ಕಾನ್‍ಸ್ಟೆಬಲ್ ಮೇಲೆ ಲಾಂಗ್‍ನಿಂದ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

Police
ಬೆಂಗಳೂರು, ಜ.17-ಗಲಾಟೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಕರ್ತವ್ಯ ನಿರತ ಕಾನ್‍ಸ್ಟೆಬಲ್ ಮೇಲೆಯೇ ದುಷ್ಕರ್ಮಿ ಲಾಂಗ್‍ನಿಂದ ಹಲ್ಲೆ ನಡೆಸಿರುವ ಘಟನೆ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಜೆ.ಜೆ.ನಗರ ಸಮೀಪದ ಪಾದರಾಯನಪಾಳ್ಯದ 11ನೆ ಬಿ ಕ್ರಾಸ್ ಬಳಿಯ ಅಯ್ಯಂಗಾರ್ ಬೇಕರಿ ಹತ್ತಿರ ರಾತ್ರಿ 11.30ರಲ್ಲಿ ಗಲಾಟೆ ನಡೆಯುತ್ತಿದ್ದ ಬಗ್ಗೆ ಸಾರ್ವಜನಿಕರು ಕಂಟ್ರೋಲ್‍ರೂಂಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೊಯ್ದಳ ನಿಯಂತ್ರಣ ಕೋಣೆಯಿಂದ ಜೆ.ಜೆ.ನಗರ ಠಾಣೆಯ ಕಾನ್‍ಸ್ಟೆಬಲ್ ರಾಜೇಂದ್ರ ಅವರಿಗೆ ತಿಳಿಸಿದ್ದು , ಇವರು ಚಾಲಕ ಶಿವ ಪ್ರಕಾಶ್ ಅವರೊಂದಿಗೆ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಗಾಂಜಾ ಮತ್ತಿನಲ್ಲಿದ್ದ ಪಾದರಾಯನಪುರ ನಿವಾಸಿ ಅಲೀಂ ಎಂಬಾತ ಸಾರ್ವಜನಿಕ ರೊಂದಿಗೆ ಗಲಾಟೆ ಮಾಡುತ್ತಿದ್ದುದು, ಕಂಡು ಆತನಿಗೆ ಗಲಾಟೆ ಮಾಡದಂತೆ ಕಾನ್‍ಸ್ಟೆಬಲ್ ರಾಜೇಂದ್ರ ಸೂಚಿಸಿದ್ದಾರೆ.  ಕಾನ್‍ಸ್ಟೆಬಲ್ ಮಾತನ್ನು ಲೆಕ್ಕಿಸದೆ ಅವರ ಮೇಲೆಯೇ ಲಾಂಗ್‍ನಿಂದ ತಲೆಗೆ ಹೊಡೆಯಲು ಮುಂದಾದಾಗ ತಕ್ಷಣ ಲಾಂಗನ್ನು ರಾಜೇಂದ್ರ ಅವರು ಎರಡೂ ಕೈಗಳಿಂದ ತಡೆಯಲು ಪ್ರಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜೇಂದ್ರ ಅವರ ಹಣೆಗೆ ಲಾಂಗ್ ತಗುಲಿದ್ದ ಲ್ಲದೆ, ಎರಡೂ ಕೈಗಳಿಗೂ ಗಾಯವಾಗಿದ್ದರೂ ಅಲೀಂನನ್ನು ಹಿಡಿಯಲು ಪ್ರಯತ್ನಿಸಿದಾಗ ಜನರ ಮಧ್ಯೆ ನುಸುಳಿಕೊಂಡು ಲಾಂಗ್ ಸಮೇತ ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ರಾಜೇಂದ್ರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳು ತ್ತಿದ್ದಾರೆ. ಹಲ್ಲೆ ಬಗ್ಗೆ ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಕೋರನ ಪತ್ತೆಗೆ ತನಿಖೆ ಮುಂದುವರೆದಿದೆ.

Facebook Comments

Sri Raghav

Admin