ಸುಪ್ರೀಂಕೋರ್ಟ್ ಜಡ್ಜ್‍ಗಳ ಜೊತೆ ಬಿಸಿಐ ಸಂಧಾನ ಮಾತುಕತೆ

Supreme-Court--02
ನವದೆಹಲಿ, ಜ.14-ಸುಪ್ರೀಂಕೋರ್ಟ್‍ನಲ್ಲಿ ಉದ್ಭವಿಸಿರುವ ಬಿಕ್ಕಟ್ಟು ನಿವಾರಣೆಗೆ ಮುಂದಾಗಿರುವ ಭಾರತ ವಕೀಲರ ಪರಿಷತ್ತು(ಬಾರ್ ಕೌನ್ಸಿಲ್ ಆಫ್ ಇಂಡಿಯಾ-ಬಿಸಿಐ) ನಿಯೋಗ ಇಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಭೇಟಿಯಾಗಿ ಸಂಧಾನ ಮಾತುಕತೆ ನಡೆಸಿತು. ಪರಿಷತ್ತಿನ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ನೇತೃತ್ವದ ಏಳು ಸದಸ್ಯರ ನಿಯೋಗವು ದೆಹಲಿಯಲ್ಲಿರುವ ಹಿರಿಯ ನ್ಯಾಯಾಧೀಶ ನ್ಯಾ. ಚಮಲೇಶ್ವರ್ ನಿವಾಸಕ್ಕೆ ತೆರಳಿ ಸೌಹಾರ್ದಯುತ ಸಂಧಾನ ಮಾತುಕತೆ ನಡೆಸಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಬಾರ್ ಕೌನ್ಸಿಲ್ ನಿಯೋಗವು ಸುಪ್ರೀಂಕೋರ್ಟ್‍ನ ಇತರ ನ್ಯಾಯಾಧೀಶರನ್ನು ಭೇಟಿ ಮಾಡಿ ಬಿಕ್ಕಟ್ಟು ಇತ್ಯರ್ಥ ಕುರಿತು ಗಹನವಾದ ಚರ್ಚೆ ನಡೆಸಿತು. ಇಂದು ಸಂಜೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೂ ಭೇಟಿ ಮಾಡಿ ಸಂಧಾನ ಮಾತುಕತೆ ನಡೆಸಲಿದೆ. ಮುಖ್ಯ ನ್ಯಾಯಾಮೂರ್ತಿ ದೀಪಕ್ ಮಿಶ್ರಾ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಈ ಬಿಕ್ಕಟ್ಟು ನಿವಾರಣೆಯಾಗುವ ಆಶಾಭಾವನೆ ವ್ಯಕ್ತವಾಗಿದೆ. ಸುಪ್ರೀಂಕೋರ್ಟ್‍ನಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ಆರೋಪಿಸಿ ಮುಖ್ಯ ನ್ಯಾಯಮೂರ್ತಿ ವಿರುದ್ಧ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿಯಲ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ನಂತರ ಉದ್ಭವಿಸಿದ ಬಿಕ್ಕಟ್ಟು ನಿವಾರಣೆಗಾಗಿ ನಿನ್ನೆ ಸಪ್ತ ಸದಸ್ಯರ ನಿಯೋಗವೊಂದನ್ನು ಬಿಸಿಐ ರಚಿಸಿತ್ತು.

Facebook Comments

Sri Raghav

Admin