಗ್ರೆಸಿಗರು ಮುಂದಾಗಿದ್ದಾರೆ.

ಜೆಡಿಎಸ್‍ನಲ್ಲಿ ಜೋಷ್:

ಏಳು ವಾರ್ಡ್‍ಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ನಾಲ್ಕು ವಾರ್ಡ್‍ಗಳಲ್ಲಿ ಜೆಡಿಎಸ್ ಸದಸ್ಯರಿದ್ದಾರೆ. ಉಳಿದ ಎರಡು ವಾರ್ಡ್‍ಗಳಲ್ಲಿ ಕಾಂಗ್ರೆಸ್ ಹಾಗೂ ಕೇವಲ ಒಂದು ವಾರ್ಡ್‍ನಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಹೀಗಾಗಿ ಜೆಡಿಎಸ್ ಪಕ್ಷದಲ್ಲಿ ಜೋಷ್ ಹೆಚ್ಚಾಗಿದೆ. ಒಟ್ಟಾರೆ ಮೂರೂ ಪಕ್ಷಗಳಲ್ಲೂ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಉರುಪು ಕಂಡುಬರುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷದವರು ಯಾವ ಅಭ್ಯರ್ಥಿಗೆ ಟಿಕೆಟ್ ನೀಡಲಿದ್ದಾರೆ, ಅವರ ಪ್ರಭಾವ, ವರ್ಚಸ್ಸು ಏನು, ಚುನಾವಣೆ ಸಂದರ್ಭದಲ್ಲಿ ಮತದಾರರು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಫಲಿತಾಂಶ ನಿರ್ಣಯವಾಗಲಿದೆ.

Facebook Comments

Sri Raghav

Admin