ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ವಿಶ್ವ ಲಿಂಗಾಯತ ಪರಿಷತ್ ಅಸ್ತಿತ್ವಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Jamdar--01
ಬೆಂಗಳೂರು, ಜ.13- ವೀರಶೈವ-ಲಿಂಗಾಯತ ಕದನ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ವಿಶ್ವ ಲಿಂಗಾಯತ ಪರಿಷತ್ ಅಸ್ತಿತ್ವಕ್ಕೆ ಬಂದಿದೆ. ಜ.23ರಂದು ವಿಶ್ವ ಲಿಂಗಾಯತ ಪರಿಷತ್ ವಿದ್ಯುಕ್ತವಾಗಿ ಆರಂಭವಾಗಲಿದೆ ಎಂದು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ವೇದಿಕೆ ಸಂಚಾಲಕ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಜಾಮ್‍ದಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಗತಿಪರರು, ಹಲ ಮಠಾಧೀಶರು, ಚಿಂತಕರ ಜತೆ ಬೆಂಗಳೂರಿನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಅಂದಿನಿಂದಲೇ ವಿಶ್ವ ಲಿಂಗಾಯತ ಮಹಾಸಭಾ ಆರಂಭವಾಗಲಿದೆ ಎಂದರು. ಬಸವಣ್ಣನೇ ಲಿಂಗಾಯತ ಧರ್ಮದ ಮೂಲ ಪುರುಷ. ಶರಣರು ರಚಿಸಿರುವ ವಚನಗಳೇ ನಮ್ಮ ಸಿದ್ಧಾಂತ. ಈಗ ಅನುಸರಿಸಲಾಗುತ್ತಿರುವ ಸಿದ್ಧಾಂತ ಶಿಖಾಮಣಿಯಲ್ಲ ಎಂಬುದು ಸೇರಿದಂತೆ ಮೂರು ಸೂತ್ರಗಳನ್ನು ವೀರಶೈವ ಮಹಾಸಭಾ ಮುಂದಿಟ್ಟಿದ್ದೆವು. ಆದರೆ, ಅವರು ಒಪ್ಪಲಿಲ್ಲ.

ಹೀಗಾಗಿ ಅವರಿಂದ ದೂರವಾಗುತ್ತಿರುವುದು ನಮಗೆ ನೋವು ತಂದಿದೆ.ಆದರೂ ಇದು ಅನಿವಾರ್ಯ. ಹೀಗಾಗಿ ವಿಶ್ವ ಲಿಂಗಾಯತ ಮಹಾಸಭಾ ತಲೆ ಎತ್ತಲಿದೆ ಅಂತ ವಿವರಿಸಿದರು. ಈಗಾಗಲೇ ವಿಶ್ವ ಲಿಂಗಾಯತ ಮಹಾಸಭಾದ ಬೈಲಾ ಸಿದ್ಧವಾಗುತ್ತಿದೆ. ಬಸವ ಸಹಿತ ಲಾಂಛನವೂ ಇರಲಿದೆ ಎಂದ ಅವರು, ವಿಶ್ವ ಲಿಂಗಾಯತ ಮಹಾಸಭಾದಲ್ಲಿ ವೀರಶೈವರು ಇರಲಿದ್ದಾರೆಯೇ?ಎಂಬ ಪ್ರಶ್ನೆಗೆ ಉತ್ತರಿಸಿ, ಹಲವರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ನಿಶ್ಚಿತವಾಗಿಯೂ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

1904ರಲ್ಲಿ ಸ್ಥಾಪನೆಯಾದ ವೀರಶೈವ ಮಹಾಸಭಾ ಈ ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ,ಆರ್ಥಿಕ ಸ್ಥಾನಮಾನಗಳ ಕೊಡಿಸಲು ಹೋರಾಡುವ ಆಶಯ ಹೊಂದಿತ್ತು.ಆದರೆ, ಅದು ಈಡೇರಲಿಲ್ಲ ಎಂದು ವಿಷಾದಿಸಿದರು.  113 ವರ್ಷಗಳ ಇತಿಹಾಸವಿರುವ ವೀರಶೈವ ಮಹಾಸಭಾ ಏನು ಮಾಡಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು ಎಂದು ಮಾರ್ಮಿಕವಾಗಿ ವಿವರ ನೀಡಿದರು. ವಿಶ್ವ ಲಿಂಗಾಯತ ಮಹಾಸಭಾ ಆರಂಭವಾದ ನಂತರ ಈಗಿರುವ ಬಸವ ಸೇವಾದಳ, ಯುವ ವೇದಿಕೆಯಾಗಿ ಪರಿವರ್ತನೆಯಾಗಲಿದೆ. ಹಾಗೆಯೇ ಮಹಿಳಾ ಘಟಕಗಳಿಂದ ಹಿಡಿದು ವಿವಿಧ ಘಟಕಗಳು ಪ್ರತ್ಯೇಕ ಹೆಸರಿನಲ್ಲಿ ಅಸ್ತಿತ್ವಕ್ಕೆ ಬರಲಿವೆ ಎಂದು ಹೇಳಿದರು.

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದುದ್ದಗಲ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿ ಲಿಂಗಾಯತರಿದ್ದಾರೆ.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿದ್ದಾರೆ. ಅವರಿಗಾಗಿ ಪ್ರತ್ಯೇಕ ವೇದಿಕೆ ಎಂಬುದಿರಲಿಲ್ಲ. ಈಗ ಅಂತಹ ವೇದಿಕೆ ಸಿದ್ಧವಾಗಲಿದೆ ಎಂದು ಹೇಳಿದರು. ಲಿಂಗಾಯತ ಪ್ರತ್ಯೇಕ ಧರ್ಮವೇ? ಅದಕ್ಕೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡಡಬೇಕೇ ಎಂಬ ಸಂಬಂಧ ಅಲ್ಪಸಂಖ್ಯಾತರ ಆಯೋಗ ರಚಿಸಿದ ಜಸ್ಟೀಸ್ ನಾಗಮೋಹನದಾಸ್ ನೇತೃತ್ವದ ಸಮಿತಿ ತನ್ನ ವರದಿ ನೀಡಲು ಹೆಚ್ಚುವರಿಯಾಗಿ ಆರು ತಿಂಗಳ ಕಾಲಾವಕಾಶ ಕೇಳಿದೆ. ಅಷ್ಟರೊಳಗಾಗಿ ವಿಶ್ವ ಲಿಂಗಾಯತ ಮಹಾಸಭಾ ರಚನೆ ಅಗತ್ಯವಿತ್ತೇ? ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದರ ಪಾಡಿಗೆ ಅದು ಅಧ್ಯಯನ ಮಾಡಿ ವರದಿ ನೀಡಲಿ.ನಮ್ಮ ಪಾಡಿಗೆ ನಾವು ಮುಂದುವರಿಯುತ್ತೇವೆ ಎಂದರು.

ಅವರು ವರದಿ ನೀಡಲು ಆರು ತಿಂಗಳಾದರೂ ತೆಗೆದುಕೊಳ್ಳಲಿ. ಆರು ವರ್ಷವಾದರೂ ತೆಗೆದುಕೊಳ್ಳಲಿ.ಆದರೆ, ಲಿಂಗಾಯತ ಪ್ರತ್ಯೇಕ ಧರ್ಮ ಎನ್ನಲು ಪೂರಕವಾಗಿ ಅಗತ್ಯದ ದಾಖಲೆಗಳನ್ನು ಈಗಾಗಲೇ ಸಲ್ಲಿಸಿದ್ದೇವೆ. ಇನ್ನೂ ಹೆಚ್ಚುವರಿಯಾಗಿ ಯಾವ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದರು. ಸುಪ್ರೀಂಕೋರ್ಟ್ ಮುಂದೆಯೇ ವೀರಶೈವ, ಲಿಂಗಾಯತ ಬೇರೆ ಬೇರೆ ಎಂದು ಹೇಳಲಾಗಿದೆ. ಹಿಂದೂ ಧರ್ಮಕ್ಕಿಂತ ಪ್ರತ್ಯೇಕವಾದುದು ಎಂದು ಹೇಳಲಾಗಿದೆ ಅಂತ ಅವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಯರಾಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin