ಮೈಸೂರು ಮೇಯರ್ ಚುನಾವಣೆಯಲ್ಲಿ ಹೈಡ್ರಾಮಾ..! ಭಾಗ್ಯವತಿಗೆ ಮೇಯರ್ ಭಾಗ್ಯ, ಕಾಂಗ್ರೆಸ್’ಗೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

Mysuru--02

ಮೈಸೂರು, ಜ.24-ಮೀಸಲಾತಿ ನೆಪದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದ ಕಾಂಗ್ರೆಸ್‍ಗೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ತೀವ್ರ ಮುಖಭಂಗವಾಗಿದೆ. ಕೊನೆಯಕ್ಷಣದಲ್ಲಿ ಕಾಂಗ್ರೆಸ್‍ನ ಬಂಡಾಯ ಅಭ್ಯರ್ಥಿ ಅಧಿಕೃತ ಅಭ್ಯರ್ಥಿಯನ್ನೇ ಹೈಜಾಕ್ ಮಾಡಿ ನಾಮಪತ್ರ ಸಲ್ಲಿಸಿ ಜೆಡಿಎಸ್-ಬಿಜೆಪಿ ಬೆಂಬಲ ಪಡೆಯುವ ಮೂಲಕ ಜಯಗಳಿಸಿ ಮುಖ್ಯಮಂತ್ರಿ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲುಣಿಸಿದ್ದಾರೆ. ಮೇಯರ್ ಆಗಿ ಕಾಂಗ್ರೆಸ್‍ನ ಬಂಡಾಯ ಅಭ್ಯರ್ಥಿ 23ನೆ ವಾರ್ಡ್‍ನ ಬಿ.ಭಾಗ್ಯವತಿ ಆಯ್ಕೆಯಾಗಿದ್ದಾರೆ.

ಬಿ.ಭಾಗ್ಯವತಿ ಪರ ಜೆಡಿಎಸ್-ಬಿಜೆಪಿಯ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಮೈಸೂರು ಪಾಲಿಕೆ ಗದ್ದುಗೆ ಹಿಡಿಯಲು ಪರಿಶಿಷ್ಟ ಜಾತಿಗೆ ಸಿಗುವಂತೆ ಮಾಡಿ ಮೀಸಲಾತಿ ಅಸ್ತ್ರ ಬಳಸಿದ್ದರು. ಆದರೆ ಜೆಡಿಎಸ್-ಬಿಜೆಪಿ ಪ್ರತಿ ತಂತ್ರ ಹೆಣೆದು ಮೇಯರ್ ಅಭ್ಯರ್ಥಿ ಆಕಾಂಕ್ಷಿ ಬಿ.ಭಾಗ್ಯವತಿಯವರನ್ನು ತಮ್ಮ ಪರ ಮಾಡಿಕೊಂಡರು.  ಬೆಳಿಗ್ಗೆ ನಡೆದ ನಾಮಪತ್ರ ಸಂದರ್ಭದಲ್ಲಷ್ಟೇ ಭಾಗ್ಯವತಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂಬುದು ಎಲ್ಲರಿಗೂ ಗೊತ್ತಾಯಿತು.

ಭಾಗ್ಯವತಿಯವರನ್ನು ಜೆಡಿಎಸ್‍ನವರು ಪಾಲಿಕೆಯ ಹಿಂಬಾಗಿಲಿನಿಂದ ಕರೆತಂದರು. 8.30ರಿಂದ 9.30ರ ವರೆಗೆ ಇದ್ದ ನಾಮಪತ್ರ ಸಲ್ಲಿಕೆ ಅವಧಿಯಲ್ಲಿ ಅವರನ್ನು ಕರೆತಂದು ನಾಮಪತ್ರ ಸಲ್ಲಿಸಿ ನಂತರ ಭಾಗ್ಯವತಿಯವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ನಂತರ ಚುನಾವಣೆಗೆ ನಿಗದಿಯಾಗಿದ್ದ ಸಮಯ 11.30ಕ್ಕೆ ಮತ್ತೆ ಭಾಗ್ಯವತಿಯವರನ್ನು ಕೌನ್ಸಿಲ್ ಹಾಲ್‍ಗೆ ಕರೆತರಲಾಯಿತು. ಆಗ ಭಾಗ್ಯವತಿ ಕಾಂಗ್ರೆಸ್ ಸದಸ್ಯರು ಕುಳಿತುಕೊಳ್ಳುವ ಸ್ಥಳದಲ್ಲಿ ಕುಳಿತುಕೊಂಡರು. ಈ ವೇಳೆ ಕಾಂಗ್ರೆಸ್ಸಿಗರು ಅವರನ್ನು ತರಾಟೆಗೆ ತೆಗೆದುಕೊಂಡು ನಾಮಪತ್ರ ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಇದರಿಂದ ಮನನೊಂದ ಭಾಗ್ಯವತಿ ಕಣ್ಣೀರು ಹಾಕಿಕೊಂಡು ಕತ್ತು ಬಗ್ಗಿಸಿ ಕುಳಿತು ಚುನಾವಣೆ ಮುಗಿಯುವ ತನಕ ತಲೆ ಎತ್ತಲೇ ಇಲ್ಲ.

ಚುನಾವಣಾ ಅಧಿಕಾರಿಯಾಗಿರುವ ಶಿವಯೋಗಿ ಬಿ.ಕಳಸದ್ ಅವರು ಪ್ರಕ್ರಿಯೆ ಆರಂಭಿಸಲು ಮುಂದಾದರು. ಈ ಸಂದರ್ಭದಲ್ಲಿ ಕಾಂಗ್ರೆಸಿಗರು ಕೆಲಕಾಲ ಪ್ರತಿಭಟನೆ ನಡೆಸಿ ಕೋರಂ ಇಲ್ಲದ ಕಾರಣ ಸಭೆ ಮುಂದೂಡಬೇಕೆಂದು ಆಗ್ರಹಿಸಿದರು. ಆಗ ಚುನಾವಣಾಧಿಕಾರಿಗಳು ತಮ್ಮ ಸಿಬ್ಬಂದಿ ಮೂಲಕ ಸದಸ್ಯರ ಎಣಿಕೆ ನಡೆಸಿದರು. ಸಭೆ ನಡೆಸಲು ಕೋರಂ ಕೊರತೆ ಇಲ್ಲವೆಂದು ಮನದಟ್ಟು ಮಾಡಿಕೊಂಡು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿದರು. ಆಗಲೂ ಸಹ ಕಾಂಗ್ರೆಸ್‍ನವರು ಪ್ರತಿಭಟನೆ ನಡೆಸಿದರು. ಈ ವೇಳೆ ಸಚಿವ ತನ್ವೀರ್‍ಸೇಠ್-ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ನಡುವೆ ವಾಗ್ವಾದ ನಡೆಯಿತು.

ಇದನ್ನೆಲ್ಲ ಹೊರತುಪಡಿಸಿ ಚುನಾವಣಾಧಿಕಾರಿಗಳು ಚುನಾವಣೆಯನ್ನು ಪ್ರಾರಂಭಿಸಿದರು. ಮೊದಲು ಮೇಯರ್ ಸ್ಥಾನಕ್ಕೆ ಚುನಾವಣೆ ಪ್ರಾರಂಭಿಸಿ ಜೆಡಿಎಸ್‍ನಿಂದ ಭಾಗ್ಯವತಿ, ಕಾಂಗ್ರೆಸ್‍ನಿಂದ ಕಮಲ ಅಭ್ಯರ್ಥಿಗಳಾಗಿದ್ದು, ಇವರುಗಳ ಪೈಕಿ ಭಾಗ್ಯವತಿ ಪರ ಮತಚಲಾಯಿಸುವವರು ಕೈ ಎತ್ತುವಂತೆ ಸೂಚಿಸಿದರು. ಆಗ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಭಾಗ್ಯವತಿ ಪರ ಕೈ ಎತ್ತಿದರು. ಈ ಸಂದರ್ಭದಲ್ಲಿ ಬೇರೆ ದಾರಿ ಇಲ್ಲದೆ ಕಾಂಗ್ರೆಸ್‍ನವರು ಸಭಾಂಗಣದಿಂದ ಹೊರನಡೆದರು.

ಮತ ಚಲಾಯಿಸಿದವರ ಮತಗಳನ್ನು ಎಣಿಕೆ ಮಾಡಿದಾಗ ಭಾಗ್ಯವತಿ ಅವರಿಗೆ 43 ಮತಗಳು ಬಂದಿದ್ದವು. ಹಾಗಾಗಿ ಭಾಗ್ಯವತಿ ಅವರೇ ಮೇಯರ್ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು. ಉಪಮೇಯರ್ ಸ್ಥಾನವೂ ಕೂಡ ಎಸ್ಟಿ ಮಹಿಳೆಗೆ ಮೀಸಲಾಗಿದ್ದು, ಯಾವುದೇ ಅಭ್ಯರ್ಥಿಗಳು ಇಲ್ಲದ ಕಾರಣ ಜೆಡಿಎಸ್‍ನ ಎಂ.ಇಂದಿರಾ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮೈಸೂರು ನಗರ ಪಾಲಿಕೆಯಲ್ಲಿ ಇಂದಿನಿಂದ ವನಿತೆಯರ ಆಡಳಿತ ನಡೆಯಲಿದೆ. ಮೈಸೂರಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರುವಾಗಲೇ ಕೈಗೆ ಭಾರೀ ಮುಖಭಂಗವಾಗಿದೆ.

Facebook Comments

Sri Raghav

Admin