ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವವರಿಗೆ ಶೇ.30ರಷ್ಟು ಸಬ್ಸಿಡಿ

ಈ ಸುದ್ದಿಯನ್ನು ಶೇರ್ ಮಾಡಿ

 

Anant-Kumar--02

ಬೆಂಗಳೂರು, ಜ.20- ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಶೇ.30ರಷ್ಟು ಸಬ್ಸಿಡಿ ಕೊಡಿಸುವುದಾಗಿ ಕೇಂದ್ರ ಸಚಿವ ಅನಂತ್‍ಕುಮಾರ್ ಇಂದಿಲ್ಲಿ ಭರವಸೆ ನೀಡಿದರು. ಯಡಿಯೂರು ವಾರ್ಡ್‍ನ ಸೌತ್‍ಎಂಡ್ ವೃತ್ತದ ಸಮೀಪ ಅಳವಡಿಸಲಾಗಿರುವ 5 ಟನ್ ಸಾಮಥ್ರ್ಯದ ಜೈವಿಕ ಅನಿಲ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಯಡಿಯೂರು ವಾರ್ಡ್‍ನಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಇಂತಹ ಯೋಜನೆಗಳಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ. ಹೀಗಾಗಿ ಸಬ್ಸಿಡಿ ನೀಡುವ ಕುರಿತಂತೆ ಮೇಯರ್ ಅವರು ಪತ್ರ ನೀಡಿದರೆ ಪ್ರಧಾನಿ ನರೇಂದ್ರಮೋದಿಯವರೊಂದಿಗೆ ಮಾತನಾಡಿ ಒಂದು ವಾರದಲ್ಲೇ ಸಬ್ಸಿಡಿ ಹಣ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅದೇ ರೀತಿ ಕಸದಿಂದ ವಿದ್ಯುತ್ ಉತ್ಪಾದಿಸುವಾಗ ದೊರೆಯುವ ದ್ರವರೂಪದ ಗೊಬ್ಬರಕ್ಕೆ ಸಂಪೂರ್ಣ ವಿನಾಯಿತಿ ಕೊಡಿಸಲು ಶ್ರಮ ವಹಿಸಲಾಗುವುದು ಎಂದರು. ಮೇಯರ್ ಸಂಪತ್‍ರಾಜ್ ಮಾತನಾಡಿ, ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಹಾಗೂ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರ ಕಾರ್ಯ ಶ್ಲಾಘನೀಯ. ನನ್ನ ವಾರ್ಡ್‍ನಲ್ಲೂ ಈ ಕೂಡಲೇ ಜೈವಿಕ ಅನಿಲ ಘಟಕ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು. ಮಾತ್ರವಲ್ಲ, ಎಲ್ಲ ವಾರ್ಡ್‍ಗಳಲ್ಲೂ ಈ ರೀತಿಯ ಯೋಜನೆಗಳನ್ನು ಜಾರಿಗೊಳಿಸುವಂತೆ ಬಿಬಿಎಂಪಿ ಸದಸ್ಯರುಗಳಿಗೆ ಮೇಯರ್ ಮನವಿ ಮಾಡಿಕೊಂಡರು.
ಎನ್.ಆರ್.ರಮೇಶ್ ಮಾತನಾಡಿ, ಜೈವಿಕ ಅನಿಲ ಘಟಕ ಸ್ಥಾಪಿಸಿರುವುದರಲ್ಲಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ವಾರ್ಡ್ ಎಂಬ ಹೆಗ್ಗಳಿಕೆ ಯಡಿಯೂರಿಗೆ ಸಂದಿದೆ ಎಂದರು.

ಹಸಿತ್ಯಾಜ್ಯವನ್ನು ಮೀಥೇಲ್ ಅನಿಲವನ್ನಾಗಿ ಪರಿವರ್ತಿಸಿ ಅದರಿಂದ ವಿದ್ಯುತ್ ಉತ್ಪಾದಿಸಲಾಗುವುದು. ಪ್ರತಿನಿತ್ಯ ಉತ್ಪಾದನೆಯಾಗುವ 250 ಕಿಲೋವ್ಯಾಟ್ ವಿದ್ಯುತ್‍ಅನ್ನು ವಾರ್ಡ್‍ನಲ್ಲಿರುವ ಅಂಬರ ಚುಂಬನ ಗಡಿಯಾರ ಗೋಪುರ, ನವತಾರೆ ಬ್ಯಾಡ್ಮಿಂಟನ್ ಅಕಾಡೆಮಿ, ರಣಧೀರ ಕಂಠೀರವ ಉದ್ಯಾನವನ, ಚೈತನ್ಯ ಉದ್ಯಾನವನ, ಚಂದವಳ್ಳಿಯ ತೋಟ, ಧನ್ವಂತರಿ ವನ, ಸಂಜೀವಿನಿ ವನ ಹಾಗೂ ಪಾದಚಾರಿ ಮಾರ್ಗದಲ್ಲಿ 1 ಕಿಲೋ ಮೀಟರ್ ಉದ್ದದವರೆಗೂ ಅಳವಡಿಸಿರುವ ಅಲಂಕಾರಿಕ ದೀಪ ಬೆಳಗಿಸಲು ಮತ್ತು ಆರು ಕೊಳವೆ ಬಾವಿಗಳ ಪಂಪ್‍ಸೆಟ್‍ಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಜೈವಿಕ ಅನಿಲ ಘಟಕದಿಂದ ಪ್ರತಿ ತಿಂಗಳು ಖರ್ಚಾಗುತ್ತಿದ್ದ ಆರೂವರೆ ಲಕ್ಷ ರೂ. ಉಳಿತಾಯವಾಗುತ್ತಿದೆ. ಇದರ ಜತೆಗೆ ಇಲ್ಲಿರುವ 17 ಪಾಲಿಕೆ ಕಟ್ಟಡಗಳಿಗೆ ಸೌರ ವಿದ್ಯುತ್ ಪೂರೈಸುವ ಉದ್ದೇಶದಿಂದ ಧನ್ವಂತರಿ ಮತ್ತು ಸಂಜೀವಿನಿ ವನದ ನಡುವೆ ಇರುವ ವಾಯು ವಿಹಾರ ಮಾರ್ಗದಲ್ಲಿ ಸೌರ ವಿದ್ಯುತ್ ಫಲಕ ಅಳವಡಿಸುವ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

 

Facebook Comments

Sri Raghav

Admin