ಶ್ರವಣಬೆಳಗೊಳದಲ್ಲಿ 33ನೆ ರಾಜ್ಯ ಪತ್ರಕರ್ತರ ಸಮ್ಮೇಳನ, ಪ್ರಶಸ್ತಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

Shravanabelagoala

ಶ್ರವಣಬೆಳಗೊಳ, ಜ.21- ಏಕಶಿಲಾ ಮೂರ್ತಿ ಶ್ರೀ ಭಗವಾನ್ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಮಹೋತ್ಸವದ ಹಿಂದೆ ಚಾವುಂಡರಾಯನ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು. ಜೈನಕಾಶಿ ಶ್ರವಣಬೆಳಗೊಳದ ಗೊಮ್ಮಟನಗರ ಸಭಾ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ 33 ನೆ ರಾಜ್ಯ ಪತ್ರಕರ್ತರ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಾ ಮಸ್ತಕಾಭಿಷೇಕ ಮಹೋತ್ಸವಕ್ಕಾಗಿ ಸರ್ಕಾರವು ರೂ.300 ಕೋಟಿ ಮೀಸಲಿಟ್ಟಿದ್ದು, ಕಳೆದ 6 ತಿಂಗಳಿಂದ ಎಲ್ಲಾ ಕಾಮಗಾರಿಗಳು ಬರದಲ್ಲಿ ನಡೆಯುತ್ತಿವೆ. ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು ದಿನ ನಿತ್ಯ ಸ್ಥಳದಲ್ಲಿದ್ದು, ಜವಾಬ್ದಾರಿಯಿಂದ ಕೆಲಸದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಜರ್ಮನ್ ಟೆಕ್ನಾಲಜಿಯಲ್ಲಿ ಅಟ್ಟಣಿಗೆಯ ಜೋಡಣೆ ಕಾರ್ಯ ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಒಮ್ಮೆಲೇ 50 ಸಾವಿರಕ್ಕೂ ಹೆಚ್ಚು ಭಕ್ತರು ನಿಲ್ಲಬಹುದಾಗಿದ್ದು, ಮಾಧ್ಯಮದವರಿಗೆಂದೇ ಅಟ್ಟಣಿಗೆಯ ಮಧ್ಯಭಾಗದಲ್ಲಿ ಸ್ಥಳದ ವ್ಯವಸ್ಥೆಯನ್ನು ಸೂಕ್ತ ಹಾಗೂ ವ್ಯವಸ್ಥಿತವಾಗಿ ಮಾಡಲಾಗಿದೆ ಎಂದರು.
ಮಹಾ ಮಸ್ತಕಾಭಿಷೇಕದ ಸಮಯ ಆರಂಭದ ದಿನದಿಂದ 10 ದಿನಗಳ ನಡುವೆ ಸುಮಾರು 45 ಲಕ್ಷಕ್ಕೂ ಹೆಚ್ಚು ಜನತೆ ಆಗಮಿಸುವ ನಿರೀಕ್ಷೆ ಇದೆ. ಸುತ್ತಮುತ್ತಲ ಪ್ರದೇಶದಲ್ಲಿನ ರೈತರ ಜಮೀನನಲ್ಲಿದ್ದ ಬೆಳೆಗೆ ಪರಿಹಾರ ನೀಡಿ ಸುಮಾರು 525 ಎಕರೆ ಜಮೀನನ್ನು ತಾತ್ಕಾಲಿಕವಾಗಿ ಪಡೆದಿದ್ದು, ಸ್ವಚ್ಛಗೊಳಿಸಿ ವಿವಿಧ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ತ್ಯಾಗಿ ನಗರದಲ್ಲಿ ಉಳಿಯುವ ಹೆಚ್ಚು ವಯಸ್ಸಾದ ಮುನಿಗಳಿಗೆ ಕೂತಲ್ಲಿಯೆ ಜೈನಕಾಶಿಯಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕ ಮಹೋತ್ಸವವನ್ನು 3ಡಿ ಯಲ್ಲಿ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಮಹಾಮಸ್ತಕಾಭಿಷೇಕ ಹಾಗೂ ಪತ್ರಕರ್ತರಿಗೆ ಅವಿನಾಭಾವ ಸಂಬಂಧ :

ಶ್ರವಣಬೆಳಗೊಳ, ಜ.21- ಮಹಾಮಸ್ತಕಾಭಿಷೇಕಕ್ಕೂ ಪತ್ರಕರ್ತರಿಗೂ ಹಿಂದಿನಿಂದಲೂ ಅವಿನಾಭಾವ ಸಂಭಂಧವಿದೆ ಎಂದು ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ಜೈನಕಾಶಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಹಮ್ಮಿಕೊಂಡಿದ್ದ 33ನೇ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ರಾಜ್ಯ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಅವರು, 1910ರಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಅಂದಿನ ಕಾರ್ಯಕ್ರಮದ ಸುದ್ದಿಯನ್ನು ಬರೆದು ಪಾರಿವಾಳದ ಮೂಲಕ ಮದ್ರಾಸ್ ಕಚೇರಿಯಲ್ಲಿದ್ದ ಆಂಗ್ಲ ಪತ್ರಿಕೆಗೆ ಕಳುಹಿಸಿದ್ದರಿಂದ ಅಚ್ಚಾಗಿ ಮುಂಜಾನೆಯೇ ಬಿತ್ತರಗೊಂಡಿತು ಎಂದು ಸ್ಮರಿಸಿದರು.
ಸಹಸ್ರಮಾನದ ಮಹಾಮಸ್ತಕಾಭಿಷೇಕಕ್ಕೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಮಹಾಮಸ್ತಕಾಭಿಷೇಕದ ಮಹತ್ವ ತಿಳಿಸಿ ಭಾಗವಹಿಸುವಂತೆ ಅವರ ಪತ್ರಿಕಾ ಸಲಹೆಗಾರರಾಗಿದ್ದ ಶಾರದಾ ಪ್ರಸಾದ್ ಮಾಡಿದ್ದ ಕಾರ್ಯವನ್ನು ಶ್ಲಾಘಿಸಿದರು.

ಜಿಲ್ಲೆಯ ಹೊಳೆನರಸೀಪುರದವರಾದ ಶಾರದಾ ಪ್ರಸಾದ್ ಅವರ ಮೂಲಕ ರಾಷ್ಟ್ರ ಮಟ್ಟಕ್ಕೆ ಬಾಹುಬಲಿಯ ಕೀರ್ತಿ ಹಬ್ಬಿತ್ತು. ಈ ಶ್ರೀ ಕ್ಷೇತ್ರ ಹಾಗೂ ಪತ್ರಕರ್ತರಿಗೆ ಅವಿನಾಭಾವ ಸಂಬಂಧವಿದೆ. ಪ್ರತಿ ಮಸ್ತಕಾಭಿಷೇಕದ ವೇಳೆ ಪತ್ರಕರ್ತರ ಸಮ್ಮೇಳನ ಆಯೋಜಿಸುತ್ತಾ ಬಂದಿರುವುದಾಗಿ ತಿಳಿಸಿ ಪತ್ರಕರ್ತರ ಎಲ್ಲಾ ಸಮಸ್ಯೆಗಳು ಶೀಘ್ರ ಬಗೆಹರಿಯವಂತೆ ಬಾಹುಬಲಿಯಲ್ಲಿ ಬೇಡಿಕೊಳ್ಳುವುದಾಗಿ ಹೇಳಿದರು. ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ.ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ತಂತ್ರಜ್ಞಾನ ಪತ್ರಕರ್ತರ ಭವಿಷ್ಯ ಬದಲಾವಣೆ ಮಾಡುತ್ತಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ತನ್ನ ವೃತ್ತಿಯಲ್ಲಿ ಅಳವಡಿಸಿಕೊಂಡರೆ ಮಾತ್ರ ಪತ್ರಕರ್ತನಿಗೆ ಭವಿಷ್ಯ ಎಂದರು.

ಪ್ರಸ್ತುತ ಪತ್ರಿಕೋದ್ಯಮ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ಜತೆಗೆ ಪತ್ರಕರ್ತನ ಮೌಲ್ಯ ಕುಸಿಯುತ್ತಿರುವುದರಿಂದ ಟೀಕೆ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂದಿನ ಸಮ್ಮೇಳನದ ಮೂಲಕವಾದರೂ ಇದರಿಂದ ಹೊರ ಬರುವ ಸಂಕಲ್ಪ ಮಾಡೋಣವೆಂದರು. ಮಾಧ್ಯಮಗಳು ವಿಶ್ವಾಸಾರ್ಹತೆ ಹೊಂದಿ , ಗೌರವ ಹೆಚ್ಚಿಸಿಕೊಂಡು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಒಗ್ಗಿಕೊಂಡಾಗ ಮಾತ್ರ ಉತ್ತಮ ಸಮಾಜಕ್ಕೆ ಭದ್ರ ಬುನಾದಿಯಾಗಲು ಸಾಧ್ಯ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಮಾತನಾಡಿ, 60 ವರ್ಷ ವಯೋಮಾನ, 25 ವರ್ಷದ ಸೇವಾ ದಾಖಲಾತಿ ಸಲ್ಲಿಸಿದರಷ್ಟೆ ಮಾಸಾಶನ ನೀಡುವ ಸರ್ಕಾರದ ಆದೇಶ ಕೆಲವೇ ದಿನಗಳಲ್ಲಿ ಹೊರಬೀಳಲಿದೆ. ಆರೋಗ್ಯ ಭಾಗ್ಯ, ಬಸ್ ಪಾಸ್ ಸೇರಿ ಅಗತ್ಯ ಸೌಲಭ್ಯ ನೀಡುವಲ್ಲಿ ಸರ್ಕಾರ ಮುಂದಾಗಿದ್ದು, ಈ ಕುರಿತು ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಯೋಜನೆ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಸಮಿತಿ ರಚನೆ ಮಾಡಿರುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಕ್ಷೇತ್ರ ಶಾಸಕ ಸಿ.ಎನ್.ಬಾಲಕೃಷ್ಣ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು, ವಿಧಾನಪರಿಷತ್ತು ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕರ್ನಾಟಕ ಮಾಧ್ಯಮ ಆಕಾಡೆಮಿ ಸದಸ್ಯ ಹೆಚ್.ಬಿ. ಮದನ್‍ಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಶಿನಾನಂದ ತಗಡೂರು, ಜಿಲ್ಲಾಧ್ಯಕ್ಷ ರವಿನಾಕಲಗೂಡು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಸೇರಿ ಇತರರು ಹಾಜರಿದ್ದರು.

Facebook Comments

Sri Raghav

Admin