ಮನೆಮುರುಕ ಆನ್‍ಲೈನ್ ಬೆಟ್ಟಿಂಗ್ ನಿಯಂತ್ರಣಕ್ಕೆ ಆಯೋಗ ಶಿಫಾರಸು

ಈ ಸುದ್ದಿಯನ್ನು ಶೇರ್ ಮಾಡಿ

Online-Betting--01
ನವದೆಹಲಿ, ಜ.14-ದೇಶದಲ್ಲಿ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿರುವ ಮನೆಮುರುಕ ಅಕ್ರಮ ಆನ್‍ಲೈನ್ ಬೆಟ್ಟಿಂಗ್(ಸಟ್ಟಾಬಾಜಿ) ದಂಧೆಯನ್ನು ನಿಯಂತ್ರಿಸಲು ಕಾನೂನು ಆಯೋಗ ಮುಂದಾಗಿದ್ದು, ಇದಕ್ಕಾಗಿ ಹಲವಾರು ನಿಯಮ-ನಿಬಂಧನೆಗಳನ್ನು ಶಿಫಾರಸು ಮಾಡಲಿದೆ. ತಮ್ಮ ಆರ್ಥಿಕ ಸಾಮಥ್ರ್ಯ ಮೀರಿ ಅಧಿಕ ಬೆಟ್ಟಿಂಗ್‍ಗಳನ್ನು ಮಾಡಿ ತಮ್ಮ ಎಲ್ಲ ಹಣ ಮತ್ತು ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಜನರು ಬೀದಿಪಾಲಾಗುವುದನ್ನು ತಪ್ಪಿಸಲು ನಿಯಮ ಮತ್ತು ನಿಬಂಧನೆಗಳನ್ನು ಜಾರಿಗೊಳಿಸಲು ಆಯೋಗ ಉದ್ದೇಶಿಸಿದೆ.

ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿಗೆ ಮೂರು ಬೆಟ್ಟಿಂಗ್‍ಗಳಿಗಿಂತ ಹೆಚ್ಚು ಬಾರಿ ಅವಕಾಶ ನೀಡದಿರುವ ಕಟ್ಟುನಿಟ್ಟಿನ ನಿಬಂಧನೆಯೂ ಇದರಲ್ಲಿದೆ. ಎಫ್‍ಐಸಿಸಿಐ 2013ರಲ್ಲಿ ಸಲ್ಲಿಸಿರುವ ವರದಿಯಂತೆ, ಭಾರತದಲ್ಲಿ ಅಂದಾಜು 3 ಲಕ್ಷ ಕೋಟಿ ರೂ. ಮೌಲ್ಯದ ಅಕ್ರಮ ಮತ್ತು ಭೂಗತ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಆನ್‍ಲೈನ್ ಬೆಟ್ಟಿಂಗ್‍ನನ್ನು ಹತೋಟಿಗೆ ತರಲು ಕಾನೂನು ಆಯೋಗ ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕಾಗಿ ಸೂಕ್ತ ಶಿಫಾರಸುಗಳನ್ನು ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆನ್‍ಲೈನ್ ಬೆಟ್ಟಿಂಗ್‍ನನ್ನು ಸಂಪೂರ್ಣ ನಿಷೇಧಿಸಬೇಕೆಂಬುದು ನನ್ನ ಇಚ್ಚೆ. ಆದರೆ, ಅದು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಾಗುವುದಿಲ್ಲ. ಹೀಗಾಗಿ ಕಟ್ಟುನಿಟ್ಟಿನ ನಿಯಮ ಮತ್ತು ನಿಬಂಧನೆಗಳನ್ನು ಜಾರಿಗೊಳಿಸಲು ನಾವು ಉದ್ದೇಶಿಸಿದ್ದೇವೆ. ಇದೊಂದು ವ್ಯಸನವಾಗುತ್ತಿದ್ದು, ಅನೇಕ ಜನರು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ ಮತ್ತು ಕಳೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ.

ಆನ್‍ಲೈನ್ ಬೆಟ್ಟಿಂಗ್‍ನಲ್ಲಿ ಜನರಿಗೆ ಆಸಕ್ತಿ ಇದ್ದರೆ ಲೈಸನ್ಸ್ ಪಡೆದ ಆಪರೇಟರ್‍ಗಳ ಮೂಲಕವೇ ಸಟ್ಟಾಬಾಜಿ ಹಣ ಪಾವತಿಸಬೇಕು. ಆಪರೇಟರ್‍ಗಳು ಬೆಟ್ಟಿಂಗ್ ಮಾಡುವ ವ್ಯಕ್ತಿಯಿಂದ ಆತನ ಆದಾಯ ಮತ್ತು ಒಟ್ಟು ಆಸ್ತಿ ಇತರ ಮಾಹಿತಿಗಳನ್ನು ಪಡೆಯಬೇಕು. ಅದರ ಆಧಾರದ ಮೇಲೆ ಆತನಿಗೆ ಅಧಿಕ ಅಥವಾ ಕಡಿಮೆ ಮೊತ್ತದ ಬೆಟ್ಟಿಂಗ್‍ಗೆ ಅವಕಾಶ ನೀಡಬೇಕು- ಇಂಥ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ನಾವು ಶಿಫಾರಸು ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ಆರ್ಥಿಕ ಸಾಮಥ್ರ್ಯ ಮೀರಿ ಅಧಿಕ ಬೆಟ್ಟಿಂಗ್‍ಗಳನ್ನು ಮಾಡಿ ತಮ್ಮ ಎಲ್ಲ ಹಣ ಮತ್ತು ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಜನರು ಬೀದಿಪಾಲಾಗುವುದನ್ನು ತಪ್ಪಿಸಲು ನಿಯಮ ಮತ್ತು ನಿಬಂಧನೆಗಳನ್ನು ಜಾರಿಗೊಳಿಸಲು ಆಯೋಗ ಉದ್ದೇಶಿಸಿದೆ. ಇದಕ್ಕಾಗಿ ಅಧಿಕ ಮೊತ್ತ ಮತ್ತು ಕಡಿಮೆ ಮೊತ್ತದ ಬೆಟ್ಟಿಂಗ್‍ನನ್ನು ನಿಗದಿಗೊಳಿಸಲಾಗುತ್ತದೆ.   ಆದಾಯ ತೆರಿಗೆ ಕಾನೂನು ವ್ಯಾಪ್ತಿಗೆ ಒಳಪಡದ ಮಂದಿಯನ್ನು ಯಾವುದೇ ಕಾರಣಕ್ಕೂ ಬೆಟ್ಟಿಂಗ್‍ನಲ್ಲಿ (ಕಡಿಮೆ ಮೊತ್ತದ ಬೆಟ್ಟಿಂಗ್‍ನಲ್ಲೂ ಕೂಡ) ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಕುದುರೆ ರೇಸ್ ಹೊರತುಪಡಿಸಿ ಕ್ರೀಡೆಗಳ ಬೆಟ್ಟಿಂಗ್ ಮಾಡುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೂ ಅಸಂಘಟಿತ ಮತ್ತು ಭೂಗತ ರೀತಿಯಲ್ಲಿ ಇದು ಅಕ್ರಮವಾಗಿ ನಡೆಯುತ್ತಿವೆ. ಕ್ರಿಕೆಟ್ ಸಟ್ಟಾಬಾಜಿ ಕುರಿತ ಬಿಸಿಸಿಐಗೆ ಸಂಬಂಧಪಟ್ಟ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಈಗಾಗಲೇ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಭಾರತದಲ್ಲಿ ಕ್ರಿಕೆಟ್ ಬೆಟ್ಟಿಂಗ್‍ನನ್ನು ಕಾನೂನುಬದ್ಧಗೊಳಿಸಬಹುದೇ ಅಥವಾ ಬೇಡವೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಕಾನೂನು ಆಯೋಗಕ್ಕೆ 2016ರಲ್ಲಿ ಸುಪ್ರೀಂ ಸೂಚಿಸಿದೆ.

Facebook Comments

Sri Raghav

Admin