ಮಹದಾಯಿಗಾಗಿ ಜ.25 ರಂದು ಬಂದ್ ನಡೆದೇ ನಡೆಯುತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Vatal-Nagaraj--02

ಬೆಂಗಳೂರು, ಜ.23- ಕಳಸಾ ಬಂಡೂರಿ ಮಹದಾಯಿ ಜಾರಿಗೆ ಆಗ್ರಹಿಸಿ ಪ್ರಧಾನ ಮಂತ್ರಿ ಮಧ್ಯಪ್ರವೇಶಕ್ಕಾಗಿ ಒತ್ತಾಯಿಸಿ ಜ.25 ರಂದು ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ. ಇದರಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ನಾಡಿನ ಹಿತಕ್ಕೋಸ್ಕರ ಉತ್ತರ ಕರ್ನಾಟಕ ರಾಜ್ಯದ ನೀರಿನ ಬವಣೆ ನೀಗಿಸುವುದಕ್ಕೋಸ್ಕರ ನಾವು ಯಾವ ತ್ಯಾಗಕ್ಕಾದರೂ ಸಿದ್ಧ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಇಂದಿಲ್ಲಿ ರಣಕಹಳೆ ಮೊಳಗಿಸಿದ್ದಾರೆ.

ಕನ್ನಡ ಒಕ್ಕೂಟದ ವತಿಯಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿಂದು ಮಹದಾಯಿ ಹಾಗೂ ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರದ ಭೂತದಹನದ ಮೂಲಕ ಪ್ರತಿಭಟನೆ ಮಾಡಿದ ಕನ್ನಡ ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದ್, ಮಂಜುನಾಥ್‍ದೇವ್, ಕುಮಾರ್ ಮುಂತಾದವರು ಕರ್ನಾಟಕ ಬಂದ್ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ. ಕೇಂದ್ರ ಹಾಗೂ ಗೋವಾ, ಮಹಾರಾಷ್ಟ್ರ ಸರ್ಕಾರಗಳಿಗೆ ಸ್ಪಷ್ಟ ಸಂದೇಶ ನೀಡಬೇಕು. ಮಹದಾಯಿಯ ನಮ್ಮ ಪಾಲಿನ ಹಕ್ಕನ್ನು ಪಡೆಯಬೇಕಿದೆ. ಅದನ್ನು ನಾವು ಪಡೆದೇ ಪಡೆಯುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಮಹದಾಯಿಗಾಗಿ ಸಂಕಲ್ಪತೊಟ್ಟಿದ್ದೇವೆ. ಜ.25 ರಂದು ಬಂದ್ ಮೂಲಕ ಹೋರಾಟ ಮಾಡುತ್ತೇವೆ. ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ಮಾಡಿಯೇ ತೀರುತ್ತೇವೆ. ಅಂದು ಬಸ್‍ಗಳು, ಆಟೋದವರು ಯಾರೂ ರಸ್ತೆಗಿಳಿಯುವುದಿಲ್ಲ. ಸಾವಿರಾರು ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ರೈತರಿಗೆ ಬಂದ್‍ಗೆ ಬೆಂಬಲ ನೀಡಿವೆ. ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ. ಬಂದ್‍ಗೆ ಬೆಂಬಲ ನೀಡಿ. ನಮ್ಮ ರಾಜ್ಯದ ಜನರ ನೋವಿನ ಧ್ವನಿಯಾಗಿ ಎಂದು ಮನವಿ ಮಾಡಿದರು. ನಮ್ಮ ಹೋರಾಟದಲ್ಲಿ ಯಾವುದೇ ರಾಜಕೀಯವನ್ನು ತರಬೇಡಿ. ಕುಡಿಯುವ ನೀರಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳು ಇದಕ್ಕೆ ಬೆಂಬಲ ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಗೆ ಆಗ್ರಹಿಸಬೇಕು. ಅದನ್ನು ಬಿಟ್ಟು ನಮ್ಮ ಮೇಲೆ ರಾಜಕೀಯ ಪ್ರಹಾರ ಮಾಡಬೇಡಿ ಎಂದು ಮನವಿ ಮಾಡಿದರು.

25 ರಂದು ಬೆಳಗ್ಗೆ 10 ಗಂಟೆಗೆ ಟೌನ್‍ಹಾಲ್‍ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಸಹಸ್ರಾರು ಕನ್ನಡ ಪರ ಹೋರಾಟಗಾರರು, ರೈತ ಸಂಘಟನೆಗಳು ಮಹದಾಯಿಗಾಗಿ ಆಗ್ರಹಿಸಿ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಅದೇ ರೀತಿ ಹುಬ್ಬಳ್ಳಿ-ಧಾರವಾಡದಲ್ಲೂ ಬೃಹತ್ ರ್ಯಾಲಿ ನಡೆಯಲಿದೆ. ಸಮಸ್ತ ಕರ್ನಾಟಕ ಬಂದ್ ಆಚರಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಲಿದೆ ಎಂದು ವಾಟಾಳ್ ಹೇಳಿದರು. ನಮ್ಮ ಬಂದ್ ಶಾಂತಿಯುತವಾಗಿರುತ್ತದೆ. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಕೊಡುವುದಿಲ್ಲ. ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ನಾವು ಹೋರಾಟವನ್ನು ಮಾಡುತ್ತೇವೆ. ಎಲ್ಲರೂ ಸಹಕರಿಸಬೇಕು. ನಾಡಿನ ಹಿತಾಸಕ್ತಿ ಹಿನ್ನೆಲೆಯಲ್ಲಿ ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಈಗಾಗಲೇ ನೂರಾರು ಸಂಘಟನೆಗಳವರು ನಮ್ಮ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಂದ್ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin