ವಿಧವಾ ಮಹಿಳೆಯರಿಗೊಂದು ಸಿಹಿ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

Vidhava-Women

ನವದೆಹಲಿ,ಜ.24-ವಿಧವೆಯರಿಗೆ ಸಾಮಾಜಿಕ ಭದ್ರತೆ ಒದಗಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬರಲಿರುವ ಬಜೆಟ್‍ನಲ್ಲಿ ಮಾಸಾಶನ ಹೆಚ್ಚಳ ಮಾಡಲು ಮುಂದಾಗಿದೆ.   ಒಂದು ವೇಳೆ ಅಂದುಕೊಂಡಂತೆ ನಡೆದದ್ದೇ ಆದರೆ ವಿಧವೆಯರಿಗೆ ನೀಡಲಾಗುತ್ತಿರುವ 500 ರೂ. ಮಾಸಾಶನವನ್ನು 1000 ರೂ.ಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.  ಈ ಮೂಲಕ ಮಹಿಳೆಯರ ಮನಗೆಲ್ಲುವುದು ಒಂದೆಡೆಯಾದರೆ ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದಂತಾಗುತ್ತದೆ ಎಂಬುದು ಸರ್ಕಾರದ ಉದ್ದೇಶ.

ಈವರೆಗೂ ರಾಷ್ಟ್ರೀಯ ವೃದ್ಧಾಪ್ಯವೇತನ ಯೋಜನೆ ಜಾರಿಯಾದ ನಂತರ ವಿಧವಾ ಮಹಿಳೆಯರಿಗೆ ಪ್ರತಿ ತಿಂಗಳು ಆರ್ಥಿಕ ನಿರ್ವಹಣೆಗಾಗಿ ಪ್ರಾರಂಭದಲ್ಲಿ 300 ರೂ. ನೀಡಲಾಗುತ್ತಿತ್ತು. ಇದನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಬಂದಿದ್ದರಿಂದ 2006ರಲ್ಲಿ 500 ರೂ.ಗೆ ಏರಿಕೆ ಮಾಡಲಾಗಿತ್ತು.  ಒಂದೆಡೆ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದ ಜನತೆ ಜೀವನ ನಿರ್ವಹಣೆ ಮಾಡಲು ಹರಸಾಹಸಪಡುತ್ತಿದ್ದಾರೆ. ವಿಧವೆಯರಿಗೆ 500 ರೂ. ಪಿಂಚಣಿ ನೀಡುತ್ತಿರುವುದು ಸಾಕಾಗುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಒಂದು ಸಾವಿರ ರೂ. ಏರಿಕೆ ಮಾಡಿ ಘೋಷಣೆ ಮಾಡಲಿದೆ.

ಈಗಾಗಲೇ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ವಿಧವಾ ವೇತನವನ್ನು ಏರಿಕೆ ಮಾಡುವುದರಿಂದ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ತಿಂಗಳಿಗೆ ಒಂದು ಸಾವಿರ ಪಿಂಚಣಿ ನೀಡಿದರೆ ಕಡೆಪಕ್ಷ ಯಾರ ಮೇಲೂ ಅವಲಂಬಿತವಾಗದೆ ಜೀವನ ನಡೆಸಲು ಅನುಕೂಲವಾಗುತ್ತದೆ ಎಂಬ ಸಲಹೆಯನ್ನು ಅಧಿಕಾರಿಗಳು ನೀಡಿದ್ದಾರೆ.  ಬೊಕ್ಕಸಕ್ಕೆ ಎಷ್ಟೇ ಹೊರೆಯಾದರೂ ಸರಿ ವಿಧವೆಯರ ಮಾಸಾಶನವನ್ನು ಏರಿಕೆ ಮಾಡಬೇಕೆಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಸೂಚಿಸಿದ್ದಾರೆ.   ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಅರುಣ್ ಜೇಟ್ಲಿ ಇದನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಅಧಿಕೃತವ ಮೂಲಗಳು ತಿಳಿಸಿವೆ.

Facebook Comments

Sri Raghav

Admin