ಅಮೆರಿಕದಲ್ಲಿ ಆತಂಕ ಸೃಷ್ಟಿಸಿದ ಕ್ಷಿಪಣಿ ದಾಳಿ ಎಚ್ಚರಿಕೆಯ ಎಡವಟ್ಟು ಸಂದೇಶ..!

ಈ ಸುದ್ದಿಯನ್ನು ಶೇರ್ ಮಾಡಿ

Alert--01

ವಾಷಿಂಗ್ಟನ್, ಜ.14-ಅಮೆರಿಕದ ಹವಾಯಿ ದ್ವೀಪವನ್ನು ಗುರಿಯಾಗಿಸಿಕೊಂಡಿರುವ ಖಂಡಾಂತರ ಕ್ಷಿಪಣಿ ದಾಳಿ ಕುರಿತು ದೋಷಪೂರಿತ ತುರ್ತು ಎಚ್ಚರಿಕೆ ಸಂದೇಶದಿಂದ ಆ ಪ್ರಾಂತ್ಯದಲ್ಲಿ ಭಾರೀ ಆತಂಕ ಸೃಷ್ಟಿಯಾದ ಘಟನೆ ನಿನ್ನೆ ನಡೆದಿದೆ. ಮಾರಕ ಅಣ್ವಸ್ತ್ರ ಕ್ಷಿಪಣಿ ದಾಳಿಗಳ ಮೂಲಕ ಅಮೆರಿಕ ಮೇಲೆ ಬೆಂಕಿಯ ಮಳೆ ಸುರಿಸುತ್ತೇವೆ ಎಂದು ಉತ್ತರ ಕೊರಿಯಾ ಇತ್ತೀಚೆಗೆ ನೀಡಿದ್ದ ಬೆದರಿಕೆ ಮತ್ತು ಈ ಎಡವಟ್ಟಿನ ಸಂದೇಶದಿಂದಾಗಿ ಹವಾಯಿ ರಾಜ್ಯದ ಜನರು ಹೆದರಿ ಕಂಗಲಾದರು.

ಹವಾಯಿಯ ಸ್ಥಳೀಯ ಕಾಲಮಾನ ಬೆಳಗ್ಗೆ 8.07ರಲ್ಲಿ ಎಲ್ಲರ ಸೆಲ್‍ಫೋನ್‍ಗೆ ತುರ್ತು ಎಚ್ಚರಿಕೆ ಸಂದೇಶವೊಂದು ರವಾನೆಯಾಗಿತ್ತು. ಹವಾಯಿ ರಾಜ್ಯಕ್ಕೆ ಖಂಡಾಂತರ ಕ್ಷಿಪಣಿ ದಾಳಿ ಆತಂಕವಿದೆ. ಎಲ್ಲರೂ ತಕ್ಷಣ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಿರಿ ಎಂಬ ಎಸ್‍ಎಂಎಸ್ ತಮ್ಮ ಮೊಬೈಲ್‍ಗಳಲ್ಲಿ ಹರಿದಾಡುತ್ತಿದ್ದಂತೆ ಅಮೆರಿಕನ್ನರು ಬೆದರಿ ಹೌಹಾರಿದರು.   ಆದರೆ ಅದಾದ 10 ನಿಮಿಷಗಳ ನಂತರ ಹವಾಯಿ ತುರ್ತು ನಿರ್ವಹಣಾ ಸಂಸ್ಥೆಯು ಟ್ವೀಟ್ ಮಾಡಿ ಹೆದರುವ ಆತಂಕವಿಲ್ಲ ಎಂದು ಸ್ಪಷ್ಟನೆ ನೀಡಿತು. ಹವಾಯಿಗೆ ಯಾವುದೇ ಕ್ಷಿಪಣಿ ದಾಳಿ ಭಯವಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಬೆಳಗ್ಗೆ 8.45ರಲ್ಲಿ ಎರಡನೇ ತುರ್ತು ಸಂದೇಶ ರವಾನೆಯಾಯಿತು. ಇದು ಸುಳ್ಳು ಎಚ್ಚರಿಕೆ. ಹವಾಯಿ ರಾಜ್ಯಕ್ಕೆ ಯಾವುದೇ ಕ್ಷಿಪಣಿ ಆತಂಕ ಅಥವಾ ಅಪಾಯವಿಲ್ಲ ಎಂದು ಆ ಸಂದೇಶದಲ್ಲಿ ತಿಳಿಸಲಾಯಿತು.

ಅಮೆರಿಕದ ಪೆಸಿಫಿಕ್ ಕಮಾಂಡ್ (ಪೆಸಿಫಿಕ್ ಸಾಗರ ರಕ್ಷಣಾ ಸಂಸ್ಥೆ) ಸಹ ಪ್ರತ್ಯೇಕ ಹೇಳಿಕೆ ನೀಡಿ ಹವಾಯಿಗೆ ಯಾವುದೇ ಪ್ರೇಕ್ಷೇಪಕ ಕ್ಷಿಪಣಿ ದಾಳಿಯ ಆತಂಕ ಇಲ್ಲ ಎಂಬುದು ದೃಢಪಟ್ಟಿದೆ. ನಾಗರಿಕರು ಭಯಪಡುವ ಅಗತ್ಯವಿಲ್ಲ. ಈ ಹಿಂದೆ ಕಳುಹಿಸಿದ್ದ ಸಂದೇಶದ ಪ್ರಮಾದದಿಂದ ರವಾನೆಯಾಗಿದೆ ಎಂದು ತಿಳಿಸಿತು.
ಇಂಥ ಎಡವಟ್ಟಿನ ಸಂದೇಶ ರವಾನೆಯಾಗಿ ನಾಗರಿಕರು ಕೆಲಕಾಲ ಆತಂಕಕ್ಕೆ ಒಳಗಾದ ಪ್ರಸಂಗ ಅಲ್ಲಿನ ಆಡಳಿತಕ್ಕೆ ಮುಜುಗರ ಉಂಟು ಮಾಡಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin