ಬೆಂಗಳೂರಿನ ಮುಗ್ಧ ಮಹಿಳೆಯರೇ ಹುಷಾರ್..ಹುಷಾರ್… !

ಈ ಸುದ್ದಿಯನ್ನು ಶೇರ್ ಮಾಡಿ

chain--snatcher

– ರಾಮಸ್ವಾಮಿ ಕಣ್ವ
ಬೆಂಗಳೂರು,ಜ.20-ಅಂತರ್ ರಾಜ್ಯ ಸರಗಳ್ಳರ ಗ್ಯಾಂಗ್‍ವೊಂದು ರಾಜಧಾನಿ ಬೆಂಗಳೂರು ನಗರಕ್ಕೆ ಬಂದು ನಿರಂತರವಾಗಿ ಮಹಿಳೆಯರ ಸರಗಳನ್ನು ಅಪಹರಿಸುತ್ತಿದೆ. ಇರಾನಿ ಅಥವಾ ಬವಾರಿಯ ಗ್ಯಾಂಗ್ ಇರಬಹುದೆಂದು ಶಂಕಿಸಿರುವ ಬೆಂಗಳೂರು ನಗರ ಪೊಲೀಸರು ಈ ಗ್ಯಾಂಗ್‍ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಒರಿಸ್ಸಾ ಹಾಗೂ ಆಂಧ್ರಪ್ರದೇಶದ ಇರಾನಿ ಗ್ಯಾಂಗ್ ನಗರಕ್ಕೆ ಆಗಾಗ್ಗೆ ಬಂದು ನಗರದ ಹೊರವಲಯಗಳಲ್ಲಿನ ಲಾಡ್ಜ್‍ಗಳಲ್ಲಿ ಉಳಿದುಕೊಂಡು ನಿರಂತರವಾಗಿ ಮಹಿಳೆಯರ ಸರಗಳನ್ನು ಅಪಹರಿಸಿ ಪರಾರಿಯಾಗುತ್ತದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಇರಾನಿ ಗ್ಯಾಂಗ್‍ನ ದರೋಡೆಕೋರರು ವಿಶೇಷವಾಗಿ ಅಮಾಯಕ ಹಾಗೂ ಮುಗ್ಧ ಮಹಿಳೆಯರನ್ನೇ ಗುರುತಿಸಿ ಸರ ಅಪರಿಹರಿಸುತ್ತಿದ್ದಾರೆ. ವಿಳಾಸ ಅಥವಾ ನೀರು ಕೇಳವಂತೆ ನಟಿಸಿ ಅಥವಾ ಪರಿಚಯಸ್ಥರ ಮನೆ ಯಾವುದೆಂದು ಕೇಳುವ ನೆಪದಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಸರ ಕಸಿಯುವುದು ಈ ಗ್ಯಾಂಗ್‍ನ ಕಾರ್ಯ ವಿಧಾನ. ಮುಂಜಾನೆಯೇ ಕಾರ್ಯಾಚರಣೆಗಿಳಿಯುವ ಈ ಗ್ಯಾಂಗ್ ಒಂದೇ ದಿನ ನಿರಂತರವಾಗಿ 5ರಿಂದ 6ಕ್ಕೂ ಹೆಚ್ಚು ಸರಗಳನ್ನು ಅಪಹರಣ ಮಾಡಿಕೊಂಡು ಮೊದಲೇ ಬಾಡಿಗೆ ಪಡೆದ ಲಾಡ್ಜ್‍ಗೆ ಹೋಗಿ ಸೇರಿಕೊಳ್ಳುತ್ತದೆ. ಈ ಗ್ಯಾಂಗ್‍ನ ಬಹುತೇಕ ಸದಸ್ಯರು ಎತ್ತರವಾಗಿದ್ದು, ಗೌರವರ್ಣ ಹೊಂದಿರುತ್ತಾರೆ. ಒಳ್ಳೆಯ ಬಟ್ಟೆ ಧರಿಸಿ ಟಾಕುಟೀಕಾಗಿರುತ್ತಾರೆ.

ಬವಾರಿಯ ಗ್ಯಾಂಗ್:

ಉತ್ತರ ಪ್ರದೇಶ ಶಾಮ್ಲ ಜಿಲ್ಲೆಯ ಐದಾರು ಹಳ್ಳಿಗಳಲ್ಲಿ ಬವಾರಿಯ ಗ್ಯಾಂಗ್‍ನ ಸಮುದಾಯದ ಇದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಸಮುದಾಯದ ಕೆಲವರು ಗ್ಯಾಂಗ್ ಕಟ್ಟಿಕೊಂಡಿದ್ದಾರೆ.  ಮೊದ ಮೊದಲು ರಸ್ತೆ ದರೋಡೆ ಮಾಡುತ್ತಿದ್ದ ಈ ಗ್ಯಾಂಗ್ ನಂತರ ರೈಲುಗಳಲ್ಲಿ ಪ್ರಯಾಣಿಕರ ಲಗೇಜ್ ಮತ್ತು ಸರಗಳನ್ನು ಕದಿಯುತ್ತಿದ್ದು, ಕೆಲವು ವರ್ಷಗಳಿಂದ ಬೇರೆ, ಬೇರೆ ರಾಜ್ಯಗಳಿಗೂ ಈ ಗ್ಯಾಂಗ್ ಹೋಗಿ ಕೈ ಚಳಕ ತೋರಿಸುತ್ತಿದೆ. 4ರಿಂದ 10 ಮಂದಿ ಇರುವ ಈ ಗ್ಯಾಂಗ್ ಬೆಂಗಳೂರಿಗೆ ಬಂದು ನಗರದ ಹೃದಯ ಭಾಗವಾದ ಉಪ್ಪಾರಪೇಟೆ, ಚಿಕ್ಕಪೇಟೆ, ಕೆ.ಆರ್.ಮಾರ್ಕೆಟ್, ಕಾಟನ್‍ಪೇಟೆಯಲ್ಲಿನ ಸಮೂಹ ವಿಶ್ರಾಂತಿ ಕೊಠಡಿ ಅಥವಾ ಕನಿಷ್ಪ ದಿನದ ಬಾಡಿಗೆ ಇರುವಂತಹ ಲಾಡ್ಜ್‍ಗಳಲ್ಲಿ ಉಳಿದುಕೊಳ್ಳುತ್ತದೆ.

ಕಳ್ಳತನ ಮಾಡಿದ ದ್ವಿಚಕ್ರ ವಾಹನ ಬಳಸಿ ನಗರದಲ್ಲಿ ಮುಂಜಾನೆ ಅಥವಾ ಸಂಜೆ ವೇಳೆ ಸುತ್ತಾಡಿ ಒಂದೇ ದಿನ ಕನಿಷ್ಟ 5ರಿಂದ 6 ಸರಗಳನ್ನು ಅಪಹರಿಸಿ ಬೈಕ್‍ನ್ನು ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿ ವಿಮಾನ ಅಥವಾ ರೈಲಿನಲ್ಲಿ ತಮ್ಮ ಊರಿಗೆ ಹೋಗುತ್ತಾರೆ. ದೃಢಕಾಯವಾಗಿರುವ ಇವರು ಹೆಚ್ಚಾಗಿ ಟೀಶರ್ಟ್ ಧರಿಸುತ್ತಾರೆ, ತಲೆಗೆ ಟೋಪಿ ಹಾಕಿಕೊಳ್ಳುತ್ತಾರೆ. ಹೆಚ್ಚಾಗಿ ಕಪ್ಪು ಬಣ್ಣದ ಬಟ್ಟೆಗಳನ್ನೇ ತೊಟ್ಟುಕೊಳ್ಳುತ್ತಾರೆ.  ಇರಾನಿ ಗ್ಯಾಂಗ್ ಪಾರ್ಕ್ ಬಳಿ, ನಡುರಸ್ತೆಯಲ್ಲಿ ಸರ ಅಪಹರಿಸಿದರೆ ಬವಾರಿಯ ಗ್ಯಾಂಗ್ ಸದಸ್ಯರು ಮನೆಗೇಟ್ ಬಳಿ, ಕಾಂಪೌಂಡ್ ಒಳಗೆ ನುಗ್ಗಿ ಸರ ಕಿತ್ತುಕೊಂಡು ಪರಾರಿಯಾಗುತ್ತಾರೆ.

ನರಿಯಂತೆ ಹೊಂಚು ಹಾಕಿ ಸರ ಅಪಹರಿಸುವ ಇರಾನಿ ಗ್ಯಾಂಗ್, ಚಿರತೆಯಂತೆ ಎಗರಿ ಮಹಿಳೆಯರ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ಕೆಳಗೆ ಬಿದ್ದರೂ ಬಿಡದೆ ಸರ ಕಿತ್ತುಕೊಂಡು ಹೋಗುವುದು ಬವಾರಿಯ ಗ್ಯಾಂಗ್ ಎಂಬುವುದು ಬೆಂಗಳೂರು ನಗರ ಪೊಲೀಸರ ತನಿಖೆ ಮತ್ತು ಅಧ್ಯಯನದಿಂದ ಕಂಡುಬಂದಿದೆ.
ರಾಜಧಾನಿ ಮಹಿಳೆಯರೇ ನೀವು ಓಡಾಡುವ ರಸ್ತೆಗಳಲ್ಲಿ ಅಥವಾ ನಿಮ್ಮ ಮನೆಗಳ ಬಳಿ `ನರಿ’ ಅಥವಾ `ಚಿರತೆ’ ಬರಬಹುದು ಹುಷಾರ್!

Facebook Comments

Sri Raghav

Admin