ಸಹದ್ಯೋಗಿಯನ್ನು ಕೊಲ್ಲಲು ರೌಡಿಗೆ 25 ಲಕ್ಷ ಸುಪಾರಿ ನೀಡಿದ್ದ ಎಎಸ್‍ಐ..!

ಈ ಸುದ್ದಿಯನ್ನು ಶೇರ್ ಮಾಡಿ

Police--01
ಗುರುಗಾಂವ್, ಜ.14-ತನ್ನ ಸಹೋದ್ಯೋಗಿ ಹತ್ಯೆಗೆ ಸಹಾಯಕ ಪೊಲೀಸ್ ಸಹಾಯಕ ಸಬ್-ಇನ್ಸ್‍ಪೆಕ್ಟರ್ ಒಬ್ಬರು ರೌಡಿಯೊಬ್ಬನಿಗೆ 25 ಲಕ್ಷ ರೂ.ಗಳ ಸುಪಾರಿ ಕೊಟ್ಟ ಆತಂಕಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಘಟನೆಯಿಂದ ಪೊಲೀಸ್ ಇಲಾಖೆ ತಲ್ಲಣಗೊಂಡಿದೆ. ಈ ಪ್ರಸಂಗವು ಕರ್ನಾಟಕದ ಹಿರಿಯ ಪತ್ರಕರ್ತ ರವಿಬೆಳಗೆರೆ ತನ್ನ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಅವರನ್ನು ಹತ್ಯೆ ಮಾಡಲು ಹಂತಕನೊಬ್ಬನಿಗೆ ಸುಪಾರಿ ನೀಡಿದ್ದರೆನ್ನಲಾದ ಪ್ರಕರಣವನ್ನು ನೆನಪಿಗೆ ತರುತ್ತದೆ.

ಹಲವಾರು ಗಂಭೀರ ಕೃತ್ಯಗಳಲ್ಲಿ ಶಾಮೀಲಾಗಿ ಗುರುಗಾಂವ್ ಪೊಲೀಸರ ವಶದಲ್ಲಿರುವ ಕುಖ್ಯಾತ ರೌಡಿ ಸುರೇಂದರ್ ಅಲಿಯಾಸ್ ಸುಂಡಾನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ನೀಡಿದ ಕೆಲವು ರಹಸ್ಯ ಮಾಹಿತಿಗಳು ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ. ಗುರುಗಾಂವ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‍ಪೆಕ್ಟರ್ (ಪ್ರಸ್ತುತ ಅಮಾನತ್ತಿನಲ್ಲಿದ್ದಾರೆ) ರಾಜ್‍ಸಿಂಗ್, ಸಿಟಿ ಕ್ರೈಂ ಯೂನಿಟ್ ನಂಬರ್-9ರ ಉಸ್ತುವಾರಿ ಅಧಿಕಾರಿ(ಇನ್ಸ್‍ಪೆಕ್ಟರ್) ರಾಜ್‍ಕುಮಾರ್ ಅವರನ್ನು ಕೊಲ್ಲಲು ತನಗೆ 25 ಲಕ್ಷ ರೂ.ಗಳ ಸುಪಾರಿ ನೀಡಿದ್ದಾರೆ. ಆ ಮೊತ್ತವನ್ನು ತಾನು ಸ್ವೀಕರಿಸಿದ್ಧಾಗಿ ರೌಡಿ ಸುಂಡಾ ವಿಚಾರಣೆ ವೇಳೆ ಹೇಳಿದ್ದಾನೆ.

ಸುಂಡಾ ಹೇಳಿಕೆಯಿಂದ ತಲ್ಲಣಗೊಂಡ ಪೊಲೀಸರು ಉನ್ನತ ಮಟ್ಟದ ತನಿಖೆಯನ್ನು ಆರಂಭಿಸಿದ್ದು, ಎಎಸ್‍ಐ ರಾಜ್‍ಸಿಂಗ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸುಂಡಾನನ್ನು ಪ್ರಸ್ತುತ ಫರೀದಾಬಾದ್‍ನ ನೀಮ್ಕಾ ಜೈಲಿನಲ್ಲಿ ಇರಿಸಲಾಗಿದೆ. ಹಫ್ತಾ ವಸೂಲಿ ಪ್ರಕರಣದಲ್ಲಿ ಕಸ್ಟಡಿ ವಿಚಾರಣೆಗಾಗಿ ಜ.11ರಂದು ಗುರ್‍ಗಾಂವ್ ಪೊಲೀಸರು ಸುಂಡಾನನ್ನು ಕರೆ ತಂದಿದ್ದರು. ತೀವ್ರ ವಿಚಾರಣೆ ಸಂದರ್ಭದಲ್ಲಿ ಈ ರೋಚಕ ಸುದ್ದಿಯನ್ನು ಆತ ಬಹಿರಂಗಗೊಳಿಸಿದ.   ಮತ್ತೊಬ್ಬ ಕುಪ್ರಸಿದ್ಧ ರೌಡಿ ಮಂಜೀತ್ ಮಹಲ್ ಎಂಬಾತನೊಂದಿಗೆ ಸಖ್ಯ ಬೆಳಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‍ಐ ಸಿಂಗ್‍ನನ್ನು ಕೆಲವು ವಾರಗಳ ಹಿಂದೆ ಅಮಾನತುಗೊಳಿಸಲಾಗಿದೆ.

ನಾನು 2015ರಲ್ಲಿ ಗುರುಗಾಂವ್‍ನ ಭೋಂಡ್ಸಿ ಜೈಲಿನಲ್ಲಿದ್ದಾಗ ಎಎಸ್‍ಐ ಸಿಂಗ್ ಅಕ್ರಮ ಆಸ್ತಿ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದರು. ಆ ಸಂದರ್ಭದಲ್ಲಿ ಅವರು ಇನ್ಸ್‍ಪೆಕ್ಟರ್ ರಾಜ್‍ಕುಮಾರ್ ಅವರನ್ನು ಮುಗಿಸಲು ನನಗೆ 25 ಲಕ್ಷ ರೂ.ಗಳ ಸುಪಾರಿ ನೀಡಿದ್ದರು. ಕೆಲವು ದಿನಗಳ ನಂತರ ಇಬ್ಬರೂ ಜೈಲಿನಿಂದ ಹೊರ ಬಂದೆವು. ಸಿಂಗ್ ನನಗೆ 15 ಲಕ್ಷ ರೂ. ಮುಂಗಡ ಪಾವತಿಸಿದರು. ಇದರಲ್ಲಿ ನನ್ನ ಕುಟುಂಬಕ್ಕೆ 10 ಲಕ್ಷ ರೂ.ಗಳು ಹಾಗೂ ರಾಜ್‍ಕುಮಾರ್ ಅವರನ್ನು ಹತ್ಯೆ ಮಾಡುವ ಇಬ್ಬರು ಶಾರ್ಪ್‍ಶೂಟರ್‍ಗಳಿಗೆ(ನಿಖರ ಗುರಿಕಾರ ಹಂತಕರು) ತಲಾ 2.5 ಲಕ್ಷ ರೂ.ಗಳು ಎಂದು ಅವರು ತಿಳಿಸಿದ್ದರು, ನಂತರ ಬಾಕಿ 10 ಲಕ್ಷ ರೂ.ಗಳನ್ನು ಪಾವತಿಸಿದ್ದರು ಎಂದು ರೌಡಿ ಸುಂಡಾ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

ಸಿಂಗ್ ಅವರು ಇನ್ಸ್‍ಪೆಕ್ಟರ್ ಕುಮಾರ್ ಅವರ ಫೋಟೋ ಮತ್ತು ವಿಳಾಸ ನೀಡಿದ್ದರು. ಆದರೆ ಬಿಟ್ಟು ಎಂಬ ಶಾರ್ಪ್‍ಶೂಟರ್ ಹಿಂದಕ್ಕೆ ಸರಿದ. ಮತೊಬ್ಬ ಶಾರ್ಪ್ ಶೂಟರ್ ಹತ್ಯೆ ಯತ್ನದಲ್ಲಿ ನಾಲ್ಕು ಬಾರಿ ವಿಫಲನಾದ ಎಂದು ಸುಂಡಾ ತಿಳಿಸಿದ್ದಾನೆ.  ವೃತ್ತಿ ಮಾತ್ಸರ್ಯವೇ ಈ ಹತ್ಯೆ ಯತ್ನಕ್ಕೆ ಕಾರಣವೆನ್ನಲಾಗಿದೆ.
ಆದರೆ, ಈ ಆರೋಪವನ್ನು ಎಎಸ್‍ಐ ಸಿಂಗ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಾನು ವಿಚಾರಣಾಧೀನ ಕೈದಿಯಾಗಿದ್ದಾಗ ಸುಂಡಾನನ್ನು ಭೇಟಿ ಮಾಡಲೇ ಇಲ್ಲ. ನನ್ನ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳು ಪಿತೂರಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ರೋಚಕ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.
.

Facebook Comments

Sri Raghav

Admin