ಎನ್‍ಪಿಎಸ್ ಯೋಜನೆ ವಿರೋಧಿಸಿ ನಾಳೆ ರಾಜ್ಯ ಸರ್ಕಾರಿ ನೌಕರರ ಬೃಹತ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Protest--00002

ಬೆಂಗಳೂರು, ಜ.19-ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ ಅವೈಜ್ಞಾನಿಕವಾದ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ನಾಳೆ ನಗರದಲ್ಲಿ ಬೆಳಿಗ್ಗೆ 10 ರಿಂದ ಫ್ರೀಡಂ ಪಾರ್ಕ್ ಚಲೋ ಹಮ್ಮಿಕೊಂಡಿದೆ. ರಾಜಧಾನಿ ಬೆಂಗಳೂರು ನಾಳೆ ನೌಕರರು ನಡೆಸಲಿರುವ ಪ್ರತಿಭಟನೆಯಿಂದಾಗಿ ಫ್ರೀಡಂ ಪಾರ್ಕ್ ಸುತ್ತಮುತ್ತ ಜನಜಂಗುಳಿಯೇ ನೆರೆಯಲಿದೆ.

ಪಿಂಚಣಿ ಎಂಬುದು ನೌಕರರ ಕುಟುಂಬದ ಊರುಗೋಲು. ನಿಮ್ಮ ಉಪಸ್ಥಿತಿ, ನಿಮ್ಮ ನಿವೃತ್ತಿ ಬದುಕಿನ ದಾರಿದೀಪವಾಗಬಲ್ಲದು ಎಂಬ ಧ್ಯೇಯದೊಂದಿಗೆ ಈ ಹೋರಾಟ ಹಮ್ಮಿಕೊಂಡಿದೆ. ನಿಶ್ಚಿತ ಪಿಂಚಣಿ ನಮ್ಮ ಹಕ್ಕು. ಅದನ್ನು ಸರ್ಕಾರ ಸೂಕ್ತ ರೀತಿಯಲ್ಲಿ ಒದಗಿಸಬೇಕಿದೆ. ಆದರೂ ನೂತನ ಪಿಂಚಣಿ ಯೋಜನೆ ಮೂಲಕ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.

2006ರ ನಂತರ ರಾಜ್ಯದಲ್ಲಿ ನೇಮಕಗೊಂಡ ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯದಲ್ಲಿ ಹಲವಾರು ನ್ಯೂನ್ಯತೆಗಳು ಉದ್ಭವಿಸಿದ್ದು, ಇದರಲ್ಲಿ ಯಾವುದೇ ಬದ್ಧತೆಯಿಲ್ಲದಿರುವುದರಿಂದ ಸುಮಾರು 180 ಲಕ್ಷ ಸರ್ಕಾರಿ ನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಇನ್ನಿತರ ಸೌಲಭ್ಯ ಪಡೆಯದೆ ವಂಚಿತರಾಗಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕೂಡಲೇ ನೂತನ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯದ ಮೂಲೆ ಮೂಲೆಯಿಂದ ಬರುವ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ತುಮಕೂರು, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಾಮರಾಜನಗರ, ವಿಜಯಪುರ, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗಾ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ತಾಲೂಕುಗಳಿಂದ ಆಗಮಿಸುವ ರಾಜ್ಯ ಸರ್ಕಾರಿ ನೌಕರರು ಫ್ರೀಡಂಪಾರ್ಕ್ ಚಲೋಗೆ ಬೆಂಬಲ ನೀಡಲಿದ್ದಾರೆ.

2006ರ ಏಪ್ರಿಲ್ 1 ರಿಂದ ರಾಜ್ಯಸರ್ಕಾರಿ ನೌಕರರಿಗೆ ನಿಗದಿತ ಪಿಂಚಣಿ ರದ್ದುಪಡಿಸಿ ನ್ಯೂ ಪೆನ್ಷನ್ ಸ್ಕೀಮ್ ಎಂಬ ಷೇರುಪೇಟೆ ಆಧಾರಿತ ಪಿಂಚಣಿಯನ್ನು ಜಾರಿಗೆ ತರಲಾಗಿದೆ. ಇದರಿಂದ ನೌಕರರಿಗೆ ಲಾಭದ ಬದಲಿಗೆ ಅನ್ಯಾಯವೇ ಆಗುತ್ತಿರುವ ಹಿನ್ನೆಲೆಯಲ್ಲಿ ಎನ್‍ಪಿಎಸ್ ನೌಕರರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ನೌಕರರಲ್ಲಿ ಜಾಗೃತಿ ಮೂಡಿಸಲು ಎನ್‍ಪಿಎಸ್ ಕುರಿತ ಸಾಧಕ-ಬಾಧಕಗಳು ವಿಚಾರಸಂಕಿರಣವನ್ನು ಕಾರ್ಯಾಗಾರದ ಮೂಲಕ ತಿಳಿಸಲಾಗಿದೆ.
ಈ ನೂತನ ಪಿಂಚಣಿ ಯೋಜನೆ ವಿರೋಧಿಸಿ ಕಳೆದ ಮಾರ್ಚ್ 2 ರಂದು ದೆಹಲಿಯಲ್ಲಿ ಪಾರ್ಲಿಮೆಂಟ್ ಚಲೋ ಸಹ ನಡೆಸಲಾಗಿತ್ತು. ಎನ್‍ಪಿಎಸ್ ನೌಕರರು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಯೋಜನೆ ಕೈಬಿಡುವಂತೆ ಆಗ್ರಹಿಸಿ ಫ್ರೀಡಂಪಾರ್ಕ್‍ನಲ್ಲಿ ನಾಳೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.
ಹೊಸ ಪಿಂಚಣಿ ಯೋಜನೆಯಡಿ ನೌಕರರಿಗೆ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರರ ವೇತನದಿಂದಲೇ ಶೇ.10ರಷ್ಟು ಕಡಿತಗೊಳಿಸಲಾಗುತ್ತಿದೆ. ಅದಕ್ಕೆ ಸಮಾನದ ಶೇ.10ರಷ್ಟು ವಂತಿಗೆ ರೂಪದಲ್ಲಿ ಸರ್ಕಾರ ನೀಡುತ್ತಿದೆ. ಈ ರೀತಿ ಒಗ್ಗೂಡಿದ ಮೊತ್ತವನ್ನು ಪಿಎಫ್‍ಆರ್‍ಡಿಎ ಮೂಲಕ ವಿವಿಧ ಖಾಸಗಿ ಹಣಕಾಸು ಸಂಸ್ಥೆಗಳು ಹಣ ಪಡೆದು ಷೇರುಪೇಟೆಯಲ್ಲಿ ತೊಡಗಿಸಿ 30 ರಿಂದ 35 ವರ್ಷಗಳ ಸೇವೆ ನಂತರ ಬಂದ ಲಾಭದಲ್ಲಿ ನೌಕರರಿಗೆ ಪಿಂಚಣಿ ನೀಡುತ್ತವೆ. ಇದರಿಂದ ನೌಕರನ ಸೇವೆಗೆ ಷೇರುಪೇಟೆಯಲ್ಲಿ ಸಿಗುವ ಲಾಭವೇ ಆಧಾರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಲಾಗುತ್ತಿದೆ ಎಂದು ರಾಜ್ಯಾಧ್ಯಕ್ಷ ಶಾಂತರಾಮ ಮತ್ತು ಪ್ರಧಾನಕಾರ್ಯದರ್ಶಿ ನಾಗನಗೌಡ ಹೇಳಿದ್ದಾರೆ.
ರಾಜ್ಯಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಾಳೆ ಫ್ರೀಡಂ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.

Facebook Comments

Sri Raghav

Admin