ಶಿಕ್ಷಕರ ವರ್ಗಾವಣೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Transfer--01

ಬೆಂಗಳೂರು, ಜ.14-ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು, ಅರ್ಜಿ ಸಲ್ಲಿಸಲು ಜ.20ರವರೆಗೆ ದಿನಾಂಕ ವಿಸ್ತರಿಸಲಾಗಿದೆ.   ಹಲವಾರು ಶಿಕ್ಷಕರು ಮತ್ತು ಶಿಕ್ಷಣ ಸಂಘಟನೆಗಳು ಸಲ್ಲಿಸಿದ ಕೋರಿಕೆಯ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು 20 ರವರೆಗೆ ಅವಕಾಶ ಮಾಡಿಕೊಡಲಾಗಿರುತ್ತದೆ. ಸದರಿ ಆನ್‍ಲೈನ್ ಅರ್ಜಿ ಸ್ವೀಕಾರದ ನಂತರ ದಾಖಲೆಗಳ ಪರಿಶೀಲನೆಗೆ ಒಂದು ತಿಂಗಳ ಕಾಲಾವಧಿಯ ಅವಶ್ಯಕತೆ ಇರುತ್ತದೆ. ಅಂದರೆ, ಫೆ. 20ರವರೆಗೆ ದಾಖಲೆಗಳ ಪರಿಶೀಲನಾ ಕಾರ್ಯ ನಡೆಯಲಿದೆ.

ನಂತರ ಕೌನ್ಸಿಲಿಂಗ್ ಕಾರ್ಯವನ್ನು ಮುಗಿಸಲು ಒಂದು ತಿಂಗಳ ಅವಶ್ಯಕತೆ ಇರುತ್ತದೆ. ಅಂದರೆ ಸಂಪೂರ್ಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಮಾ.20 ರವರೆಗೆ ಕಾಲಾವಕಾಶ ಬೇಕಾಗುತ್ತದೆ. ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಶಿಕ್ಷಣ ಸಮುದಾಯದ ಮತ್ತು ಶಿಕ್ಷಕರ ಕುಟುಂಬದ ಹಿತದೃಷ್ಟಿಯಿಂದ, ವರ್ಗಾವಣೆಗೊಳ್ಳುವ ಶಿಕ್ಷಕರನ್ನು ವರ್ಗಾವಣೆಗೊಂಡ ಸ್ಥಳಕ್ಕೆ ಜೂನ್-1, ರಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ನೀಡಲಾಗುವುದು.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿರುವುದಿಲ್ಲ ಹಾಗೂ ಒಟ್ಟಾರೆ ವರ್ಗಾವಣೆ ಪ್ರಕ್ರಿಯೆ ಏಪ್ರಿಲ್ -2018 ರೊಳಗೆ ಮುಗಿಸಿ, ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಕಾರ್ಯಕ್ಕೆ ಯಾವುದೇ ರೀತಿಯಲ್ಲಿಯೂ ಅನಾನುಕೂಲವಾಗದ ರೀತಿಯಲ್ಲಿ ಹಾಗೂ ಶಿಕ್ಷಕರು ಮತ್ತು ಅವರ ಕುಟುಂಬದ ಹಿತರಕ್ಷಣೆಯಾಗುವ ರೀತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin