ನ್ಯಾಯಾಂಗ ಬಿಕ್ಕಟ್ಟು ದೊಡ್ಡ ದುರಂತ : ಮಾಜಿ ಪ್ರಧಾನಿ ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Devegowda-02
ಚಿಕ್ಕಮಗಳೂರು, ಜ.14- ದೇಶದಲ್ಲಿ ನ್ಯಾಯಾಂಗ ಬಿಕ್ಕಟ್ಟು ತಲೆದೋರಿರುವುದು ದೊಡ್ಡ ದುರಂತ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದಿಸಿದರು.   ಶೃಂಗೇರಿ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗದಲ್ಲಿ ಪಾಲ್ಗೊಂಡು ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಂಗ ಬಿಕ್ಕಟ್ಟು ತಲೆದೋರಿರುವುದು ದೊಡ್ಡ ದುರಂತ. ಇಂತಹ ಘಟನೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯಬಾರದಿತ್ತು ಎಂದು ಹೇಳಿದರು.

ನಮ್ಮ 55 ವರ್ಷಗಳ ರಾಜಕಾರಣ ಜೀವನದಲ್ಲಿ ಇಂತಹ ಸನ್ನಿವೇಶ ನೋಡುತ್ತೇವೆ ಎಂದು ಊಹೆ ಕೂಡ ಮಾಡಿರಲಿಲ್ಲ. ಇದನ್ನು ಹೇಗೆ ಸರಿಪಡಿಸುತ್ತಾರೊ ಗೊತ್ತಿಲ್ಲ. ಇದರಲ್ಲಿ ಕೇಂದ್ರ ಸರ್ಕಾರದ ಹೊಣೆ ಇದೆ ಎಂದು ಹೇಳಿದರು.  ರಾಜಕೀಯ ಲಾಭಕ್ಕಾಗಿ ಕರಾವಳಿಗಳಲ್ಲಿ ನಡೆಯುತ್ತಿರುವ ಹತ್ಯೆಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ನೇರ ಹೊಣೆಗಾರರು. ನನ್ನ ರಾಜಕಾರಣದಲ್ಲಿ ಪ್ರತ್ಯಾರೋಪ ಮತ್ತು ತೀವ್ರ ರಾಜಕಾರಣವನ್ನು ಈಗ ನೋಡುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.  ಯಾವುದೇ ಪಕ್ಷವನ್ನು ಅವಲಂಬಿಸದೆ ವಿಧಾನಸಭೆ ಚುನಾವಣೆಯಲ್ಲಿ ಸ್ವಂತಬಲದಿಂದ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯ ಎಂದರು.

ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಆಡಳಿತ ನೋಡಿರುವ ಜನತೆ ಬೇಸತ್ತಿದ್ದಾರೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ಗೆ ಒಂದು ಅವಕಾಶ ಕೊಟ್ಟು ನೋಡೋಣ ಎಂಬ ಚಿಂತನೆಯಲ್ಲಿದ್ದಾರೆ ಎಂದು ಹೇಳಿದರು.  ಕುಟುಂಬದ ಒಳತಿಗಾಗಿ ಜ್ಯೋತಿಷಿಗಳ ಸಲಹೆ ಮೇರೆಗೆ ಶೃಂಗೇರಿಯಲ್ಲಿ ಅತಿಮಹಾರುದ್ರ ಯಾಗ ನಡೆಸಲಾಗುತ್ತಿದೆ ಎಂದು ದೇವೇಗೌಡರು ಹೇಳಿದರು.  ನಿಮ್ಮ ಕುಟುಂಬದಲ್ಲಿ ಇಬ್ಬರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂದು ಕೇಳಿದ ಪ್ರಶ್ನಿಗೆ ಉತ್ತರಿಸಿದ ಅವರು, ಆಡಳಿತ ವಿಷಯಕ್ಕೆ ಬಂದರೆ ಇದು ವಿಷಯವೇ ಅಲ್ಲ. ಬರೀ ಕುಟುಂಬ ಕುಟುಂಬ ಎಂದರೆ ನಮ್ಮಪ್ಪನ ಆಸ್ತಿಯೇ ಎಂದು ಮರುಪ್ರಶ್ನಿಸಿದರು.

Facebook Comments

Sri Raghav

Admin