ಗಣಿ ಹಗರಣದ ತನಿಖೆಯನ್ನು ಎಸ್‍ಐಟಿಗೆ ವಹಿಸಿರುವುದರಲ್ಲಿ ರಾಜಕೀಯ ದುರುದ್ದೇಶವಿಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-CM--01

ಸುತ್ತೂರು, ಜ.18- ಸಿಬಿಐನಿಂದ ಕ್ಲೀನ್‍ಚಿಟ್ ಸಿಕ್ಕಿರುವ ಗಣಿ ಹಗರಣದ ತನಿಖೆಯನ್ನು ಎಸ್‍ಐಟಿಗೆ ವಹಿಸಿರುವುದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  ಗಣಿ ಹಗರಣದ ತನಿಖೆಯನ್ನು ಸಿಬಿಐ ಕಾನೂನಾತ್ಮಕವಾಗಿ ನಡೆಸದ ಹಿನ್ನೆಲೆಯಲ್ಲಿ ನಾವು ಎಸ್‍ಐಟಿಗೆ ವಹಿಸಿದ್ದೇವೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ ಸಹ ಕೆಲವರನ್ನು ರಕ್ಷಿಸುವ ನಿಟ್ಟಿನಲ್ಲಿ ಸಿಬಿಐಗೆ ಕೇಂದ್ರ ಸರ್ಕಾರ ತನಿಖೆಯ ಸಂಪೂರ್ಣ ಸ್ವಾತಂತ್ರ್ಯ ನೀಡಲಿಲ್ಲ. ಹಾಗಾಗಿ ಸಿಬಿಐ ಸಾಕ್ಷ್ಯಾಧಾರದ ಕೊರತೆ ಇದೆ ಎಂದು ಹೇಳಿ ಈ ತನಿಖೆಯನ್ನು ಕೈ ಬಿಟ್ಟಿದೆ. ಹಾಗಾಗಿ ರಾಜ್ಯ ಸರ್ಕಾರ ಸಂಪುಟದಲ್ಲಿ ತೀರ್ಮಾನ ಕೈಗೊಂಡು ಎಸ್‍ಐಟಿ ತನಿಖೆಗೆ ನೀಡಿದ್ದೇವೆ ಎಂದು ತಿಳಿಸಿದರು.  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗಣಿ ತನಿಖೆ ಎಸ್‍ಐಟಿಗೆ ವಹಿಸುತ್ತಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಹೇಳಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಹಿಂದೆ ಸಿಬಿಐಅನ್ನು ಇದೇ ಯಡಿಯೂರಪ್ಪ ಚೋರ್ ಬಜಾರ್ ಎಂದು ಹೇಳಿದ್ದರು. ಆ ಸಂಸ್ಥೆಯೇ ಸರಿಯಾಗಿ ತನಿಖೆ ನಡೆಸದ ಹಿನ್ನೆಲೆಯಲ್ಲಿ ನಾವು ಈಗ ಎಸ್‍ಐಟಿಗೆ ವಹಿಸಿದ್ದೇವೆ ಎಂದು ಉತ್ತರಿಸಿದರು. ಯಾರ ಮೇಲೆ ಆರೋಪಗಳಿರುತ್ತವೋ ಅಂತವರು ಈ ರೀತಿಯಾದ ಹೇಳಿಕೆ ನೀಡುವುದು ಸಹಜ ಎಂದು ಸಿಎಂ ಟಾಂಗ್ ನೀಡಿದರು.

ನಾವು ಅಧಿಕಾರಕ್ಕೆ ಬಂದ ನಂತರ ಹಲವು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇವೆ. ಆದರೆ, ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಲಿಲ್ಲ ಎಂದು ತಿರುಗೇಟು ನೀಡಿದರು.   ಕಾನೂನಾತ್ಮಕವಾಗಿ ಯಾವ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆಯೋ ಅಂತಹ ಎಲ್ಲ ಸಂಸ್ಥೆಗಳ ಮೇಲೂ ನನಗೆ ನಂಬಿಕೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು. ಸಚಿವರಾದ ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin