ಯುದ್ಧಭೀತಿ : ಭಾರತದ ಗಡಿಯಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸುತ್ತಿರುವ ಚೀನಾ

ಈ ಸುದ್ದಿಯನ್ನು ಶೇರ್ ಮಾಡಿ

India-Vs-China--01
ನವದೆಹಲಿ, ಜ.17- ಈಶಾನ್ಯ ರಾಜ್ಯ ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ಧದ ಕಾರ್ಮೋಡಗಳು ದಟ್ಟೈಸಲು ಕಾರಣವಾದ ಡೋಕ್ಲಾಂ ಬಿಕ್ಕಟ್ಟಿನ ಹಿಂದೆಯೇ ಬೀಜಿಂಗ್ ಮತ್ತೆ ನವದೆಹಲಿಗೆ ಹೊಸ ತಲೆನೋವು ತಂದಿದೆ. ಚೀನಾ-ಭಾರತ ಗಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೊಸ ಭದ್ರತಾ ಕೋಟೆಯೊಂದನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ನಿರ್ಮಿಸುತ್ತಿದೆ. ಇದರಿಂದ ಗಡಿಯಲ್ಲಿ ತನ್ನ ಸೇನೆಯ ಚಲನವಲನ ಹೆಚ್ಚಿಸಲು, ಉತ್ತಮ ರೀತಿಯಲ್ಲಿ ವೈರಿಗಳ ವಿರುದ್ಧ ಹೋರಾಡಲು ಹಾಗೂ ರಕ್ಷಣೆ ಪಡೆಯಲು ಚೀನಾಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಈ ಆತಂಕಕಾರಿ ಸಂಗತಿಯನ್ನು ಭಾರ ತೀಯ ಸೇನೆಯ ಗುಪ್ತಚರ ವರದಿಗಳು ಬಹಿರಂಗಗೊಳಿಸಿವೆ.

ಸಿನೊ-ಇಂಡಿಯಾ ಬಾರ್ಡರ್ (ಭಾರತ-ಚೀನಾ ಗಡಿ) ಬಳಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಚೀನಾ ತನ್ನ ಭದ್ರತಾ ವ್ಯವಸ್ಥೆಯನ್ನು ಚುರುಕುಗೊಳಿಸುತ್ತಿದೆ. ತನ್ನ ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳು, ಸಾಧನ-ಸಲಕರಣೆಗಳು, ಸಿಬ್ಬಂದಿ ರಕ್ಷಣೆಗಾಗಿ ಈ ವ್ಯವಸ್ಥೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ವೈರಿಗಳ ದಾಳಿಗಳನ್ನು ಹತ್ತಿಕ್ಕಲು ವಿಶೇಷ ವೀಕ್ಷಣಾ ಕೇಂದ್ರಗಳು ಮತ್ತು ಕಾವಲು ಗೋಪುರಗಳನ್ನು ಹೆಚ್ಚಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಶತ್ರುಗಳು ದಾಳಿ ನಡೆಸಿದಾಗ ಅತ್ಯಂತ ಕ್ಷಿಪ್ರವಾಗಿ ಅದರಿಂದ ರಕ್ಷಣೆ ಪಡೆಯಲು ಹಾಗೂ ರಣರಂಗ ಕೌಶಲ ಬೆಂಬಲ ವ್ಯವಸ್ಥೆಯನ್ನು ತ್ವರಿತವಾಗಿ ಬಲಗೊಳಿಸುವ ರೀತಿಯಲ್ಲಿ ಈ ಭದ್ರತಾ ಕೋಟೆಯನ್ನು ವಿನ್ಯಾಸಗೊಳಿಸಲಾಗಿದೆ. ಸಕ್ರಿಯ ಪ್ರತಿರೋಧಕ ಮತ್ತು ವಿದ್ಯುತ್‍ಅಯಸ್ಕಾಂತೀಯ ರಕ್ಷಣಾ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ. ಇವುಗಳನ್ನು ಅತ್ಯಂತ ವೇಗವಾಗಿ ಜೋಡಿಸಬಹುದು ಮತ್ತು ತೆರವುಗೊಳಿಸಬಹುದಾಗಿದ್ದು, ಬಹುಉದ್ದೇಶಿತ ಕಾರ್ಯಗಳಿಗೆ ಇವು ಅನುಕೂಲಕರ ಎಂದು ಹೇಳಲಾಗಿದೆ. ಪಿಎಲ್‍ಎಗಾಗಿ ಇದನ್ನು ಅತ್ಯಂತ ಕಾಳಜಿಯಿಂದ ನಿರ್ಮಿಸಲಾಗಿದೆ ಎಂದು ಗುಪ್ತಚರ ಘಟಕ ಮಾಹಿತಿ ನೀಡಿದೆ.

ಚೀನಾದ ಸೇನೆಯ ಮಿಲಿಟರಿ ವಿಜ್ಞಾನ ಕುರಿತು ರಕ್ಷಣಾ ಎಂಜಿನಿಯರಿಂಗ್ ಸಂಶೋಧನಾ ಅಕಾಡೆಮಿ ಸಂಸ್ಥೆ ನಿರ್ಮಿಸಿರುವ ಈ ಭದ್ರತಾ ಕೋಟೆಯು ನಾಲ್ಕು ಪ್ರಮುಖ ವಿಭಾಗಗಳನ್ನು ಹೊಂದಿದೆ. ಅವುಗಳೆಂದರೆ ವೀಕ್ಷಣಾ ಕೇಂದ್ರ, ಶೂಟಿಂಗ್ ಕಮಾಂಡ್ ಏರಿಯಾ, ಸೇನಾ ಸಿಬ್ಬಂದಿ ರಕ್ಷಣೆ ತಾಣ ಹಾಗೂ ಶಸ್ತ್ರಾಸ್ತ್ರ-ಮದ್ದುಗುಂಡುಗಳು, ಯುದ್ಧ ಸಾಧನ-ಸಲಕರಣೆಗಳ ರಕ್ಷಣಾ ವ್ಯವಸ್ಥೆ. ಈ ಭದ್ರತಾ ವ್ಯವಸ್ಥೆಯು ಅತ್ಯಂತ ಹಗುರ ಬಿಡಿಭಾಗಗಳನ್ನು ಹೊಂದಿದ್ದು ಗಾತ್ರದಲ್ಲಿ ಪುಟ್ಟದಾಗಿದೆ. ಇದನ್ನು ಎಲ್ಲಿಗೆ ಬೇಕಾದರೂ ಒಯ್ಯಬಹುದಾದಷ್ಟು ಅನುಕೂಲಕರವಾಗಿದೆ. ಎಲ್ಲ ಕಡೆಯೂ ಹೊಂದಾಣಿಕೆಯಾಗಬಹುದಾದ ವಿಶೇಷ ಎಂಜಿನಿಯರಿಂಗ್ ಕೌಶಲ್ಯ ವಿನ್ಯಾಸದ ನಿರ್ಮಾಣ ಇದಾಗಿದೆ. ಭಾರತ-ಚೀನಾ ಗಡಿಯಲ್ಲಿ ಪಿಎಲ್‍ಎ ಅತ್ಯಂತ ಸಕ್ರಿಯವಾಗಿದ್ದು, ಈ ಹೊಸ ಭದ್ರತಾ ವ್ಯವಸ್ಥೆಯು ಆದರ ಶಸ್ತ್ರಾಸ್ತ್ರ ಸಾಮಥ್ರ್ಯವನ್ನು ಹೆಚ್ಚಿಸಿದಂತಾಗಿದೆ.

Facebook Comments

Sri Raghav

Admin