ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದವನಿಗೆ 3 ವರ್ಷ ಜೈಲು ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Munavar-Police
ಬೆಂಗಳೂರು, ಜ.21- ಕರ್ತವ್ಯನಿರತ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯೊಬ್ಬನಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.  ಅಂಜನಾನಗರ, ಆವಲಹಳ್ಳಿ ನಿವಾಸಿ ಮುನಾವರ್ ಪಾಷ (37) ಎಂಬಾತನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.2014ರ ಫೆಬ್ರವರಿ 23ರಂದು ರಾತ್ರಿ ಲಾಲ್‍ಬಾಗ್ ವೆಸ್ಟ್‍ಗೇಟ್ ಬಳಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದ ಬಸವನಗುಡಿ ಸಂಚಾರ ಠಾಣೆಯ ಮುಖ್ಯಪೇದೆ ಶಾಂತವೀರಣ್ಣ ಎಂಬುವರಿಗೆ ಮುನಾವರ್‍ಪಾಷ ವಿನಾಕಾರಣ ಜಗಳ ತೆಗೆದು ಹಲ್ಲೆ ಮಾಡಿದ್ದ. ಈ ಸಂಬಂಧ ಶಾಂತವೀರಣ್ಣ ಅವರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಘಟನೆ ನಡೆದ ಸ್ಥಳದಲ್ಲಿ ದೊರೆತ ಸಿಸಿಟಿವಿಯ ದೃಶ್ಯಾವಳಿ ಮತ್ತು ಸ್ಥಳದಲ್ಲಿ ಇಲಾಖೆಯ ಸಿಬ್ಬಂದಿ ವಿಡಿಯೋ ದೃಶ್ಯಾವಳಿ ಹಾಗೂ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಬಸವನಗುಡಿ ಠಾಣೆ ಇನ್ಸ್‍ಪೆಕ್ಟರ್ ಎಂ.ಪಾಪಣ್ಣ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಎರಡನೆ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಣ್ಣ ಬಿ.ಹೊಸಮನಿ ಅವರು ಪ್ರತ್ಯಕ್ಷ ಸಾಕ್ಷ್ಯಾಧಾರಗಳನ್ನು ವಿಚಾರಣೆ ಮಾಡಿ ಹಾಗೂ ಪೊಲೀಸರ ಕರ್ತವ್ಯದ ತೀವ್ರತೆಯನ್ನು ಮನಗಂಡು ಆರೋಪಿ ಮುನಾವರ್ ಪಾಷನಿಗೆ 3 ವರ್ಷಗಳ ಸೆರೆವಾಸ ಮತ್ತು 20 ಸಾವಿರ ರೂ. ದಂಡ ವಿಧಿಸಿದ್ದಾರೆ.
ಜತೆಗೆ ಆರೋಪಿಯಿಂದ ಬರುವ ದಂಡದ ಹಣದಲ್ಲಿ ಪೊಲೀಸ್ ಮುಖ್ಯಪೇದೆ ಶಾಂತವೀರಣ್ಣ ಅವರಿಗೆ 10 ಸಾವಿರ ರೂ. ಪರಿಹಾರ ಹಣ ಕೊಡುವಂತೆ ನ್ಯಾಯಾಧೀಶರು ಘೋಷಿಸಿದ್ದಾರೆ.   ಪ್ರಾಸಿಕ್ಯೂಷನ್ ಪರ ಲತಾ ಅವರು ವಾದ ಮಂಡಿಸಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.

Facebook Comments

Sri Raghav

Admin