ಸರ್ಕಾರಿ ಹುದ್ದೆಗಳ ನೇಮಕಾತಿ ವಯೋಮಿತಿ 35 ರಿಂದ 40 ವರ್ಷಕ್ಕೆ ಹೆಚ್ಚಿಸಲು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Job--02

ಬೆಂಗಳೂರು, ಜ.13- ನೆರೆಯ ಆಂಧ್ರ, ಗೋವಾ ಮಾದರಿಯಲ್ಲೇ ರಾಜ್ಯದಲ್ಲೂ ಸರ್ಕಾರಿ ಹುದ್ದೆಗಳ ನೇಮಕಾತಿ ವಯೋಮಿತಿಯನ್ನು ಮೂರು ವರ್ಷಗಳಿಗೆ ಹೆಚ್ಚಳ ಮಾಡುವ ಒತ್ತಡ ಹೆಚ್ಚಾಗಿದೆ. ವಯೋಮಾನ ಮೀರುತ್ತಿರುವ ರಾಜ್ಯದ ಸಾವಿರಾರು ಉದ್ಯೋಗ ವಂಚಿತರು ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಮತ್ತಿತರರಿಗೆ ಪತ್ರ ಬರೆದು ವಯೋಮಿತಿಯನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ವಯೋಮಿತಿ ಹೆಚ್ಚಳ ಕುರಿತಂತೆ ಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರಿ ಹುದ್ದೆಗಳಿಗೆ ವಯೋಮಿತಿ ಹೆಚ್ಚಳ ಮಾಡುವ ಭರವಸೆ ನೀಡಿದ್ದರು. ಹೀಗಾಗಿ ಸರ್ಕಾರ ನೀಡಿದ ಮಾತಿನಂತೆ ವಯೋಮಿತಿಯನ್ನು ಹೆಚ್ಚಳ ಮಾಡಬೇಕೆಂದು ನೂರಾರು ವಯೋಮಾನ ವಂಚಿತರು ಒತ್ತಾಯಿಸುತ್ತಿದ್ದಾರೆ. ಕೆಎಎಸ್ ಪರೀಕ್ಷೆಗೆ ಸಾಮಾನ್ಯ ವರ್ಗದವರಿಗೆ 35 ವರ್ಷ ವಯೋಮಿತಿ ಇದೆ. ಎಸ್‍ಸಿ/ಎಸ್‍ಟಿ ವರ್ಗದವರಿಗೆ 40 ವರ್ಷಗಳ ವಯೋಮಿತಿ ಇರುವುದು ಸರಿಯಷ್ಟೆ.

ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ 371ಜೆ ವಿಧಿಯನ್ನು ಜಾರಿಗೆ ತರುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ 2012, 2013 ಮತ್ತು 2014ರ ಸಾಲಿನಲ್ಲಿ ಯಾವುದೇ ಸರ್ಕಾರಿ ನೇಮಕಾತಿ ಮಾಡಿಕೊಳ್ಳಲಿಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ನಾಲ್ಕು ವರ್ಷಗಳ ಕಾಲ ಯಾವುದೇ ಪರೀಕ್ಷೆ ಬರೆಯಲು ಸಾಧ್ಯವಾಗದೆ ವಯೋಮಾನ ಮೀರಿದೆ. ನೂರಾರು ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವ ಉದ್ದೇಶದಿಂದ ಸರ್ಕಾರ ಕೊಟ್ಟ ಮಾತಿನಂತೆ ವಯೋಮಿತಿಯನ್ನು ಹೆಚ್ಚಳ ಮಾಡಬೇಕು ಎನ್ನುವುದು ಕುಮಾರ್, ಶೋಭಾ, ರಾಕೇಶ್ ಮತ್ತಿತರರ ಅಭಿಪ್ರಾಯವಾಗಿದೆ.

ಆಂಧ್ರ ಮತ್ತು ತೆಲಂಗಾಣ ವಿಭಜನೆ ಸಂದರ್ಭದಲ್ಲಿ ಯಾವುದೇ ನೇಮಕಾತಿಯಾಗಿರಲಿಲ್ಲ. ಹೀಗಾಗಿ ಅಲ್ಲಿನ ಸರ್ಕಾರಗಳು ಗರಿಷ್ಠ ವಯೋಮಿತಿಯನ್ನು 42 ವರ್ಷಗಳಿಗೆ ವಿಸ್ತರಿಸಿವೆ. ಅದೇ ರೀತಿ ಗುಜರಾತ್‍ನಲ್ಲಿ ವಯೋಮಿತಿ 45 ವರ್ಷಗಳಷ್ಟಿದೆ. ಕೆಲ ರಾಜ್ಯಗಳಲ್ಲಿ 43 ವರ್ಷಗಳ ವಯೋಮಿತಿ ಇರುವುದರಿಂದ ರಾಜ್ಯದಲ್ಲೂ ಸರ್ಕಾರಿ ಹುದ್ದೆಯ ವಯೋಮಿತಿಯನ್ನು ಮೂರು ವರ್ಷಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ. ಇತ್ತೀಚೆಗೆ ಸರ್ಕಾರ ನೇಮಕ ಮಾಡಿದ್ದ ಹೊಟಾ ಸಮಿತಿ ಕಾಲಕಾಲಕ್ಕೆ ಪ್ರತಿ ವರ್ಷ ಅಧಿಸೂಚನೆ ಹೊರಡಿಸಲು ಶಿಫಾರಸು ಮಾಡಿರುವ ಕಾರಣ ಆದಷ್ಟು ಬೇಗ ಹೊಸ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಮತಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin