ಹಿಂದುತ್ವದ ಟ್ರಂಪ್‍ಕಾರ್ಡ್ ಬಳಸಲು ಮುಂದಾದ ಕಾಂಗ್ರೆಸ್, ಕರ್ನಾಟಕದ ಮಠ-ಮಂದಿರಗಳಿಗೆ ರಾಹುಲ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Rahul-Team--01

ಬೆಂಗಳೂರು, ಜ.19- ಹಿಂದುತ್ವದ ಟ್ರಂಪ್‍ಕಾರ್ಡ್ ಅನ್ನು ಕಾಂಗ್ರೆಸ್ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಫೆಬ್ರವರಿಯ ಎರಡನೆ ವಾರದಲ್ಲಿ ರಾಜ್ಯಕ್ಕೆ ಭೇಟಿ ನೀಡಲು ಮುಂದಾಗಿರುವ ರಾಹುಲ್‍ಗಾಂಧಿ ದೇವಸ್ಥಾನಗಳಿಗೆ, ಮಠ-ಮಂದಿರಗಳಿಗೆ ತೆರಳಲು ಸಿದ್ಧರಾಗಿದ್ದಾರೆ. ಗುಜರಾತ್‍ನಂತೆ ಮೃದು ಹಿಂದುತ್ವ ಪ್ರತಿಪಾದನೆಗೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲೂ ದೇವಾಲಯಗಳಿಗೆ ಭೇಟಿ ನೀಡಲು ಮುಂದಾಗಿದೆ.  ಎಐಸಿಸಿ ಅಧ್ಯಕ್ಷರಾದ ಮೇಲೆ ರಾಜ್ಯಕ್ಕೆ ಮೊದಲ ಬಾರಿಗೆ ಫೆ.10ರಂದು ಭೇಟಿ ನೀಡಲಿರುವ ರಾಹುಲ್‍ಗಾಂಧಿಯವರು ಹಲವು ದೇವಸ್ಥಾನಗಳಿಗೆ ಭೇಟಿ ಕೊಡಲು ಮುಂದಾಗಿದ್ದಾರೆ. ಈ ಮೂಲಕ ಗುಜರಾತ್ ಮಾದರಿ ಅನುಸರಿಸಿ ಹಿಂದೂಗಳ ಮತ ಸೆಳೆಯಲು ಹೊಸ ಕಾರ್ಯತಂತ್ರ ರೂಪಿಸಲು ತೊಡಗಿದ್ದಾರೆ.

ಗುಜರಾತ್‍ನಲ್ಲಿ ಶಿವ ದೇವಾಲಯ, ವಿಷ್ಣು ದೇವಾಲಯ ಸೇರಿದಂತೆ ಹತ್ತಾರು ದೇವಾಲಯಗಳಿಗೆ ರಾಹುಲ್‍ಗಾಂಧಿಯವರು ಭೇಟಿ ನೀಡಿದ್ದು ದೊಡ್ಡಮಟ್ಟದ ಸುದ್ದಿಯಾಗಿತ್ತು ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಅದೇ ರೀತಿ ಫೆ.10ಕ್ಕೆ ರಾಜ್ಯಕ್ಕೆ ಆಗಮಿಸಿರುವ ರಾಹುಲ್‍ಗಾಂಧಿಯವರು ಶೃಂಗೇರಿ ಮಠ, ಕೃಷ್ಣ ಮಠಕ್ಕೆ ಭೇಟಿ ಕೊಡಲಿದ್ದಾರೆ. ಈ ಹಿಂದೆ ಇಂದಿರಾಗಾಂಧಿ, ರಾಜೀವ್‍ಗಾಂಧಿಯವರು ಶೃಂಗೇರಿ ಮಠದ ಭಕ್ತರಾಗಿದ್ದರು ಮತ್ತು ಆಗಾಗ್ಗೆ ಭೇಟಿ ಕೊಡುತ್ತಿದ್ದರು. ಈಗ ರಾಹುಲ್‍ಗಾಂಧಿಯವರ ಶೃಂಗೇರಿ ಮಠಕ್ಕೆ ಭೇಟಿ ಕೊಡುತ್ತಿರುವುದು ಅತ್ಯಂತ ವಿಶೇಷವಾಗಿದೆ. ಚುನಾವಣೆ ಸಂದರ್ಭದಲ್ಲಿ ಈ ಭೇಟಿ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತಿದೆ.

ಗುಜರಾತ್‍ನಲ್ಲಿ ರಾಹುಲ್‍ಗಾಂಧಿಯವರ ದೇವಸ್ಥಾನಗಳ ಭೇಟಿ ಮಾಧ್ಯಮಗಳಲ್ಲಿ ಟೆಂಪಲ್ ರನ್ ಎಂದೇ ಚರ್ಚೆಗೆ ಗ್ರಾಸವಾಗಿತ್ತು ಮತ್ತು ಹೆಚ್ಚು ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿತ್ತು. ಅದೇ ಮಾದರಿಯನ್ನು ಕರ್ನಾಟಕದಲ್ಲಿ ಅನುಸರಿಸಲು ರಾಹುಲ್‍ಗಾಂಧಿಯವರು ನಿರ್ಧರಿಸಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ದೇವಸ್ಥಾನಗಳಿಗೆ ಭೇಟಿ ಕೊಡಲು ಶುರುವಿಟ್ಟುಕೊಂಡಿದ್ದಾರೆ. ಚಾಮುಂಡೇಶ್ವರಿ, ಮಲೆ ಮಹದೇಶ್ವರ, ಬೆಂಗಳೂರಿನ ಕೋಟೆ ವೆಂಕಟರಮಣ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಿಗೆ ಭೇಟಿ ಕೊಟ್ಟಿದ್ದರು.

ಮಲೆ ಮಹದೇಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದಲ್ಲದೆ ವಿಶೇಷ ಪೂಜೆ ಸಲ್ಲಿಸಿದ್ದರು. ತಮಗೆ ಬಂದ ಬೆಳ್ಳಿ ಉಡುಗೊರೆಗಳನ್ನು ಮಲೆ ಮಹದೇಶ್ವರನ ರಥ ನಿರ್ಮಿಸಲು ಅರ್ಪಣೆ ಕೂಡ ಮಾಡಿದ್ದರು. ಈಗ ರಾಹುಲ್‍ಗಾಂಧಿಯವರು ಆಗಮಿಸಿ ದೇವಾಲಯಗಳಿಗೆ ತೆರಳಿ ಆಸ್ತಿಕರನ್ನು ಆಕರ್ಷಿಸುತ್ತಿದ್ದಾರೆ. ದೇವರು, ಧರ್ಮ, ಗೋಹತ್ಯೆ ನಿಷೇಧ ಮುಂತಾದ ವಿಷಯಗಳು ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಚುನಾವಣೆ ಸಂದರ್ಭದಲ್ಲಿ ಈ ವಿಷಯಗಳು ಇನ್ನಷ್ಟು ಚರ್ಚಿತವಾಗುತ್ತವೆ. ಹಿಂದುತ್ವದ ವಿಷಯವು ಕೂಡ ಚರ್ಚೆಯ ಮುನ್ನೆಲೆಗೆ ಬರಲಿದೆ. ಹಾಗಾಗಿ ಮೃದು ಹಿಂದುತ್ವವನ್ನು ಪ್ರತಿಪಾದಿಸಲು ಕಾಂಗ್ರೆಸ್ ಮುಂದಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮದು ಮೃದು ಹಿಂದುತ್ವ, ಕಠಿಣ ಹಿಂದುತ್ವವಲ್ಲ, ಮಾನವೀಯತೆಯ ಹಿಂದುತ್ವ ಎಂದು ಹೇಳಿದ್ದಾರೆ. ಹಿಂದುತ್ವದ ಟ್ರಂಪ್‍ಕಾರ್ಡ್‍ಅನ್ನು ಕಾಂಗ್ರೆಸ್ ಕೂಡ ಬಳಕೆ ಮಾಡಿಕೊಳ್ಳಲು ಸಿದ್ಧವಾಗಿದೆ.

Facebook Comments

Sri Raghav

Admin