ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಚಪ್ಪಲಿ ಮಿಸ್ಸಿಂಗ್ ..!

ಈ ಸುದ್ದಿಯನ್ನು ಶೇರ್ ಮಾಡಿ

Venkaiah--01
ಬೆಂಗಳೂರು,ಜ.19-ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಪಾದರಕ್ಷೆ ಕಳವಾದ ಪ್ರಸಂಗ ಇಂದು ನಡೆದಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಅವರ ನಿವಾಸದಲ್ಲಿ ವೆಂಕಯ್ಯ ನಾಯ್ಡು ಅವರು ಬೆಳಗ್ಗೆ ಉಪಹಾರ ಸೇವಿಸಲು ಆಗಮಿಸಿದ್ದರು.  ಈ ವೇಳೆ ಮನೆ ಮುಂಭಾಗ ನಾಯ್ಡು ಅವರು ತಮ್ಮ ಪಾದರಕ್ಷೆಗಳನ್ನು ಬಿಟ್ಟು ಉಪಹಾರಕ್ಕೆ ಬಂದ ವೇಳೆ ಯಾರೋ ಅನಾಮಿಕರು ಅವುಗಳನ್ನು ಎಗರಿಸಿದ್ದರು. ಪಾದರಕ್ಷೆ ಕಳೆದು ಹೋಗಿರುವುದರ ಬಗ್ಗೆ ತಿಳಿಯದ ವೆಂಕಯ್ಯ ನಾಯ್ಡು ಅವರು ತಿಂಡಿ ಮುಗಿಸಿ ಮನೆಯಿಂದ ಹೊರಬಂದು ಪಾದರಕ್ಷೆ ಧರಿಸಲು ಮುಂದಾದಾಗ ಒಂದು ಕ್ಷಣ ಅವಕ್ಕಾದರು.

ಮನೆಯ ಮೇಲುಗಡೆ ಬಿಟ್ಟಿರಬಹುದೆಂದು ಪಿ.ಸಿ.ಮೋಹನ್ ಜೊತೆ ಎರಡು ಮೂರು ಬಾರಿ ಮೇಲಿಂದ ಕೆಳಗೆ ಹುಡುಕಿದರಾದರೂ ಪಾದರಕ್ಷೆಗಳು ಸಿಗಲೇ ಇಲ್ಲ. ಕೊನೆಗೆ ಉಪರಾಷ್ಟ್ರಪತಿಗಳ ಅಂಗರಕ್ಷಕರು ಹತ್ತಿರದಲ್ಲಿದ್ದ ಅಂಗಡಿಗೆ ಹೋಗಿ ಚಪ್ಪಲಿ ತರಲು ಪರದಾಡಿದರು.  ಆದರೆ ಆ ಸಮಯದಲ್ಲಿ ಅಂಗಡಿ ಬಾಗಿಲು ತೆರೆಯದ ಕಾರಣ ಮತ್ತಷ್ಟು ಮುಜುಗರಕ್ಕೆ ಸಿಲುಕಿದರು. ಕೊನೆಗೆ ಎಲ್ಲೋ ಸಿಬ್ಬಂದಿಯವರು ಚಪ್ಪಲಿ ತಂದು ಕೊಟ್ಟಾಗ ನೆಮ್ಮದಿ ನಿಟ್ಟುಸಿರು ಬಿಟ್ಟರು. ತದನಂತರವೇ ಉಪರಾಷ್ಟ್ರಪತಿಗಳು ಚಪ್ಪಲಿ ಧರಿಸಿಕೊಂಡು ಬೆಂಗಳೂರು ವಿವಿ ಕಾರ್ಯಕ್ರಮಕ್ಕೆ ತೆರಳಿದರು.

ಈ ಘಟನೆಯಿಂದಾಗಿ ಸಂಸದ ಪಿ.ಸಿ.ಮೋಹನ್, ಮುಖಂಡ ಆರ್.ಅಶೋಕ್ ಮತ್ತಿತರರು ತೀವ್ರ ಮುಜುಗರ ಅನುಭವಿಸುವಂತಾಯಿತು. ವೆಂಕಯ್ಯ ನಾಯ್ಡು ಅವರು ಧರಿಸಿದ್ದ ಪಾದರಕ್ಷೆಗಳು ಹಾಗೂ ಮೋಹನ್ ಅವರ ಮನೆಗೆ ಬಂದಿದ್ದ ಅತಿಥಿಯೊಬ್ಬರ ಪಾದರಕ್ಷೆಗಳು ಒಂದೇ ಬಣ್ಣದಿಂದ ಕೂಡಿತ್ತು. ಇದನ್ನು ಸರಿಯಾಗಿ ತಿಳಿಯದೇ ವೆಂಕಯ್ಯ ನಾಯ್ಡು ಅವರ ಪಾದರಕ್ಷೆಗಳನ್ನೇ ಹಾಕಿಕೊಂಡು ಹೋಗಿದ್ದರಿಂದ ಈ ಘಟನೆಗೆ ಕಾರಣವಾಯಿತು.

Facebook Comments

Sri Raghav

Admin