ಮಹದಾಯಿ ನೀರಿನ ಹಕ್ಕಿಗಾಗಿ ಹೋರಾಟ : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda-2

ಬೆಂಗಳೂರು, ಜ.15- ಮಹದಾಯಿ ನದಿ ನೀರು ಹಕ್ಕನ್ನು ಕಾಪಾಡಲು ಹೋರಾಟ ಮಾಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಜತೆಗೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಮಧ್ಯ ಪ್ರವೇಶಿಸಬೇಕೆಂದು ಕೋರುವುದಾಗಿ ತಿಳಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿವಾದವೇ ಬೇರೆ. ಮಹದಾಯಿ ವಿವಾದವೇ ಬೇರೆ. ಕಾವೇರಿ ವಿಚಾರದಲ್ಲಿ ನ್ಯಾಯಾಧಿಕರಣದ ತೀರ್ಪು ಬಂದಿದೆ. ಆದರೆ, ಮಹದಾಯಿ ವಿವಾದದಲ್ಲಿ ನ್ಯಾಯಾಧಿಕರಣದ ತೀರ್ಪು ಬಂದಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ನ್ಯಾಯಾಧಿಕರಣ, ನ್ಯಾಯಾಧೀಶರು ಇದರಲ್ಲಿ ಯಾರ ವಿರುದ್ಧ ಹೋರಾಟ ಮಾಡುವುದು ಎಂದು ಪ್ರಶ್ನಿಸಿದರು. ಪದೇ ಪದೇ ಪ್ರಧಾನಿಯವರಿಗೆ ಮನವಿ ಮಾಡುತ್ತಿದ್ದರೂ ಆಸಕ್ತಿ ವಹಿಸದೆ ಯಾವ ಕಾರಣಕ್ಕೆ ಮೌನ ತಾಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೂ ಜೆಡಿಎಸ್‍ಗೆ ಅಧಿಕಾರವಿರಲಿ, ಇಲ್ಲದಿರಲಿ ನಮ್ಮ ಪಕ್ಷ ರಾಜ್ಯದ ಹಿತಕ್ಕಾಗಿ ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದರು.

ಜೆಡಿಎಸ್‍ನ ಹಳೆ ಕಚೇರಿ ಕೈ ತಪ್ಪಿ ಹೋದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್ ಸತ್ತು ಹೋಯಿತು, ಇನ್ನು ತಲೆ ಎತ್ತಿ ನಿಲ್ಲಲು ಆಗುವುದಿಲ್ಲ ಎಂದಿದ್ದರು. ಜೆಡಿಎಸ್‍ನಿಂದ ಬೆಳೆದಿದ್ದ ಅವರಿಗೆ ಕಾಂಗ್ರೆಸ್ ಬೆಂಬಲ ಅನಿವಾರ್ಯವಾಗಿತ್ತು. ಮುಂದಿನ ಮೂರೂವರೆ ತಿಂಗಳಲ್ಲಿ ಏನಾಗುತ್ತದೆಯೋ ನೋಡೋಣ. ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರ ಸೇರ್ಪಡೆಯಿಂದ ಪಕ್ಷದ ಬಲ ಹೆಚ್ಚಿದೆ ಎಂದು ತಿಳಿಸಿದರು. ಚುನಾವಣಾ ಪೂರ್ವ ಸಮೀಕ್ಷೆಗಳು ಏನೇ ನೀಡಲಿ ಮಾರ್ಚ್‍ವರೆಗೂ ಕಾದು ನೋಡಿ, ಜೆಡಿಎಸ್ ಯಾವ ಮಟ್ಟಕ್ಕೆ ಹೋಗುತ್ತದೆ ಎಂದು ನಿಮಗೇ ತಿಳಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಜೆಡಿಎಸ್‍ಅನ್ನು ಅಪ್ಪ-ಮಕ್ಕಳ ಪಕ್ಷ ಎಂದು ಟೀಕಿಸುತ್ತಿದ್ದ ಸಿದ್ದರಾಮಯ್ಯ ಅವರೇ ಅಪ್ಪ-ಮಕ್ಕಳ ಸ್ಪರ್ಧೆಗೆ ಮುಂದಾಗುತ್ತಿಲ್ಲವೆ ಎಂದು ಪ್ರಶ್ನಿಸಿದ ದೇವೇಗೌಡರು ಅವರಿಗೆ ಕಾಂಗ್ರೆಸ್ ತೊರೆದರೆ ಕಷ್ಟವಿದೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಸಿದ್ದರಾಮಯ್ಯ ಸರ್ಕಾರದ ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ, ನಮಗೆ ಮುಂದಿನ ವಿಧಾನಸಭೆ ಚುನಾವಣೆ ನಂತರ ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ ಯಾರ ಬೆಂಬಲವೂ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಯಾವತ್ತೂ ಕೂಡ ಹಿಂದುಳಿದವರನ್ನು ಬಿಟ್ಟಿಲ್ಲ, ಅವರ ರಕ್ಷಣೆಗೆ ನಿಂತಿದೆ ಗೌಡರು ನುಡಿದರು.   ರಾಜ್ಯದ ಅಭಿವೃದ್ಧಿ ಪರ ನಿರ್ಧಾರ: ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಗಾಗಿ ಬಿಜೆಪಿ ತೊರೆದು ಜೆಡಿಎಸ್ ಸೇರಬೇಕಾಯಿತು ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ತಿಳಿಸಿದರು. ವಿದ್ಯುಕ್ತವಾಗಿ ಜೆಡಿಎಸ್ ಸೇರ್ಪಡೆಯಾದ ನಂತರ ಮಾತನಾಡಿದ ಅವರು, ಉತ್ತರ ಕರ್ನಾಟಕ ಹಿಂದುಳಿದ ಜಿಲ್ಲೆ ಮತ್ತು ಶಾಂತಿಪ್ರಿಯ ಜಿಲ್ಲೆಯಾಗಿದ್ದರೂ ಇತ್ತೀಚೆಗೆ ಶಾಂತಿ ಕದಡುವ ಪ್ರಯತ್ನವಾಗುತ್ತಿದೆ. 400ಕ್ಕೂ ಹೆಚ್ಚು ಯುವಕರ ಮೇಲೆ ಕೇಸುಗಳನ್ನು ದಾಖಲಿಸಲಾಗಿದೆ. ಯುವಕರಿಗೆ ಕತ್ತಿ, ತಲ್ವಾರ್ ಕೊಡುವವರಿದ್ದಾರೆ. ಪ್ರಚೋದನಾಕಾರಿ ಭಾಷಣ ಮಾಡುವವರೇ ಇಂತಹ ಆಯುಧಗಳನ್ನು ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಯುವಕರಿಗೆ ಕೆಲಸ ಕೊಡುವ ಕಾರ್ಯ ಹಾಗೂ ಜಾತ್ಯತೀತ ನಿಲುವು ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಜೆಡಿಎಸ್ ಸೇರಿರುವುದಾಗಿ ಹೇಳಿದರು. ಬಿಜೆಪಿಯಲ್ಲಿ ಬಹಳಷ್ಟು ನೋವು ಅನುಭವಿಸಿದ್ದರಿಂದ ಪಕ್ಷ ಬಿಡಬೇಕಾದ ಪರಿಸ್ಥಿತಿ ಎದುರಾಯಿತು ಎಂದು ತಿಳಿಸಿದರು.

Facebook Comments

Sri Raghav

Admin