ಗೋವಾ ಬಿಜೆಪಿ ಸರ್ಕಾರ ವಜಾಕ್ಕೆ ವಾಟಾಳ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Vatal--02

ಬೆಂಗಳೂರು, ಜ.16-ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಗೋವಾ-ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ವತಿಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಅವರು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದೆ. ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಕನ್ನಡಿಗರಿಗೆ ಅವಮಾನ ಮಾಡುವಂತಹ ಹೇಳಿಕೆ ನೀಡಿರುವ ಅವರು, ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.

ಅವರು ಯಾವ ಕಾರಣಕ್ಕೆ ನಮ್ಮ ರಾಜ್ಯಕ್ಕೆ ಬಂದರು, ಯಾವ ಹಿನ್ನೆಲೆಯಲ್ಲಿ ಕಣಕುಂಬಕ್ಕೆ ಬಂದು ಕಾಮಗಾರಿ ಪರಿಶೀಲನೆ ನಡೆಸಿದರು, ಅವರನ್ನು ಬರಲು ಬಿಟ್ಟವರು ಯಾರು? ಎಂದು ಕಟುವಾಗಿ ಪ್ರಶ್ನಿಸಿದ ಅವರು, ನ್ಯಾಯಾಧೀಕರಣ ಇದಕ್ಕೆ ಅವಕಾಶ ನೀಡಿದೆಯೇ? ಪರಿಶೀಲನಾ ಸಂದರ್ಭದಲ್ಲಿ ಎರಡೂ ರಾಜ್ಯಗಳ ಜಲಸಂಪನ್ಮೂಲ ಸಚಿವರು, ಅಧಿಕಾರಿಗಳು ಇರಬೇಕಿತ್ತು. ಆದರೆ ಅವರೊಬ್ಬರೇ ಬಂದು ನೋಡಿಕೊಂಡು ಹೋಗಿರುವುದಲ್ಲದೆ, ಕನ್ನಡಿಗರಿಗೇ ಅವಮಾನ ಮಾಡಿದ್ದಾರೆ. ಗೋವಾ ಸರ್ಕಾರಕ್ಕೆ ಒಕ್ಕೂಟದ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ. ಅವರನ್ನು ಕೂಡಲೇ ವಜಾ ಮಾಡಬೇಕೆಂದು ಪ್ರಧಾನಿಯವರನ್ನು ಆಗ್ರಹಿಸಿದರು. ನಮ್ಮ ರಾಜ್ಯಸರ್ಕಾರಕ್ಕೆ ಯಾವುದೇ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಪಾಲ್ಯೇಕರ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.

ಗೋವಾ ಸರ್ಕಾರದ ಕ್ರಮ ಖಂಡಿಸಿ ಮಹದಾಯಿ ವಿವಾದ ಬಗೆಹರಿಸುವ ಸಂಬಂಧ ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ 25 ರಂದು ರಾಜ್ಯ ಬಂದ್‍ಗೆ ಕರೆ ನೀಡಲಾಗಿದೆ ಎಂದು ಹೇಳಿದರು. ತಮಿಳುನಾಡು ಸರ್ಕಾರ ಕಾವೇರಿ ನೀರು ಬಿಡುವಂತೆ ಪತ್ರ ಬರೆದಿದೆ. ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿಲ್ಲ. ಇಂತಹ ಸಂದರ್ಭದಲ್ಲಿ ನೀರು ಬಿಡುವುದು ಹೇಗೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ನೀರು ಹರಿಸಿದರೆ ರಾಜ್ಯದಲ್ಲಿ ದಂಗೆಯಾಗುತ್ತದೆ ಎಂದು ಹೇಳಿದರು. ಸಾ.ರಾ.ಗೋವಿಂದು, ಮಂಜುನಾಥ್ ದೇವು, ಗಿರೀಶ್, ಕೆ.ಆರ್.ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Facebook Comments

Sri Raghav

Admin