ಸಿಎಂ ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಚಾಲೆಂಜ್

ಈ ಸುದ್ದಿಯನ್ನು ಶೇರ್ ಮಾಡಿ

Shobha-Karandlaje
ಬೆಂಗಳೂರು, ಜ.13-ಆರ್‍ಎಸ್‍ಎಸ್ ಹಾಗೂ ಬಿಜೆಪಿ ಮುಖಂಡರು ಭಯೋತ್ಪಾದನೆ ಸೇರಿದಂತೆ ಯಾವುದೇ ರೀತಿಯ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಸಾಬೀತಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂಘಟನೆಗಳನ್ನು ನಿಷೇಧಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲೆಸೆದರು. ಮುಖ್ಯಮಂತ್ರಿಯವರ ಹೇಳಿಕೆಯನ್ನು ಖಂಡಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಗರ ಬಿಜೆಪಿ ಘಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೈಲ್ ಬರೋದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಮಾತಿನುದ್ದಕ್ಕೂ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಳೆದ ಐದು ದಶಕಗಳಿಂದ ಆರ್‍ಎಸ್‍ಎಸ್, ದೇಶದಲ್ಲಿ ಸಂಸ್ಕøತಿ, ಭಾಷೆ, ಸಹೋದರತೆ, ಮಾತೃ ಪ್ರೇಮ, ರಾಷ್ಟ್ರ ಭಕ್ತಿಯನ್ನು ಬೆಳೆಸುವಂತಹ ಸಂಘಟನೆಯಾಗಿದೆ. ಶಾಮ್‍ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ನರೇಂದ್ರ ಮೋದಿಯಂತಹ ಘಟಾನುಘಟಿ ನಾಯಕರು ಈ ಸಂಘಟನೆಯಿಂದ ಬೆಳೆದು ಬಂದಿದ್ದಾರೆ. ಆರ್‍ಎಸ್‍ಎಸ್ ಬಗ್ಗೆ ನಮಗೆ ಈಗಲೂ ಹೆಮ್ಮೆಯಿದೆ. ಒಂದು ವೇಳೆ ಭಯೋತ್ಪಾದನೆ ಸಂಘಟನೆಗಳಲ್ಲಿ ನಾವು ಭಾಗಿಯಾಗಿದ್ದರೆ ತಕ್ಷಣವೇ ನೀವು ನಿಷೇಧ ಹೇರಬೇಕು, ಇಲ್ಲದಿದ್ದರೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದರು.

ಪಂಡಿತ್ ಜವಾಹಾರ್ ಲಾಲ್ ನೆಹರೂ, ಇಂದಿರಾಗಾಂಧಿ ಅವರಿಂದಲೇ ನಮ್ಮ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಸಿದ್ದರಾಮಯ್ಯನವರಿಂದ ಇದು ಸಾಧ್ಯವೇ ಎಂದು ಶೋಭಾ ಪ್ರಶ್ನಿಸಿದರು. ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ಭರದಲ್ಲಿ ಹಿಂದು ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಅಧಿಕಾರದಲ್ಲಿ ನೀವೇನು ಶಾಶ್ವತವಾಗಿ ಇರುವುದಿಲ್ಲ. ಆಕಸ್ಮಿಕವಾಗಿ ಸಿಕ್ಕಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ. ಜಾತಿ, ಧರ್ಮದ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದೀರಿ. ನಿಮ್ಮ ಒಡೆದಾಳುವ ನೀತಿ ಬಹಳ ದಿನ ನಡೆಯುವುದಿಲ್ಲ ಎಂದು ಗುಡುಗಿದರು.
ಆರ್‍ಎಸ್‍ಎಸ್ ಆಗಲಿ, ಬಿಜೆಪಿಯಾಗಲಿ ಅಧಿಕಾರಕ್ಕೆ ಜೋತುಬಿದ್ದ ಸಂಘಟನೆಗಳಲ್ಲ. ದೇಶಭಕ್ತಿ ವಿಷಯದಲ್ಲಿ ಬಿಜೆಪಿ ಎಂದಿಗೂ ರಾಜಿಯಾಗುವುದಿಲ್ಲ. ದೇಶಭಕ್ತಿ, ರಾಷ್ಟ್ರಭಕ್ತಿ, ಸಂಸ್ಕøತಿ ನಮ್ಮ ಮೊದಲ ಆದ್ಯತೆ. ಸೋಗಲಾಡಿ ಜಾತ್ಯತೀತ ಹೆಸರಿನಲ್ಲಿ ನಾವು ಸಮಾಜವನ್ನು ಒಡೆದಾಳುವ ನೀಚ ಕೃತ್ಯಕ್ಕೆ ಕೈ ಹಾಕುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಶಾಸಕ ವಿಜಯಕುಮಾರ್ ಮಾತನಾಡಿ, ದೇಶಭಕ್ತಿ ವಿಚಾರದಲ್ಲಿ ಆರ್‍ಎಸ್‍ಎಸ್ ಸೇರಿದಂತೆ ಯಾವುದೇ ರಾಷ್ಟ್ರಭಕ್ತ ಸಂಘಟನೆಗಳ ವಿರುದ್ದ ಮಾತನಾಡುವ ಯೋಗ್ಯತೆ ಕಾಂಗ್ರೆಸ್‍ನವರಿಗಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕಾಂಗ್ರೆಸ್‍ಗೂ ಈಗಿನ ನಕಲಿ ಕಾಂಗ್ರೆಸ್‍ಗೂ ಸಾಕಷ್ಟು ವ್ಯತ್ಯಾಸವಿದೆ. ಈಗಿನವರು ನಕಲಿ ಕಾಂಗ್ರೆಸಿಗರು ಎಂದು ವ್ಯಂಗ್ಯವಾಡಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಮಂತ್ರ, ಮಾಟ ಮಾಡಿದರೂ ರಾಜ್ಯದಲ್ಲಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಚಿತವಾಗಿದೆ. ಸಾಧನ ಸಮಾವೇಶ ನೆಪದಲ್ಲಿ ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡುವುದು ಅವರಿಗೆ ಕಾಯಕವಾಗಿದೆ. ಜನರ ತೆರಿಗೆ ಹಣದಲ್ಲಿ ಯಾತ್ರೆ ಮಾಡುವ ಬದಲು ಕಾಂಗ್ರೆಸ್ ಪಕ್ಷದ ವತಿಯಿಂದ ಮಾಡಲಿ ಎಂದು ಸವಾಲು ಹಾಕಿದರು.

ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ ಮಾತನಾಡಿ, ಮಾತು ಮಾತಿಗೂ ಬಿಜೆಪಿಯನ್ನೇ ಸಿದ್ದರಾಮಯ್ಯನವರು ಟಾರ್ಗೆಟ್ ಮಾಡುತ್ತಿದ್ದಾರೆ. ತಾವೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎಂಬುದನ್ನು ಮರೆತು ಹಾದಿಬೀದಿಯಲ್ಲಿ ನಾಟಕ ಮಾಡುತ್ತಾ ಮತದಾರರನ್ನು ಮೋಡಿ ಮಾಡಲು ಹೊರಟಿದ್ದಾರೆ. ಚುನಾವಣೆ ಬಂದಾಗ ನಿಮ್ಮ ಹಣೆಬರಹ ಗೊತ್ತಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.  ಆರ್‍ಎಸ್‍ಎಸ್ ಇಲ್ಲವೆ ಬಿಜೆಪಿ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ್ದರೆ ನಿಷೇಧ ಹೇರಲು ನಿಮಗೆ ಏನು ಅಡ್ಡಿ ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಶಾಸಕ ಸತೀಶ್ ರೆಡ್ಡಿ , ಮುನಿರಾಜು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮುಖಂಡರಾದ ಆರ್.ಅಶೋಕ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಬೇಕಾಗಿದ್ದರಿಂದ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ.

Facebook Comments

Sri Raghav

Admin