19ರಿಂದ ಸಾವಯವ ಮತ್ತು ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಕೃಷಿ ಮೇಳ

ಈ ಸುದ್ದಿಯನ್ನು ಶೇರ್ ಮಾಡಿ

Siridhanya

ಬೆಂಗಳೂರು, ಜ.13-ಸಾವಯವ ಮತ್ತು ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವನ್ನು ನಗರದ ಅರಮನೆ ಆವರಣದಲ್ಲಿ ಇದೇ 19 ರಿಂದ 21 ರವರೆಗೆ ಏರ್ಪಡಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಾವಯವ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಒದಗಿಸಿ, ಸಾವಯವ ಉತ್ಪನ್ನಗಳನ್ನು ಮತ್ತು ಉದ್ಯಮಿಗಳನ್ನು ಪ್ರೋತ್ಸಾಹಿಸುವ ಜತೆಗೆ ಸಾವಯವ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮೂರು ದಿನಗಳ ಕಾಲ ಈ ಮೇಳ ಆಯೋಜಿಸಿದ್ದು, ಸುಮಾರು 7 ರಿಂದ 8 ದೇಶಗಳು ಒಳಗೊಂಡಂತೆ ದೇಶದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರದ ಕೃಷಿ ಸಚಿವರಾದ ರಾಧಾ ಮೋಹನ್ ಮೇಳ ಉದ್ಘಾಟಿಸಲಿದ್ದು, ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಪಾಲ್ಗೊಳ್ಳಲಿದ್ದಾರೆ. ಎರಡನೇ ದಿನದಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್‍ಪ್ರಭು ಭಾಗವಹಿಸುವರು ಎಂದು ಮಾಹಿತಿ ನೀಡಿದರು. 250 ಕಂಪೆನಿಗಳು, 100 ಖಾಸಗಿ ಖರೀದಿದಾರರು, 20 ರೆಸ್ಟೋರೆಂಟ್‍ಗಳು ಸೇರಿದಂತೆ ಒಟ್ಟು 370 ಕಂಪೆನಿಗಳು ಭಾಗವಹಿಸಲಿದ್ದು, ದೇಶದ ಪ್ರತಿಷ್ಠಿತ ಕಂಪೆನಿಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ರೈತರ ಮತ್ತು ಉದ್ಯಮಿಗಳ ನೇರ ಸಂವಾದ ಏರ್ಪಡಲಿದ್ದು, ಇದರಿಂದ ಪರಸ್ಪರ ವ್ಯಾಪಾರ ವೃದ್ಧಿಗೂ ವೇದಿಕೆ ನಿರ್ಮಾಣವಾಗಲಿದೆ. 3500 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ನಾಲ್ಕು ದೊಡ್ಡ ಪ್ರಾಗಂಣಗಳನ್ನು ಸ್ಥಾಪಿಸಲಾಗಿದ್ದು, ಒಂದರಲ್ಲಿ ಫುಡ್‍ಕೋರ್ಟ್, ಇನ್ನೊಂದರಲ್ಲಿ ರೈತರ ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ, ಇನ್ನೊಂದರಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ ಬಗೆಗಿನ ಕಾರ್ಯಾಗಾರ ನಡೆಯಲಿದ್ದು, ಮತ್ತೊಂದರಲ್ಲಿ ಪರಸ್ಪರ ಭೇಟಿ, ವಾಣಿಜ್ಯ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ.

ಮೂರು ದಿನಗಳ ಅವಧಿಯಲ್ಲಿ ಒಟ್ಟು 63 ಸಂವಾದಗಳು, ಉಪನ್ಯಾಸಗಳು, ಚರ್ಚೆಗಳು ನಡೆಯುತ್ತಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 10 ಸಾವಿರ ರೈತರು ಪಾಲ್ಗೊಳ್ಳುವ ಈ ಮೇಳದಲ್ಲಿ 20 ಪ್ರತಿಷ್ಠಿತ ರೆಸ್ಟೋರೆಂಟ್‍ಗಳು ಸಾವಯವ ಉತ್ಪನ್ನಗಳಿಂದ ತಯಾರಿಸಿದ ಖಾದ್ಯವನ್ನು ಮಾರಾಟ ಮಾಡುತ್ತಿವೆ. ಪ್ರಸ್ತುತ ಭಾರತದಲ್ಲಿ ಸಾವಯವ ಉತ್ಪನ್ನಗಳ ವ್ಯಾಪಾರ 4 ಸಾವಿರ ಕೋಟಿ ಇದ್ದು, 10 ಸಾವಿರ ಕೋಟಿ ತಲುಪುವ ನಿರೀಕ್ಷೆ ಇದೆ. ಜಾಗತಿಕ ಮಟ್ಟದಲ್ಲಿ 85 ಬಿಲಿಯನ್ ಡಾಲರ್ ವಹಿವಾಟು ನಡೆಯಲಿದ್ದು, ಇದರಲ್ಲಿ ಭಾರತದ ಪಾಲು ಶೇ.1ರಷ್ಟು ಮಾತ್ರ ಇದೆ. ಇದು ಹೆಚ್ಚುವ ಅಗತ್ಯತೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ 14 ಸಾವಿರ ಕೃಷಿ ಒಕ್ಕೂಟಗಳನ್ನು ಸ್ಥಾಪಿಸಲಾಗಿದ್ದು, ಎಪಿಎಂಸಿಗಿಂತಲೂ ಹೆಚ್ಚಿನ ದರ ಕೊಟ್ಟು ರೈತರಿಂದ ಉತ್ಪನ್ನಗಳನ್ನು ಖರೀದಿಸುತ್ತಿವೆ. ದೊಡ್ಡ ದೊಡ್ಡ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ತಲುಪಿಸಲಾಗುತ್ತಿದೆ. ಚಿತ್ರದುರ್ಗ ದಾವಣಗೆರೆ ಜಿಲ್ಲೆಗಳ ಜಂಟಿ ಒಕ್ಕೂಟದ ಅಧ್ಯಕ್ಷ ಕೃಪಾಕರ ಮಾತನಾಡಿ, ಸಚಿವರ ಸಹಕಾರದಿಂದ 9 ತಿಂಗಳ ಹಿಂದೆ ನಮ್ಮ ಒಕ್ಕೂಟ ಸ್ಥಾಪನೆಯಾಗಿದೆ. ಕೃಷಿ ಸಂಸ್ಕರಣಾ ಘಟಕದಿಂದ ಒಟ್ಟು 3.72 ಕೋಟಿ ವಹಿವಾಟು ಮಾಡಿದೆ. ಮುಂದಿನ ದಿನಗಳಲ್ಲಿ 10 ಕೋಟಿ ತಲುಪುವ ಅಂದಾಜಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೊಟೇಲ್ ವ್ಯವಸ್ಥಾಪಕರಾದ ಪ್ರಿಯಾ ಅರ್ಜುನ್, ಕೃಷಿ ವಿಜ್ಞಾನಿ ದೇವ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin