ನೋಟ್‍ಬ್ಯಾನ್ ನಿಂದ ಕಂಗಾಲಾಗಿ 100 ಕೋಟಿಗೆ ಸ್ಕೆಚ್ ಹಾಕಿ ಜೈಲು ಸೇರಿದ ಕಿಡ್ನಾಪರ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Kidnap

ಬೆಂಗಳೂರು, ಜ.14- ಯಲಹಂಕದ ಪ್ರತಿಷ್ಠಿತ ವ್ಯಕ್ತಿ ಮಲ್ಲಿಕಾರ್ಜುನಪ್ಪ ಅವರನ್ನು ಅಪಹರಿಸಿದ ಅಪಹರಣಕಾರರು 100 ಕೋಟಿ ಒತ್ತೆ ಹಣಕ್ಕೆ ಬೇಡಿಕೆ ಇಡಲು ನೋಟ್‍ಬ್ಯಾನ್ ಎಫೆಕ್ಟ್ ಕಾರಣ ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ. ಅಪಹರಣಕಾರರಾದ ಕಾಂತರಾಜೇಗೌಡ ಮತ್ತು ರೇಣುಕಾ ಪ್ರಸಾದ್ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದರು. ಜೆಡಿಎಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷೆಯಾಗಿದ್ದ ಅರ್ಷಿಯಾ ಅಲಿ ಕೂಡ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. 500 ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ನಂತರ ಉತ್ತುಂಗದಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮ ಪಾತಾಳಕ್ಕೆ ಕುಸಿದುಬಿದ್ದಿತ್ತು.

Arest--01

ನೋಟ್‍ಬ್ಯಾನ್ ಎಫೆಕ್ಟ್ ಘಟಾನುಘಟಿ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ತಲ್ಲಣಗೊಳಿಸಿತ್ತು. ಅದೇ ರೀತಿ ನೋಟು ನಿಷೇಧದ ನಂತರ ಬೀದಿಗೆ ಬೀಳುವ ಸ್ಥಿತಿಗೆ ಬಂದಿದ್ದ ಕಾಂತರಾಜೇಗೌಡ, ರೇಣುಕಾ ಪ್ರಸಾದ್ ಮತ್ತು ಅರ್ಷಿಯಾ ಅವರು ಮತ್ತೆ ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಬೇಕು ಎಂಬ ಹುಚ್ಚು ಹಠಕ್ಕೆ ಬಿದ್ದಿದ್ದರು. ಈ ಸಂದರ್ಭದಲ್ಲೇ ಅವರ ತಲೆಗೆ ಹೊಳೆದದ್ದು ಪ್ರತಿಷ್ಠಿತ ವ್ಯಕ್ತಿಯನ್ನು ಅಪಹರಿಸಿ ಕೋಟ್ಯಂತರ ರೂಪಾಯಿ ಒತ್ತೆ ಹಣ ಪಡೆದು ಮತ್ತೆ ವ್ಯವಹಾರದಲ್ಲಿ ತೊಡಗಿಕೊಳ್ಳಬೇಕು ಎಂಬುದಾಗಿತ್ತು.

ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ನಡೆಸುತ್ತಿರುವ ಮಲ್ಲಿಕಾರ್ಜುನಪ್ಪ (70) ಅವರು ಯಲಹಂಕದಲ್ಲಿ ಪ್ರತಿಷ್ಠಿತ ವ್ಯಕ್ತಿ. ಅಂತಹ ವ್ಯಕ್ತಿಯನ್ನು ಅಪಹರಿಸಿದರೆ ಕೋಟ್ಯಂತರ ರೂಪಾಯಿ ಒತ್ತೆ ಹಣ ಪಡೆಯಬಹುದು ಎಂಬ ದುರಾಸೆಯಿಂದಲೇ ದುಷ್ಕರ್ಮಿಗಳು ಕಿಡ್ನಾಪ್‍ಗೆ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಕಾರು ಚಾಲಕನಾಗಿದ್ದ ಹೊರಮಾವು ಪ್ರದೀಪ್‍ನ ಸಹಾಯ ಪಡೆದು ಡ್ರಾಪ್ ಕೇಳುವ ನೆಪದಲ್ಲಿ ಕಳೆದ 11ರಂದು ಕೋಗಿಲು ಕ್ರಾಸ್ ಸಮೀಪ ಮಲ್ಲಿಕಾರ್ಜುನಪ್ಪ ಅವರ ಕಾರನ್ನು ಅಡ್ಡಗಟ್ಟಿ ಪಿಸ್ತೂಲ್‍ನಿಂದ ಅವರಿಗೆ ಬೆದರಿಸಿ ಮತ್ತೊಂದು ಕಾರಿನಲ್ಲಿ ಅವರನ್ನು ಅಪಹರಿಸಿಕೊಂಡು ಹೋಗಿ ಚಿಕ್ಕಬಳ್ಳಾಪುರ ಸಮೀಪದ ಅಜ್ಞಾತ ಸ್ಥಳವೊಂದರಲ್ಲಿ ಕೂಡಿ ಹಾಕಿದ್ದರು.

Arest--02

ನಂತರ ಮಲ್ಲಿಕಾರ್ಜುನಪ್ಪ ಅವರ ಪುತ್ರ ಡಾ.ರವಿಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ 100 ಕೋಟಿ ಹಣ ನೀಡದಿದ್ದರೆ ನಿಮ್ಮ ತಂದೆಯನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದರು. ತಮ್ಮ ತಂದೆಯನ್ನು ಹೇಗಾದರೂ ಮಾಡಿ ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಪೊಲೀಸರಿಗೆ ದೂರು ನೀಡದೆ ಸುಮಾರು 60 ಲಕ್ಷ ಒತ್ತೆ ಹಣ ನೀಡಿ ಮಲ್ಲಿಕಾರ್ಜುನಪ್ಪ ಅವರನ್ನು ಬಿಡಿಸಿಕೊಂಡು ಬಂದಿದ್ದರು. ತಮ್ಮ ತಂದೆ ಸೇಫ್ ಆಗಿ ಮನೆ ತಲುಪಿದ ನಂತರ ರವಿಕುಮಾರ್ ಯಲಹಂಕ ಪೊಲೀಸರಿಗೆ ಕಿಡ್ನಾಪ್ ಕುರಿತಂತೆ ದೂರು ನೀಡಿದರು.

ಅಖಾಡಕ್ಕಿಳಿದ ಪೊಲೀಸ್ ಟೀಮ್:

ಪ್ರತಿಷ್ಠಿತ ವ್ಯಕ್ತಿಯನ್ನು ಅಪಹರಿಸಿ 60 ಲಕ್ಷ ಒತ್ತೆ ಹಣ ಪಡೆದು ಬಿಡುಗಡೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷ ಅಧಿಕಾರಿ ಡಿಸಿಪಿ ಗಿರೀಶ್ ತಕ್ಷಣ ಕಾರ್ಯಾಚರಣೆಗಿಳಿದರು. ನಿಷ್ಠಾವಂತ ಅಧಿಕಾರಿಗಳಾದ ಮೂವರು ಎಸಿಪಿ, ಐವರು ಇನ್ಸ್‍ಪೆಕ್ಟರ್‍ಗಳು, ಇಬ್ಬರು ಎಸ್‍ಐ ಮತ್ತು 18 ಮಂದಿ ಪೊಲೀಸರನ್ನೊಳಗೊಂಡ 28 ಮಂದಿಯ ವಿಶೇಷ ತಂಡ ರಚಿಸಿ ಅಖಾಡಕ್ಕಿಳಿಸಿದರು.

ಸುಳಿವು ನೀಡಿದ ಕಾರ್ ನಂಬರ್:

ಕಿಡ್ನಾಪ್ ಪ್ರಕರಣದ ಜಾಡು ಹಿಡಿದು ಹೊರಟ ವಿಶೇಷ ಪೊಲೀಸ್ ತಂಡಕ್ಕೆ ಅಪಹರಣಕಾರರನ್ನು ಬಂಧಿಸಲು ನರವಾದದ್ದೇ ಕಾರ್ ನಂಬರ್..! ಮಲ್ಲಿಕಾರ್ಜುನಪ್ಪ ಅವರನ್ನು ಅಪಹರಿಸಿದ ಕೋಗಿಲು ಕ್ರಾಸ್ ಮತ್ತು ಅವರನ್ನು ಒತ್ತೆ ಇಟ್ಟುಕೊಂಡಿದ್ದ ಚಿಕ್ಕಬಳ್ಳಾಪುರ ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಎರಡೂ ಪ್ರದೇಶಗಳಲ್ಲಿ ಒಂದೇ ಸಂಖ್ಯೆಯ ಕಾರ್ ನಂಬರ್ ಪತ್ತೆಯಾದದ್ದು ಪೊಲೀಸರ ತನಿಖೆಗೆ ದಾರಿಯಾಯಿತು.
ಕಾರ್ ನಂಬರ್ ಬೆನ್ನತ್ತಿದ ಪೊಲೀಸರಿಗೆ ಕಾರ್ ಬಳಕೆ ಮಾಡುತ್ತಿದ್ದದ್ದು ರಿಯಲ್ ಎಸ್ಟೇಟ್ ಉದ್ಯಮಿ ಕಾಂತರಾಜೇಗೌಡ ಎಂಬುದು ತಿಳಿದುಬಂತು. ತಕ್ಷಣ ಕಾರು ಚಾಲಕ ಹೊರಮಾವು ಪ್ರದೀಪ್‍ನನ್ನು ಠಾಣೆಗೆ ಕರೆತಂದು ಪೊಲೀಸ್ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇಡೀ ಕಿಡ್ನಾಪ್ ವಿವರ ಬಯಲಾಯಿತು.

ತಿಂಗಳ ಹಿಂದೆಯೇ ಸ್ಕೆಚ್:
ಹೇಗಾದರೂ ಮಾಡಿ ಹಣ ಸಂಪಾದಿಸಿ ಮತ್ತೆ ಸಮಾಜದಲ್ಲಿ ಉನ್ನತ ವ್ಯಕ್ತಿಗಳಂತೆ ಫೋಜು ನೀಡಲು ತೀರ್ಮಾನಿಸಿದ್ದ ಅಪಹರಣಕಾರರು ಯಲಹಂಕದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿದ್ದ ಮಲ್ಲಿಕಾರ್ಜುನಪ್ಪ ಅವರನ್ನು ಅಪಹರಿಸಲು ಒಂದು ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ದರು.

ದೂರು ನೀಡಿದ 24 ಗಂಟೆಗಳಲ್ಲೇ ಸಿಕ್ಕಿಬಿದ್ದರು:
ಮಲ್ಲಿಕಾರ್ಜುನಪ್ಪ ಅವರ ಪುತ್ರ ಡಾ.ರವಿಕುಮಾರ್ ಅವರಿಂದ 60 ಲಕ್ಷ ಒತ್ತೆ ಹಣ ಪಡೆದಿದ್ದ ಅಪಹರಣಕಾರರು ದುಡ್ಡು ಪಡೆದ ದಿನ ಪೂರ್ತಿ ನಿದ್ದೆ ಮಾಡಿರಲಿಲ್ಲ. ಮರುದಿನ ಮಲ್ಲಿಕಾರ್ಜುನಪ್ಪ ಕುಟುಂಬದವರು ಪೊಲೀಸರಿಗೆ ದೂರು ನೀಡಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ 60 ಲಕ್ಷ ಹಣವನ್ನು ಅಪಹರಣಕಾರರು ಹಂಚಿಕೊಂಡಿದ್ದರು.   ಆದರೆ, ಕೊನೆಗೂ ಗಟ್ಟಿ ಮನಸ್ಸು ಮಾಡಿದ ಮಲ್ಲಿಕಾರ್ಜುನಪ್ಪ ಕುಟುಂಬದವರು ಶುಕ್ರವಾರ ಯಲಹಂಕ ಠಾಣೆಗೆ ದೂರು ನೀಡಲು ಮನಸ್ಸು ಮಾಡಿದರು. ಅವರ ಈ ನಿರ್ಧಾರದಿಂದಲೇ ದೂರು ನೀಡಿದ 24 ಗಂಟೆಗಳಲ್ಲೇ ಅಪಹರಣಕಾರರನ್ನು ಬಂಧಿಸುವಲ್ಲಿ ಡಿಸಿಪಿ ಗಿರೀಶ್ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದೆ.

Facebook Comments

Sri Raghav

Admin