‘ನರಗುಂದ ಬಂಡಾಯ’ ಟ್ರೈಲರ್ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

Naragunda-Bandaya

1980ರಲ್ಲಿ ನಡೆದ ರೈತ ಹೋರಾಟದ ನೈಜ ಘಟನೆಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರ ನರಗುಂದ ಬಂಡಾಯ ನಾಗೇಂದ್ರ ಮಾಗಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಲಿರಿಕಲ್ ವಿಡಿಯೋ ಟೀಸರ್ ಇತ್ತೀಚೆಗೆ ಅನಾವರಣಗೊಂಡಿತು. ಉತ್ತರ ಕರ್ನಾಟಕ ಭಾಗದವರೇ ಆದ ಸಿದ್ದೇಶ ವಿರಕ್ತಮಠ ಈ ಚಿತ್ರದ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ರಕ್ಷಿತ್, ಶುಭಾಪುಂಜಾ ಪ್ರಮುಖ ಪತ್ರಗಳಲ್ಲಿ ನಟಿಸಿದ್ದಾರೆ. ಸಂಗೊಳ್ಳಿರಾಯಣ್ಣ ಚಿತ್ರಕ್ಕೆ ಡೈಲಾಗ್ ರಚಿಸಿದ್ದ ಕೇಶವಾದಿತ್ಯ ಈ ಚಿತ್ರಕ್ಕೂ ಸಂಭಾಷಣೆಗಳನ್ನು ಬರೆದಿದ್ದಾರೆ. ಯಶೋವರ್ಧನ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಗಿರಿ ಈ ಚಿತ್ರದ ಛಾಯಾಗ್ರಾಹಕರು. ಕೌರವ ವೆಂಕಟೇಶ್ ಸಾಹಸ ಸಂಯೋಜಕರು.

ಈ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ಸಿದ್ದೇಶ್ ವಿರಕ್ತಿಮಠ, ಪತ್ರಕರ್ತರ ಸಹಕಾರದಿಂದ ನಾನು ಈವರೆಗೆ ಬಂದೆ. ನರಗುಂದ ಬಂಡಾಯ ಕಥೆಯನ್ನು ನಾನೇ ಬರೆದೆ. ಕಳೆದ 8 ವರ್ಷಗಳಿಂದ ಈ ಕಥೆಯನ್ನು ಹಿಡಿದುಕೊಂಡು ಹಲವಾರು ಕಲಾವಿದರ ಬಳಿ ಅಲೆದಾಡಿದೆ. ಎಲ್ಲರೂ ಚೆನ್ನಾಗಿದೆ ಎಂದರು. ಆದರೆ ಅವರು ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿರಲಿಲ್ಲ. ಅಂಥಾ ಸಮಯದಲ್ಲಿ ನಾಗೇಂದ್ರ ಮಾಗಡಿ ಸಿಕ್ಕರು. ನರಗುಂದ ಬಂಡಾಯ ನನ್ನ ಬಹುದಿನಗಳ ಕನಸು. 1854ರಿಂದ ಈವರೆವಿಗೂ ಅದು ಬಂಡಾಯ ಭೂಮಿ. ಅಲ್ಲಿನ ರೈತಾಪಿ ವರ್ಗದ ಸಮಸ್ಯೆಗಳನ್ನು ಈಗಲೂ ಬಗೆಹರಿಸಲಾಗಿಲ್ಲ. ನಿರ್ದೇಶಕರು ತುಂಬಾ ನೀಟಾಗಿ ಸಿನಿಮಾವನ್ನು ಮಾಡಿ ಕೊಡುತ್ತಿದ್ದಾರೆ. ಶೇ.25ರಷ್ಟು ಶೂಟಿಂಗ್ ಬಾಕಿ ಇದೆ ಎಂದು ಹೇಳಿದರು. ನಿರ್ದೇಶಕ ನಾಗೇಂದ್ರ ಮಾಗಡಿ ಮಾತನಾಡಿ, ನಾನು ಈವರೆಗೆ 13 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರೂ ಇದು ನನಗೆ ವಿಶೇಷ ಸಿನಿಮಾ. ಚಿತ್ರದ 90ಕ್ಕೂ ಹೆಚ್ಚು ಭಾಗ ಘಟನೆ ನಡೆದ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಣ ಮಾಡಿದ್ದೇವೆ. ರೈತರಿಗೆ ಮುಂದೆ ಇಂಥ ಸಮಸ್ಯೆ ಆಗಬಾರದು ಎಂಬುದೇ ಈ ಸಿನಿಮಾದ ಉದ್ದೇಶ ಎಂದು ಹೇಳಿದರು. ಸಂಭಾಷಣೆ ಬರೆದ ಕೇಶವಾದಿತ್ಯ ಮಾತನಾಡಿ, ಒಬ್ಬ ರೈತನ ಹೋರಾ ಟದ ಕಥೆಯಿದು. ಆ ರೈತ ಹೇಗೆ, ಏಕೆ ಬಂಡಾಯ ಎದ್ದ ಅಂತ ಈ ಸಿನಿಮಾ ಹೇಳಿಕೊಂಡು ಹೋಗುತ್ತದೆ ಎಂದರು. ನಟ ನೀನಾಸಂ ಅಶ್ವಥ್, ರಕ್ಷಿತ್, ಶುಭ ಪುಂಜಾ ಪಾತ್ರಗಳ ಬಗ್ಗೆ ಮಾತನಾಡಿದರು.

Facebook Comments

Sri Raghav

Admin