ಇಹಲೋಕ ತ್ಯಜಿಸಿದ ನಟ, ನಿರ್ದೇಶಕ ಕಾಶಿನಾಥ್ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

Kashinath--05

ಬೆಂಗಳೂರು,ಜ.18- ಕನ್ನಡ ಚಿತ್ರರಂಗಕ್ಕೆ ಅನೇಕ ದಿಗ್ಗಜರನ್ನು ಪರಿಚಯಿಸಿ ಅನುಭವ, ಅವನೇ ನನ್ನ ಗಂಡ, ಅವಳೇ ನನ್ನ ಹೆಂಡತಿ ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನೀಡಿದ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಕಾಶಿನಾಥ್ ಇಂದು ನಿಧನರಾಗಿದ್ದಾರೆ. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು ನಗರ ಶ್ರೀ ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 8ಗಂಟೆಗೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಡಾ.ಶೇಖರ್ ಪಾಟೀಲ್ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು.  ಮೃತರು ಪತ್ನಿ , ಇಬ್ಬರು ಪುತ್ರರಾದ ಅಲೋಕ್ ಕಾಶಿನಾಥ್ ಹಾಗೂ ಅಮೃತ ವರ್ಷಿಣಿ ಕಾಶಿನಾಥ್ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಹಾಸ್ಯ, ಮೊನಚು, ಜೀವನದ ಅನುಭವದೊಂದಿಗೆ ನಿರ್ದೇಶಿಸಿದ ಹಲವು ಚಲನಚಿತ್ರಗಳ ಮೂಲಕ ಜೀವನದ ನೂರಾರು ಮಜಲುಗಳನ್ನು ಪರಿಚಯಿಸುವಲ್ಲಿ ಕಾಶಿನಾಥ್ ಯಶಸ್ವಿಯಾಗಿದ್ದರು. ವಿಭಿನ್ನ ಶೈಲಿಯ ಚಿತ್ರಗಳಿಗೆ ಹೆಸರಾಗಿದ್ದ ಅವರು, ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನೇ ನಿರ್ಮಿಸಿದ್ದರು. ಉಡುಪಿ ಜಿಲ್ಲೆ ಕುಂದಾಪುರದ ಕೋಟೇಶ್ವರ ಗ್ರಾಮದಲ್ಲಿ ಜನಿಸಿದ್ದ ಕಾಶಿನಾಥ್, ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಮರ ಮಧುರ ಪ್ರೇಮ, ಅನುಭವ, ಅನಾಮಿಕ, ಅವಳೇ ನನ್ನ ಹೆಂಡತಿ ಸೇರಿದಂತೆ 43 ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ 13, ಹಿಂದಿಯಲ್ಲಿ ಎರಡು ಹಾಗೂ ತೆಲುಗಿನಲ್ಲಿ ಒಂದು ಚಿತ್ರವನ್ನು ನಿರ್ದೇಶಿಸಿದ್ದರು. ಕನ್ನಡದ ಎರಡು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕಾಶಿನಾಥ್ ಅವರು ಮೂರು ಚಿತ್ರಗೀತೆಗಳನ್ನೂ ರಚಿಸಿದ್ದರು. ಕನ್ನಡ, ತೆಲುಗಿನ ತಲಾ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶಕ ನೀಡಿದ್ದರು.

ನಟನೆ, ನಿರ್ದೇಶನ, ಸಂಗೀತ ನಿರ್ದೇಶಕ ಹಾಗೂ ಚಿತ್ರ ನಿರ್ಮಾಣ ಹೀಗೆ ವಿವಿಧ ಭಾಗಗಳಲ್ಲಿ ನೈಪುಣ್ಯತೆಯನ್ನು ತೋರಿಸಿದ್ದ ಕಾಶಿನಾಥ್, ಅಭಿಮಾನಿಗಳ ಪಾಲಿಗೆ ಬಹುಬೇಗನೆ ನೆಚ್ಚಿನ ನಟರಾಗಿದ್ದರು. ಅವರ ವಿಭಿನ್ನ ಶೈಲಿಯ ಚಿತ್ರಗಳು ಯಶಸ್ಸಿನ ಉತ್ತುಂಗಕ್ಕೇರಿದ್ದವು.

ಹಲವರನ್ನು ಚಿತ್ರರಂಗಕ್ಕೆ ತಂದವರು:
ಕ್ಯಾನ್ಸರ್‍ನಿಂದ ಇಹಲೋಕ ತ್ಯಜಿಸಿದ ಕಾಶಿನಾಥ್ ಕನ್ನಡ ಚಿತ್ರರಂಗಕ್ಕೆ ಅನೇಕ ದಿಗ್ಗಜರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ರಿಯಲ್ ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ವಿ.ಮನೋಹರ್, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ಖ್ಯಾತ ನಟ ಕುಮಾರ್‍ಗೋವಿಂದ್ ಅವರನ್ನು ಚಿತ್ರರಂಗಕ್ಕೆ ಕರೆತಂದಿದ್ದೇ ಇವರು.  ಇದಲ್ಲದೆ ನಟಿಯರಾದ ಉಮಾಶ್ರೀ, ಅಭಿನಯ ಸೇರಿದಂತೆ ಅನೇಕರಿಗೆ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ನೀಡಿದ
ಕೀರ್ತಿಯು ಕಾಶಿನಾಥ್ ಅವರಿಗೆ ಸಲ್ಲುತ್ತದೆ. 1980ರ ದಶಕದಲ್ಲಿ ಅಮರ ಮಧುರ ಪ್ರೇಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕಾಶಿನಾಥ್ ತದನಂತರ ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳನ್ನು ನೀಡುವ ಮೂಲಕ ಬಹುಬೇಗನೆ ಕೀರ್ತಿ ಸಂಪಾದಿಸಿದರು.

Sjivarajkumar--01

ನಟಿಸಿದ ಚಿತ್ರಗಳು:
ಅನುಭವ, ಅನಾಮಿಕ, ಅವಳೇ ನನ್ನ ಹೆಂಡತಿ, ಮಿಥಿಲೆಯ ಸೀತೆಯರು, ಅನಂತನ ಅವಾಂತರ, ಅದೃಷ್ಟ ರೇಖೆ, ತಾಯಿಗೊಬ್ಬ ತರ್ಲೆ ಮಗ, ಅವನೇ ನನ್ನ ಗಂಡ, ಪ್ರೇಯಸಿ ಪ್ರೀತಿಸು, ಲವ್ ಮಾಡಿ ನೋಡು, ಮನ್ಮಥ ರಾಜ, ಸುರಸುಂದರಾಂಗ, ಸಿಂಗಾರಿ, ಬಂಗಾರಿ, ಕಲಿಯುಗ ಕೃಷ್ಣ , ಪೋಲಿ ಕಿಟ್ಟಿ, ಚಪಲ ಚನ್ನಗಿರಾಯ, ಅಜಗಜಾಂತರ, ಅತಿ ಮಧುರ ಅನುರಾಗ, ಲವ್ ಟ್ರೈನಿಂಗ್, ಶ್, ಹೆಂಡತಿ ಎಂದರೆ ಹೀಗಿರಬೇಕು, ಬಂಗಾರದ ಮನೆ, ಬದುಕು ಜಟಕಬಂಡಿ, ಹಲೋ ಯಮ, ಚೋರ್ ಗುರು ಚಾಂಡಾಲ ಶಿಷ್ಯ, ರಂಬೆ ಊರ್ವಶಿ ಮೇನಕೆ, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್, ಸುಂದರ ನೀನು-ಸುಂದರಿ ನಾನು, ಮಾವ ಮಾವ ಮದುವೆ ಮಾಡು, ನಾರಿ ಮುನಿದರೆ ಗಂಡು ಪರಾರಿ, ಆಹಾ ನನ್ನ ತಂಗಿ ಮದುವೆ, ಸೂಪರ್ ಅಳಿಯ, ಮೂರ್ಖ, ಬಿಟ್ಟಿ ತಾಳಿ ಗಟ್ಟಿ ಮೇಳ, ಅಪ್ಪಚ್ಚಿ , ಮಧ್ಯರಾತ್ರಿ, ಜೂಮ್ ಹಾಗೂ ಇತ್ತೀಚೆಗಷ್ಟೇ ಚೌಕ ಮತ್ತು ಓಳು ಮುನಿಸ್ವಾಮಿ ಇತ್ತೀಚೆಗೆ ನಟಿಸಿದ ಚಿತ್ರಗಳಾಗಿವೆ.

Kashinath-Dead

ನಿರ್ದೇಶನದ ಚಿತ್ರಗಳು:
ಅಪರೂಪದ ಅತಿಥಿಗಳು, ಅಪರಿಚಿತ, ಅನುಭವ ಹಾಗೂ ಇವರ ಅಜಗಜಾಂತರ ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ ಎಂಬ ಹೆಸರಿನಲ್ಲಿ ರಿಮೇಕ್ ಕೂಡ ಆಗಿದೆ.

ಕಂಬನಿ:
ಕಾಶಿನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ , ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕನ್ನಡ ಚಿತ್ರರಂಗದ ನಟ-ನಟಿಯರು, ತಂತ್ರಜ್ಞರು ತೀವ್ರ ಕಂಬನಿ ಮಿಡಿದಿದ್ದಾರೆ.

> ಕಾಶಿನಾಥ್ ಕನ್ನಡ ಚಿತ್ರರಂಗದ ಆಸ್ತಿ : ಸಾ.ರಾ.ಗೋವಿಂದು : 

ಬೆಂಗಳೂರು, ಜ.18- ಕಾಶಿನಾಥ್ ಕನ್ನಡ ಚಿತ್ರರಂಗದ ಆಸ್ತಿ. ಚಲನಚಿತ್ರರಂಗ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದರು. ಕಾಶಿನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಅವರು, ಕಾಶಿನಾಥ್ ಚಲನಚಿತ್ರ ಕ್ಷೇತ್ರದಲ್ಲಿ ಅಪಾರ ಸಾದನೆ ಮಾಡಿದ್ದಾನೆ. ನಟ-ನಿರ್ಮಾಪಕ-ನಿರ್ದೇಶಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಹಲವು ಪ್ರತಿಭೆಗಳನ್ನು ಚಲನಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅವರೆಲ್ಲರೂ ಈಗ ಚಿತ್ರರಂಗದಲ್ಲಿ ದೈತ್ಯರಾಗಿ ಬೆಳೆದಿದ್ದಾರೆ.

ಕಾಶಿನಾಥ್ ಅವರು ನಮ್ಮೆಲ್ಲರ ಶಕ್ತಿಯಾಗಿ ಉಳಿದಿದ್ದಾರೆ. ಚಲನಚಿತ್ರ ರಂಗದಲ್ಲಿ ಹೆಸರು ಮಾಡಿದ ವ್ಯಕ್ತಿ. ಅವರು ಸರಳ ಮತ್ತು ಸ್ನೇಹಜೀವಿಯಾಗಿದ್ದರು. ಕೆಲಸದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದರು ಎಂದು ಹೇಳಿದರು. ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಮಹಾನ್ ಕಲಾವಿದರು. ಅಪ್ಪಟ ಕನ್ನಡ ಚಿತ್ರಗಳ ನಿರ್ದೇಶಕರಾಗಿದ್ದವರು. ಕನ್ನಡವನ್ನು ಹೆಚ್ಚು ಪ್ರೀತಿಸುತ್ತಿದ್ದವರು. ಅವರ ನಿಧನದಿಂದ ಉತ್ತಮ ನಿರ್ದೇಶಕ, ನಟನನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಹೇಳಿದರು.  ಅವರಿಗೆ ಮಾರಕ ಕಾಯಿಲೆ ಕ್ಯಾನ್ಸರ್ ಇದ್ದರೂ ಕೂಡ ಚೌಕ ಚಿತ್ರದಲ್ಲಿ ಅಭಿನಯಿಸಿರುವುದನ್ನು ಗಮನಿಸಿದರೆ ಅವರಿಗೆ ಚಿತ್ರರಂಗದ ಮೇಲೆ ಇರುವ ಪ್ರೀತಿ ಎಷ್ಟು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು. ಕಾಶಿನಾಥ್ ಅವರ ನಿಧನ ಸಿನಿಮಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಾ.ರಾ.ಗೋವಿಂದು ಶೋಕ ವ್ಯಕ್ತಪಡಿಸಿದ್ದಾರೆ.

> ಕಾಶಿನಾಥ್ ನಿಧನಕ್ಕೆ ಸಿಎಂ ಸಂತಾಪ : 

ಸುತ್ತೂರು, ಜ.18- ಇಂದು ಬೆಳಗ್ಗೆ ನಿಧನರಾದ ಹಿರಿಯ ನಟ ಕಾಶಿನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದರು. ಅವರು ಪ್ರತಿಭಾವಂತ ಕಲಾವಿದ. ಅವರ ಹಾಸ್ಯ ನಟನೆ ಎಲ್ಲರಿಗೂ ಒಪ್ಪುವಂತಿತ್ತು. ನಾನೂ ಸಹ ಕಾಶಿನಾಥ್ ಅವರ ಕೆಲವು ಚಿತ್ರಗಳನ್ನು ನೋಡಿದ್ದೇನೆ. ಅವರು ಸದಭಿರುಚಿಯ ಚಿತ್ರಗಳನ್ನು ನೀಡಿದ್ದಾರೆ. ಕಾಶಿನಾಥ್ ಅವರಿಗೆ ಸಾಯುವಂತಹ ವಯಸ್ಸೇನೂ ಆಗಿರಲಿಲ್ಲ. ಉತ್ತಮ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ. ಇವರ ನಿಧನದಿಂದ ಚಿತ್ರರಂಗಕ್ಕೆ ಭಾರೀ ನಷ್ಟವಾಗಿದೆ. ಅವರ ನಿಧನ ವೈಯಕ್ತಿಕವಾಗಿ ನನಗೆ ತುಂಬಾ ದುಃಖ ತಂದಿದೆ ಎಂದು ಹೇಳಿದರು. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ, ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಿಎಂ ಹೇಳಿದರು.

> ಕಾಶೀನಾಥ್ ಸಂತಾಪ ವ್ಯಕ್ತಪಡಿಸಿದ ದೇವೇಗೌಡರು

ಬೆಂಗಳೂರು, ಜ.18- ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಾಶೀನಾಥ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿದ್ದ ಕಾಶೀನಾಥ್ ಅವರು ಅಮೋಘ ನಟನೆಯಿಂದ ಕನ್ನಡ ಚಿತ್ರರಂಗವನ್ನು ರಂಜಿಸಿದ್ದರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಇಂದು ಉತ್ತಮ ನಟ, ನಿರ್ದೇಶಕ ಹಾಗೂ ನಿರ್ಮಾಪಕರೊಬ್ಬರನ್ನು ಕಳೆದುಕೊಂಡಂತಾಗಿದೆ.
ದೇವರು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವೇಗೌಡರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

>  ಪ್ರತಿಭಾವಂತ ಕಲಾವಿದರನ್ನು ನಾಡು ಕಳೆದುಕೊಂಡಿದೆ

ಬೆಂಗಳೂರು,ಜ.18- ಕಾಶಿನಾಥ್ ಅವರ ನಿಧನದಿಂದ ಒಬ್ಬ ಪ್ರತಿಭಾವಂತ ಕಲಾವಿದರನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದುಃಖ ವ್ಯಕ್ತಪಡಿಸಿದರು. ತಮ್ಮ ಕೆಲವು ಚಿತ್ರಗಳಲ್ಲಿ ಕಾಶಿನಾಥ್ ಅವರು ಅಭಿನಯಿಸಿದ್ದರು. ಅವರ ನಿಧನ ನನಗೆ ವೈಯಕ್ತಿಕವಾಗಿ ನನಗೆ ನೋವು ತಂದಿದೆ ಎಂದು ಹೇಳಿದ್ದಾರೆ. ಅವರೊಬ್ಬ ಉತ್ತಮ ಹಾಸ್ಯನಟ, ನಿರ್ದೇಶಕರಾಗಿದ್ದರು ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಹೇಳಿದರು.

Facebook Comments

Sri Raghav

Admin