ತುಮಕೂರು ನಗರದ ಮನೆಯೊಂದಕ್ಕೆ ನುಗ್ಗಿದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

Tumakuru--01

ತುಮಕೂರು, ಜ.20- ಕಲ್ಪತರು ನಾಡಿಗೂ , ಕಾಡು ಪ್ರಾಣಿಗಳಿಗೂ ಎಲ್ಲಿಲ್ಲದ ಸಂಬಂಧವೋ ಗೊತ್ತಿಲ್ಲ. ಪದೇ ಪದೇ ಕಾಡು ಪ್ರಾಣಿಗಳು ನಗರಕ್ಕೆ ಭೇಟಿ ನೀಡುತ್ತಲೇ ಇರುತ್ತವೆ. ಇಂದು ಬೆಳ್ಳಂ ಬೆಳಗ್ಗೆ ನಗರದ ಹೃದಯ ಭಾಗದಲ್ಲಿರುವ ಮನೆಯೊಂದಕ್ಕೆ ಚಿರತೆಯೊಂದು ನುಗ್ಗಿ ಭಾರೀ ಆತಂಕ ಸೃಷ್ಟಿಸಿತ್ತು.
ಈ ಹಿಂದೆ ಪುರಸ್ ಕಾಲೋನಿಯಲ್ಲಿ ಚಿರತೆ, ಕರಡಿ, ಎಸ್.ಎಸ್.ಪುರದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದವು. ಇದೀಗ ಬೆಳ್ಳಂ ಬೆಳಗ್ಗೆ ಜಯನಗರದ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ರಂಗನಾಥ್ ಎಂಬುವರ ಮನೆಗೆ ಸುಮಾರು 8 ವರ್ಷದ ಚಿರತೆಯೊಂದು ನುಗ್ಗಿ ಭಾರೀ ಆತಂಕ ಸೃಷ್ಟಿಸಿತ್ತು.

ಇಂದು ಬೆಳಗ್ಗೆ ಉದ್ಯಾನವನದಲ್ಲಿ ವಾಯು ವಿಹಾರಿಗಳ ಕಣ್ಣಿಗೆ ಕಾಣಿಸಿಕೊಂಡ ಚಿರತೆ ಸಾರ್ವಜನಿಕರ ಗಲಾಟೆಯಿಂದ ಗಾಬರಿಗೊಂಡು ಪಕ್ಕದಲ್ಲೇ ಇದ್ದ ರಂಗನಾಥ್ ಅವರ ಮನೆಗೆ ನುಗ್ಗಿದ ಚಿರತೆ ಮಂಚದ ಕೆಳಗೆ ಅಡಗಿ ಕುಳಿತಿದ್ದು , ರಂಗನಾಥ್ ಅವರ ಪತ್ನಿಯೂ ಸಹ ಮನೆಯ ಕೋಣೆಯೊಂದರಲ್ಲಿ ಸೇರಿಕೊಂಡಿದ್ದು , ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಹೆದರಿ ಬಾಗಿಲು ಹಾಕಿಕೊಂಡಿದ್ದಾರೆ.   ಸುದ್ದಿ ಕಾಡ್ಗಿಚ್ಚಿನಂತೆ ನಗರದ ತುಂಬೆಲ್ಲಾ ಹರಡಿ ಅಕ್ಕಪಕ್ಕದ ನಿವಾಸಿಗಳು ಸೇರಿದಂತೆ ಭಾರೀ ಜನ ಸಮೂಹವೇ ಚಿರತೆ ನೋಡಲು ಮನೆಯ ಮುಂದೆ ಜಮಾಯಿಸಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜಯನಗರ ಠಾಣೆಯ ಪೊಲೀಸರು ನಗರದ ಶಾಸಕ ರಫೀಕ್ ಅಹಮದ್ ಭೇಟಿ ನೀಡಿ ಮನೆಯ ಹೊರಗಿದ್ದ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ.

ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿ ಪತ್ರಿಕೆಯೊಂದಿಗೆ ಮಾತನಾಡಿ, ಚಿರತೆ ಮನೆಯಲ್ಲಿ ಇರುವುದರಿಂದ ನೇರವಾಗಿ ಅದನ್ನು ಹಿಡಿಯಲು ಕಷ್ಟ ಸಾಧ್ಯ. ಅರವಳಿಕೆ ಮದ್ದನ್ನು ನೀಡಿಯೇ ಹಿಡಿಯಬೇಕು. ಹಾಗಾಗಿ ಬನ್ನೇರುಘಟ್ಟದಿಂದ ಅರವಳಿಕೆ ತಜ್ಞ ಡಾ.ಸುಜಯ್ ಅವರನ್ನು ಕರೆಸಿ ಕೊಳ್ಳಲಾಗುತ್ತಿದೆ. ಕುಟುಂಬ ಸದಸ್ಯರು ಆತಂಕಕ್ಕೆ ಒಳಗಾಗಬೇಡಿ. ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಪದೇ ಪದೇ ಕಾಡು ಪ್ರಾಣಿಗಳು ನಗರಕ್ಕೆ ಭೇಟಿ ನೀಡುತ್ತಿದ್ದು , ಸಾರ್ವಜನಿಕರು ದಿಗ್ಭ್ರಾಂತಕ್ಕೊಳಗಾಗಿದ್ದಾರೆ. ಕಾಡು ಪ್ರಾಣಿಗಳು ನಗರಕ್ಕೆ ಬರದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಲವು ಕ್ರಮ ಕೈಗೊಂಡಿದ್ದರೂ ಪದೇ ಪದೇ ಭೇಟಿ ನೀಡುತ್ತಿರುವುದು ನಗರರದ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.

ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ರಾಮಲಿಂಗೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ, ಸಬ್ ಇನ್ಸ್‍ಪೆಕ್ಟರ್ ರಾಧಾ ಕೃಷ್ಣ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

Facebook Comments

Sri Raghav

Admin