ಮಹದಾಯಿಗಾಗಿ ಕನ್ನಡಿಗರ ಶಕ್ತಿ ಪ್ರದರ್ಶನಕ್ಕೆ ಸಜ್ಜು, 25ರಂದು ಕರ್ನಾಟಕ ಬಂದ್ ಗೆ ಭಾರಿ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

karnataka-bandh

ಬೆಂಗಳೂರು,ಜ.18-ಮಹದಾಯಿಗಾಗಿ ಇದೇ 25 ರಂದು ಕನ್ನಡಿಗರ ಅದ್ಭುತ ಶಕ್ತಿ ಪ್ರದರ್ಶನವೇ ನಡೆಯಲಿದೆ.  ರಾಜ್ಯಾದ್ಯಂತ ಸಾವಿರಾರು ಕನ್ನಡ ಪರ ಸಂಘಟನೆಗಳು, ರಾಜ್ಯ ಸರ್ಕಾರಿ ನೌಕರರು, ವಕೀಲರ ಸಂಘ, ಹೊಟೇಲ್ ಮಾಲೀಕರ ಸಂಘ, ಆಟೋ-ಟ್ಯಾಕ್ಸಿ ಚಾಲಕರ ಸಂಘ, ಪೆಟ್ರೋಲ್ ಮಾಲೀಕರ ಸಂಘ ಸೇರಿದಂತೆ ನೂರಾರು ಸಂಘಟನೆಗಳು ಇದೇ 25 ರಂದು ಕನ್ನಡ ಒಕ್ಕೂಟ ಕರೆಕೊಟ್ಟಿರುವ ಬಂದ್‍ಗೆ ಸಾಥ್ ನೀಡಿದ್ದು, ಕನ್ನಡಿಗರ ಶಕ್ತಿ ಪ್ರದರ್ಶನದ ಮೂಲಕ ಮಹದಾಯಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಹದಾಯಿ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಆಗ್ರಹಿಸುವುದು ಇದರ ಉದ್ದೇಶವಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ಇದೇ 25 ರಂದು ಮಹದಾಯಿಗಾಗಿ ಆಗ್ರಹಿಸಿ ಹಮ್ಮಿಕೊಂಡಿರುವ ಕರ್ನಾಟಕ ಬ ಂದ್ ಪೂರ್ವಭಾವಿಯಾಗಿ ಕರೆದಿದ್ದ ಸಭೆಗೂ ಮುನ್ನ ಈ ಸಂಜೆಯೊಂದಿಗೆ ಮಾತನಾಡಿದ ಅವರು, ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕುಡಿಯುವ ನೀರಿಗಾಗಿ ಮೂರು ವರ್ಷದಿಂದ ಉತ್ತರ ಕರ್ನಾಟಕದ ಜನ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಷ್ಟು ಸುದೀರ್ಘ ಹೋರಾಟ ಯಾವುದೇ ದೇಶ, ರಾಜ್ಯದಲ್ಲಿ ನಡೆದಿರುವ ಇತಿಹಾಸವಿಲ್ಲ.

ಇಂತಹ ಹೋರಾಟ ಮಾಡಿದರೂ ನಮ್ಮ ಪ್ರಧಾನಮಂತ್ರಿಯವರು ಈ ಬಗ್ಗೆ ಚಕಾರವೆತ್ತಿಲ್ಲ. ಸಂಸದರು ದನಿಯೆತ್ತಿಲ್ಲ. ನಮ್ಮ ಕೇಂದ್ರ ಸಚಿವರು ತಲೆ ಕೆಡಿಸಿಕೊಂಡಿಲ್ಲ. ಇದಕ್ಕಾಗಿ ಹೋರಾಟಗಾರರು ಬೀದಿಗಿಳಿದಿದ್ದೇವೆ. ನಮ್ಮ ಜನರ ಹಿತಾಸಕ್ತಿ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಹಾಗಾಗಿ ಎಲ್ಲರ ಬೆಂಬಲದೊಂದಿಗೆ ನಾವು ರಾಜ್ಯ ಬಂದ್ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ನಮ್ಮ ಒಗ್ಗಟ್ಟಿನ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಬೇಕಾಗಿದೆ. ಅದಕ್ಕಾಗಿ 25ರಂದು ನಡೆಯುವ ಬಂದ್‍ಗೆ ಎಲ್ಲರೂ ಸಹಕಾರ ನೀಡಬೇಕು.
ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ ಸೇರಿದಂತೆ ಎಲ್ಲಾ ಮುಖಂಡರು ಬೆಂಬಲ ನೀಡುವಂತೆ ನಾನೇ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ಅಖಂಡ ಕರ್ನಾಟಕದ ನಿಲುವು ನಮ್ಮದು. ಮಹದಾಯಿ, ಕಾವೇರಿ, ಎಲ್ಲಾ ವಿಷಯದಲ್ಲೂ ನ್ಯಾಯಕ್ಕಾಗಿ ನಾವು ಹೋರಾಟ ಮಾಡುತ್ತೇವೆ. ತಮಿಳುನಾಡಿಗೆ ಕಾವೇರಿ ನೀರು ಕೊಡುವಲ್ಲಿ ಕೇಂದ್ರ ಸರ್ಕಾರ ಆಸಕ್ತಿ ತೋರುವಷ್ಟು, ಗೋವಾದಿಂದ ಕರ್ನಾಟಕಕ್ಕೆ ಮಹದಾಯಿ ನೀರು ಬಿಡಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಭೇದ-ಭಾವ ಮಾಡುತ್ತಿದೆ. ಎಲ್ಲವೂ ರಾಜಕೀಯ ನಾಟಕ ಎಂದು ವಾಟಾಳ್ ಗುಡುಗಿದರು.  ಐದು ಬಾರಿ ರಾಜ್ಯಕ್ಕೆ ಪ್ರಧಾನಿ ಆಗಮಿಸಿದರೂ ಮಹದಾಯಿ ಬಗ್ಗೆ ಚಕಾರವೆತ್ತಿಲ್ಲ. ಕೊಪ್ಪಳದ ಬಾಲಕಿಯೊಬ್ಬಳು ಶೌಚಾಲಯದ ಬಗ್ಗೆ ನೀಡಿದ ಹೇಳಿಕೆಯನ್ನು ತಮ್ಮ ಮನ್ ಕೀ ಬಾತ್‍ನಲ್ಲಿ ಪ್ರಸ್ತಾಪಿಸುತ್ತಾರೆ. ಆದರೆ 900 ದಿನಗಳಿಂದ ಸಾವಿರಾರು ರೈತರು ನೀರಿಗಾಗಿ ಹೋರಾಟ ಮಾಡುತ್ತಿದ್ದರೂ ಯಾವುದೇ ಚಕಾರವೆತ್ತಿಲ್ಲ. ಇದು ಅತ್ಯಂತ ಖಂಡನೀಯ ಎಂದು ವಾಟಾಳ್ ಹೇಳಿದರು.

ಎಲ್ಲ ರಾಜಕೀಯ ಪಕ್ಷದವರು ಮಹದಾಯಿ ವಿಷಯದಲ್ಲಿ ನಾಟಕವಾಡುತ್ತಿದ್ದಾರೆ ಎಂದು ಹೇಳಿದರು.  ನಾವು ನಮ್ಮ ಪಾಲಿನ ನೀರು ಪಡೆಯಲು ಒಟ್ಟಾಗಿ ಹೋರಾಟ ಮಾಡಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಇದೆ ಎಂದರು.  ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದು, ಪ್ರವೀಣ್‍ಶೆಟ್ಟಿ, ಶಿವರಾಮೇಗೌಡ, ಮಂಜುನಾಥ್ ದೇವ್, ಗಿರೀಶ್‍ಗೌಡ, ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

Facebook Comments

Sri Raghav

Admin