ಬೆಳ್ಳಂದೂರು ಕೆರೆಯಲ್ಲಿ ಬೆಂಕಿ, ಸುತ್ತಮುತ್ತಲ ನಿವಾಸಿಗಳಲ್ಲಿ ತೀವ್ರ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Bellanduru--01
ಬೆಂಗಳೂರು, ಜ.20- ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದು ಹೊಗೆ ಆವರಿಸಿಕೊಂಡಿರುವುದರಿಂದ ಸುತ್ತಮುತ್ತಲ ನಿವಾಸಿಗಳಲ್ಲಿ ತೀವ್ರ ಆತಂಕ ಮನೆ ಮಾಡಿದೆ. ನಿನ್ನೆಯಿಂದ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಅಗ್ನಿಶಾಮಕ ದಳದವರು, ಮಿಲಿಟರಿಯವರು ಬೆಂಕಿ ನಂದಿಸಿದ ನಂತರ ವ್ಯಾಪಕ ಹೊಗೆ ಆವರಿಸಿದ್ದು, ಇಲ್ಲಿನ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಮಿಲಿಟರಿಯ ಯೋಧರೊಬ್ಬರಿಗೆ ಹಾವು ಕಚ್ಚಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ಳಂದೂರು ಕೆರೆಗೆ ಪದೇ ಪದೇ ಬೆಂಕಿ ಬೀಳುತ್ತಿದ್ದು, ಕೆರೆಯ ಸುತ್ತಮುತ್ತ ವಾಸ ಮಾಡುವುದೇ ದುಸ್ತರವಾಗಿದೆ.

ದಟ್ಟ ಹೊಗೆ ಆವರಿಸಿ ಜಾನುವಾರುಗಳು ಕೂಡ ಸಾವನ್ನಪ್ಪಿವೆ. ಬೆಳ್ಳಂದೂರು ಕೆರೆ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ವಿಷಯುಕ್ತ ಹೊಗೆಯಿಂದ ಜನರ ಉಸಿರಾಟಕ್ಕೂ ತೊಂದರೆಯಾಗುತ್ತಿದೆ. ಕೆರೆಯಲ್ಲಿ ಮತ್ತೆ ಮತ್ತೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಬೆಂಕಿ ಆರಿಸಲು ಅಗ್ನಿ ಶಾಮಕ ದಳದವರು ಹರಸಾಹಸ ಪಡುತ್ತಿದ್ದಾರೆ. ರಾಜಕಾರಣಿಗಳು, ಜನಪ್ರತಿನಿಧಿಗಳ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ಕೈಗಾರಿಕೆಗಳ ವಿಷಯುಕ್ತ ನೀರನ್ನು ಕೆರೆಗಳಿಗೆ ಬಿಡುತ್ತಿರುವುದರಿಂದ ರಾಸಾಯನಿಕ ನೀರು ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದು, ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ನ್ಯಾಯಾಲಯ ಸೂಕ್ತ ಕ್ರಮಕ್ಕೆ ಆದೇಶಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ. ನಿನ್ನೆ ಬೆಳಗ್ಗೆ 9.30ಕ್ಕೆ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತ್ತು. 12.30ರ ವೇಳೆಗೆ ಬೆಂಕಿ ಕೆರೆಯಲ್ಲಿ ವ್ಯಾಪಿಸಿತ್ತು. 2.30ರ ವೇಳೆಗೆ ಉಲ್ಬಣಗೊಂಡಿತ್ತು. ಮಿಲಿಟರಿಯವರು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ತೀವ್ರ ಪ್ರಯತ್ನಪಟ್ಟರು. ಅಗ್ನಿಶಾಮಕ ದಳದ 110 ಸಿಬ್ಬಂದಿ 24 ಗಂಟೆಗಳ ಕಾಲ ಬೆಂಕಿ ನಂದಿಸಿದ್ದಾರೆ. ಬೆಂಕಿ ಶಮನವಾದ ಮೇಲೆ ಹೊಗೆ ದಟ್ಟವಾಗಿ ಆವರಿಸಿ ಸುತ್ತಮುತ್ತಲ ನಿವಾಸಿಗಳು ಉಸಿರಾಡುವುದು ಕಷ್ಟಸಾಧ್ಯವಾಗಿದೆ. ಶಾಲಾ-ಕಾಲೇಜುಗಳ ಮಕ್ಕಳು, ಕೆಲಸಕ್ಕೆ ಹೋಗುವವರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮಿಲಿಟರಿ ಕ್ಯಾಂಪ್ ಏರಿಯಾಗೆ ಬೆಂಕಿ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಸ್ಥಳಕ್ಕೆ ಮೇಯರ್ ಸಂಪತ್‍ರಾಜ್, ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin