ಮಹದಾಯಿ ಹೆಸರಲ್ಲಿ ಉದಯವಾಗುತ್ತಿರುವ ‘ಜನಸಾಮಾನ್ಯರ ಪಕ್ಷ’ಕ್ಕೆ ಮಿಶ್ರ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

Janasamanyara-Paksha
ಬೆಂಗಳೂರು, ಜ.15-ಮಹದಾಯಿ ನೀರು ಪಡೆಯಲು ಕಳೆದ ಮೂರು ದಶಕಗಳಿಂದ ನಡೆಸುತ್ತಿರುವ ಹೋರಾಟ ವಿಫಲವಾದ ಹಿನ್ನೆಲೆಯಲ್ಲಿ ಮಹದಾಯಿಗಾಗಿ ಇಂದು ಉದಯವಾಗುತ್ತಿರುವ ಜನಸಾಮಾನ್ಯರ ಪಕ್ಷ ಸಂಬಂಧ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಮೂರು ದಶಕಗಳ ಹೋರಾಟಕ್ಕೆ ಯಾವುದೇ ಫಲ ಸಿಕ್ಕಿಲ್ಲ. ಯಾವುದೇ ರಾಜಕೀಯ ಪಕ್ಷಗಳಿಂದ ಉತ್ತರ ಕರ್ನಾಟಕ ಭಾಗದ ಜನರ ನೀರಿನ ಬವಣೆ ನೀಗಿಸಲು ಸಾಧ್ಯವಾಗಿಲ್ಲ. ಈ ಭಾಗದ ರೈತರ ಗೋಳು ಕೇಳುವವರಿಲ್ಲ. ಅದಕ್ಕಾಗಿ ನಾವೇ ಒಂದು ಪಕ್ಷ ಕಟ್ಟಿ ಆ ಮೂಲಕ ನಮ್ಮ ಹೋರಾಟ, ನಮ್ಮ ಸಮಸ್ಯೆಗಳ ಪರಿಹಾರ ಕಂಡುಕೊಳ್ಳೋಣ ಎಂಬ ನಿಟ್ಟಿನಲ್ಲಿ ಡಾ.ಅಯ್ಯಪ್ಪ ಎಂಬುವರ ನೇತೃತ್ವದಲ್ಲಿ ಜನಸಾಮಾನ್ಯರ ಪಕ್ಷ ಎಂಬ ರಾಜಕೀಯ ಪಕ್ಷವೊಂದು ಇಂದು ಅಸ್ತಿತ್ವಕ್ಕೆ ಬರಲಿದ್ದು, ಈ ಸಂಬಂಧ ರೈತ ಪರ ಹೋರಾಟಗಾರರು, ಈ ಭಾಗದ ಜನಪ್ರತಿನಿಧಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವರು ಪರಿಸ್ಥಿತಿಯ ಲಾಭ ಪಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಕೆಲವು ಮಹದಾಯಿ ಹೋರಾಟಗಾರರು ಆರೋಪಿಸಿದ್ದಾರೆ. ಇನ್ನು ಕೆಲವರು ಯಾರಾದರೂ ಏನಾದರೂ ಮಾಡಲಿ. ನಮ್ಮ ಭಾಗ್ಕೆ ನೀರು ತಂದು ಕೊಡಲಿ ಎಂದು ಹೇಳಿದ್ದಾರೆ. ಇನ್ನು ಹಲವರು ತಟಸ್ಥ ನಿಲುವು ಹೊಂದಿದ್ದಾರೆ. ಮತ್ತೆ ಕೆಲವರು ಯಾರ್ಯಾರು ಏನೇನು ಮಾಡುತ್ತಾರೆ ಎಂದು ಕಾದು ನೋಡೋಣ. ನಮಗಂತೂ ಇಲ್ಲಿ ಕುಡಿಯುವ ನೀರಿಲ್ಲ. ಆದರೆ ಹೋರಾಟಕ್ಕೆ, ರ್ಯಾಲಿಗೆ, ಸಮಾವೇಶಕ್ಕೆ, ಸಮಾರಂಭಕ್ಕೆ ಮಾತ್ರ ಬರವಿಲ್ಲದಂತಾಗಿದೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಇಂದು ಘೋಷಣೆಯಾಗುತ್ತಿರುವ ಜನಸಾಮಾನ್ಯರ ಪಕ್ಷ ಎಂಬ ಹೊಸ ಪಕ್ಷಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅದರಲ್ಲಿ ನಾವು ಪಾಲ್ಗೊಳ್ಳುತ್ತಿಲ್ಲ, ಅದಕ್ಕೆ ನಮ್ಮ ಬೆಂಬಲವಿಲ್ಲ ಎಂದು ಮಹದಾಯಿ ಹೋರಾಟಗಾರರಾದ ಶಂಕರಪ್ಪ ಅಂಬಲಿ, ವೀರೇಶ್ ಸೊಬರದ ಮಠ ಸ್ಪಷ್ಟಪಡಿಸಿದ್ದಾರೆ.  ಈ ಸಂಜೆಯೊಂದಿಗೆ ಮಾತನಾಡಿರುವ ಅವರು, ಹೋರಾಟದ ದಿಕ್ಕು ತಪ್ಪಿಸುವ ಹುನ್ನಾರವಿದ್ದಂತಿದೆ. ಆದರೆ ಈ ಹೊಸ ಪಕ್ಷದಿಂದ ಒಳ್ಳೆಯದಾಗುವುದಾದರೆ ನಮ್ಮ ಅಭ್ಯಂತರವಿಲ್ಲ. ಇದಕ್ಕೆ ನಾವು ಪರವೂ ಇಲ್ಲ, ವಿರೋಧವೂ ಇಲ್ಲ. ಉತ್ತರ ಕರ್ನಾಟಕ ಭಾಗದ ಜನ ಎರಡೂ ಕಣ್ಣಿಲ್ಲದಂತಿದ್ದೇವೆ. ಯಾರಾದರೂ ಆಗಲಿ ನಮಗೆ ಕಣ್ಣು ನೀಡಲಿ ಎಂದು ಹೇಳಿದರು.

ನಮ್ಮ ಹೋರಾಟದಲ್ಲಿ ಯಾವುದೇ ರಾಜೀ ಇಲ್ಲ, ಯಾವುದೇ ರಾಜಕೀಯವೂ ಇಲ್ಲ. ನಾವು ನಮ್ಮ ಜೀವನವನ್ನೇ ಈ ಹೋರಾಟಕ್ಕಾಗಿ ತ್ಯಾಗ ಮಾಡಿದ್ದೇವೆ. ನಮ್ಮ ಭಾಗದ ಜನರಿಗೆ ನೀರು ಬೇಕು. ಸಮಸ್ಯೆ ಬಗೆಹರಿಯಬೇಕು. ಇದೇ ನಮ್ಮ ಉದ್ದೇಶ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೆಲವೊಂದು ಸಂಘಟನೆಗಳು, ಹೋರಾಟಗಾರರು ತಲೆ ಎತ್ತುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಾರು, ಯಾವ ಪಕ್ಷ ಕಟ್ಟಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಮಹದಾಯಿ ಸಮಸ್ಯೆ ತಾರ್ಕಿಕ ಅಂತ್ಯ ಕಾಣುವವರೆಗೂ ನಾವು ಹೋರಾಟ ಮಾಡೇ ಮಾಡುತ್ತೇವೆ ಎಂದು ಅವರು ಹೇಳಿದರು.

Facebook Comments

Sri Raghav

Admin