ರೈತರ ಆದಾಯ ಉತ್ತೇಜನಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Venkaih--012
ಬೆಂಗಳೂರು, ಜ.19- ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ರೈತರ ಆದಾಯ ದ್ವಿಗುಣಗೊಳಿ ಸಲು ಜಾರಿಗೊಳಿಸಿರುವ ರಾಷ್ಟ್ರೀಯ ಯೋಜನೆ ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೃಷಿ ವಿವಿ ಹಾಗೂ ಸಂಶೋಧನಾ ಸಂಸ್ಥೆಗಳು ಉತ್ತೇಜನ ನೀಡಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟರು.  ಡಾ.ವಿ.ಕೆ.ಆರ್.ವಿ.ರಾವ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಅವರು, ರೈತರಿಗೆ ಉತ್ತಮ ಬೀಜ ಒದಗಿಸಬೇಕು. ಇದರೊಂದಿಗೆ ರಸಗೊಬ್ಬರದ ಮಿತ ಬಳಕೆ ಕುರಿತಂತೆ ಅರಿವು ಮೂಡಿಸಬೇಕು. ಕೃಷಿ ವಲಯದಲ್ಲಿ ಸೂಕ್ತ ಸಾಲ ಸೌಲಭ್ಯ ದೊರೆಯುವಂತಾಗಬೇಕು ಎಂದು ಸಲಹೆ ಮಾಡಿದರು. ಏಕಕೃಷಿ ಬದಲಿಗೆ ತೋಟಗಾರಿಕೆ, ಹೈನುಗಾರಿಕೆ, ಕುಕ್ಕುಟೋದ್ಯಮ ಸೇರಿದಂತೆ ಮಿಶ್ರ ಬೇಸಾಯ ಅವಲಂಬಿಸಿರುವ ರೈತ ಕುಟುಂಬಗಳಲ್ಲಿ ಆತ್ಮಹತ್ಯೆಯಾಗಿಲ್ಲ. ಹೀಗಾಗಿ ಏಕಕೃಷಿ ಬದಲಾಗಿ ಬಹುಕೃಷಿ ವ್ಯವಸ್ಥೆ ಅನುಸರಿಸುವುದು ಫಲಪ್ರದವಾಗಲಿದೆ ಎಂದು ಹೇಳಿದರು.

ಆಹಾರ ಸಂಸ್ಕರಣೆ ಜತೆಗೆ ಬೇಸಾಯದಲ್ಲೂ ಕೃಷಿ ಯಂತ್ರೋಪಕರಣಗಳ ಬಳಕೆ, ರೇಷ್ಮೆ ಕೃಷಿಗೆ ಆದ್ಯತೆ ನೀಡಿ ಕೃಷಿಯನ್ನು ಪರಿಸರ ಸ್ನೇಹಿಯನ್ನಾಗಿಸಬೇಕು. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ, ಬದಲಾಗುವ ಹವಾಗುಣಕ್ಕೆ ಹೊಂದಿಕೊಳ್ಳುವಂತೆ ತಳಿಗಳ ಬಳಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ಕೈ ಜೋಡಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ರೈತರ ಆದಾಯ ದ್ವಿಗುಣಗೊಳಿಸಲು ಈ ಯೋಜನೆ ಜಾರಿಗೆ ತಂದಿದ್ದು, ಇದರ ಅನುಷ್ಠಾನಕ್ಕೆ ಕೃಷಿ ವಲಯದ ಪ್ರತಿಯೊಬ್ಬರೂ ಸಹಕರಿಸಬೇಕಿದೆ ಎಂದು ಕರೆ ನೀಡಿದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್ ಮಾತನಾಡಿ, ದೇಶದ 555 ಜಿಲ್ಲೆಗಳಲ್ಲಿ 3049 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ರೋಗಿಗಳಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧ ಸಿಗುವಂತಾಗಿದೆ. ಈ ಮೊದಲು ಹೃದ್ರೋಗಿಗಳಿಗೆ ದುಬಾರಿಯಾಗಿದ್ದ ಸ್ಟಂಟ್ ಹಾಗೂ ಮಂಡಿಗೆ ಅಳವಡಿಸಲಾಗುವ ಕ್ಯಾಪ್‍ಗಳ ಬೆಲೆಯನ್ನು ಸಾಕಷ್ಟು ತಗ್ಗಿಸಲಾಗಿದೆ. ಹೃದಯಕ್ಕೆ ಅಳವಡಿಸುವ ಸ್ಟಂಟ್‍ಗಳು 31 ಸಾವಿರ ರೂ., ಮಂಡಿಯ ಕ್ಯಾಪ್‍ಗಳು 55 ಸಾವಿರ ರೂ.ಗಳಲ್ಲಿ ದೊರೆಯಲಿದೆ.

ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಗ್ರಾಮ ಸಡಕ್ ಎಂಬ ಯೋಜನೆ ಜಾರಿಗೊಳಿಸಿ 6 ಲಕ್ಷ ಹಳ್ಳಿಗಳಿಗೆ ರಸ್ತೆ ಸಂಪರ್ಕ, ಇದೀಗ ಮೋದಿ ಸರ್ಕಾರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯನ್ನು ವೆಂಕಯ್ಯನಾಯ್ಡು ಆರಂಭಿಸಿದ್ದು, ಉತ್ತಮ ಯೋಜನೆಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಅದಮ್ಯ ಚೇತನದ ಮೂಲಕ ಸಸ್ಯಾಗ್ರಹ ಯೋಜನೆಯನ್ನು ಆರಂಭಿಸಿದ್ದು, ಅದರಲ್ಲಿ ಒಂದೂವರೆ ವರ್ಷದಲ್ಲಿ 1.5 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ ಎಂದರು.

ರಾಜ್ಯಪಾಲ ವಿ.ಆರ್.ವಾಲಾ ಮಾತನಾಡಿ, ಕೃಷಿ ದೇಶದ ಬೆನ್ನೆಲುಬು. ಕೃಷಿಗೆ ನೀರು ಬೆನ್ನೆಲುಬು. ನೀರು ಅತಿ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಹರಿಯುವ ನೀರನ್ನು ತಡೆದು ಬಳಸಬೇಕಿದೆ. ಅದಕ್ಕಾಗಿ ರೂಪಿಸಲಾಗಿರುವ ಅಂತರ್‍ನದಿ ಜೋಡಣೆ ಕಾರ್ಯಗತವಾಗಬೇಕಿದೆ ಎಂದರು. ರೈತರಿಗೆ ಮಣ್ಣು, ಆರೋಗ್ಯ ಕಾರ್ಡ್ ನೀಡಿದರೆ ಅದರಿಂದ ಕೃಷಿಯಲ್ಲಿ ಹೆಚ್ಚು ರಾಸಾಯನಿಕ ಬಳಸುವುದನ್ನು ತಡೆಗಟ್ಟಬಹುದು. ಮಣ್ಣಿನಲ್ಲಿ ಎಷ್ಟರ ಪ್ರಮಾಣದಲ್ಲಿ ಅಗತ್ಯ ಪೋಷಕಾಂಶಗಳಿವೆ ಎಂಬುದನ್ನು ಅರಿತು ಹೆಚ್ಚಿನ ಅಗತ್ಯವಿರುವಷ್ಟು ಮಾತ್ರ ರಾಸಾಯನಿಕ ಬಳಕೆ ಮಾಡಿರುವುದರಿಂದ ಕೃಷಿ ಲಾಭದಾಯಕವಾಗಲಿದೆ ಎಂದು ಹೇಳಿದರು.  ಗುಜರಾತ್‍ನ ಕಚ್‍ನಲ್ಲಿ ಗಡಸು ನೀರು ಬಳಸಿ ಕೃಷಿ ಮಾಡಲಾಗುತ್ತಿದೆ. ಇಂತಹ ಪ್ರಯೋಗಗಳಿಂದ ಗ್ರಾಮೀಣ ಭಾಗದ ಜನರು ವಲಸೆ ಹೋಗುವುದನ್ನು ತಡೆಯಬಹುದಾಗಿದೆ. ನಗರದಲ್ಲಿ ಸಿಗುವ ಮೂಲ ಸೌಲಭ್ಯಗಳನ್ನು ಗ್ರಾಮೀಣ ಭಾಗದಲ್ಲೂ ಒದಗಿಸಬೇಕಿದೆ ಎಂದು ಹೇಳಿದರು.

Facebook Comments

Sri Raghav

Admin