ಅತ್ತೆ ಕಿರುಕುಳದಿಂದ ಬೇಸತ್ತು ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Suicide-Water-02

ಚಿಕ್ಕಮಗಳೂರು, ಜ.14- ಅತ್ತೆ ಕಿರುಕುಳದಿಂದ ಬೇಸತ್ತ ತಾಯಿಯೊಬ್ಬಳು ತನ್ನ ಇಬ್ಬರು ಕಂದಮ್ಮಗಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕೊಪ್ಪ ತಾಲೂಕಿನ ಹಿರೇಗದ್ದೆಯ ಹೆಮ್ಮೇನಹಗ್ಲು ಗ್ರಾಮದಲ್ಲಿ ನಡೆದಿದೆ. ವಿನುತಾ (23), ಒಂದೂವರೆ ವರ್ಷದ ಮನ್ವಿತ್ ಹಾಗೂ ನಾಲ್ಕು ತಿಂಗಳ ಹಸುಗೂಸು ಪ್ರಣೀತ್ ಮೃತ ದುರ್ದೈವಿಗಳು. ಮೂಡಿಗೆರೆ ತಾಲೂಕಿನ ವಾತೇಖಾನ್ ಗ್ರಾಮದ ವಿನುತಾ, ಹೆಮ್ಮನಹಗ್ಲು ನಿವಾಸಿ ಕಿಶೋರ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು.

ದಂಪತಿ ಅನ್ಯೋನ್ಯವಾಗಿದ್ದರು. ಆದರೆ, ಅತ್ತೆ ಯಶೋಧಾ ಮತ್ತು ವಿನುತಾ ನಡುವೆ ಆಗಾಗ ಜಗಳವಾಗುತ್ತಿತ್ತು. ಅತ್ತೆಯ ಈ ವರ್ತನೆಯಿಂದ ರೋಸಿಹೋದ ವಿನುತಾ ಬೇರೆ ಮನೆ ಮಾಡುವಂತೆ ಪತಿಯನ್ನು ಪೀಡಿಸುತ್ತಿದ್ದಳು. ಆದರೆ, ಕಿಶೋರ್ ಇದಕ್ಕೆ ಕ್ಯಾರೆ ಎಂದಿರಲಿಲ್ಲ. ಗಂಡನ ಈ ಧೋರಣೆಯಿಂದ ಬೇಸತ್ತ ವಿನುತಾ ತವರು ಮನೆ ಸೇರಿಕೊಂಡಿದ್ದಳು. ಅಲ್ಲಿಗೆ ತೆರಳಿದ ಕಿಶೋರ್ ಬೇರೆ ಮನೆ ಮಾಡುವುದಾಗಿ ಭರವಸೆ ನೀಡಿ ವಾಪಸ್ ಕರೆತಂದಿದ್ದ.
ಆದರೆ, ತವರಿನಿಂದ ವಾಪಸಾದ ದಿನವೇ ವಿನುತಾ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಅನತಿ ದೂರದಲ್ಲಿರುವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ತನುಜಾ, ಕಂದಾಯ ನಿರೀಕ್ಷಕ ನಾಗರಾಜ್ ಭೇಟಿ ನೀಡಿ ಶವಗಳ ಮಹಜರು ನಡೆಸಿದರು. ವಿನುತಾ ತಂದೆ ಮಂಜಯ್ಯ, ಅಳಿಯ ಕಿಶೋರ್ ಮತ್ತು ಅತ್ತೆ ಯಶೋಧಾ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‍ಐ ಮಂಗೇಶ್ ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments

Sri Raghav

Admin