ಸಿ.ಟಿ.ರವಿ ಶಕುನಿಯಂತೆ ವರ್ತಿಸುತ್ತಿದ್ದಾರೆ : ಗಾಯತ್ರಿ ಶಾಂತೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

CT-Ravi--01
ಚಿಕ್ಕಮಗಳೂರು, ಜ.24- ಶಾಸಕ ರವಿ ಅವರ ವರ್ತನೆ, ಕಾರ್ಯವೈಖರಿ, ಹಾವಭಾವಗಳು ಶಕುನಿಯನ್ನು ಹೋಲುವಂತಿವೆ ಎಂದು ವಿಧಾನ ಪರಿಷತ್ ಮಾಜಿ ಶಾಸಕಿ ಎ.ವಿ.ಗಾಯತ್ರಿ ಶಾಂತೇಗೌಡ ಟೀಕಿಸಿದ್ದಾರೆ. ಸಿಎಂ ಸಿದ್ಧರಾಮಯ್ಯ ಹಾವಭಾವ ದುರ್ಯೋಧನ ಪಾತ್ರಕ್ಕೆ ಹೋಲುತ್ತವೆ ಎಂದು ಹೇಳಿರುವ ಶಾಸಕ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಕೌರವರ ಜೊತೆಯಲ್ಲಿದ್ದುಕೊಂಡೆ ಅವರುಗಳನ್ನು ನಾಶ ಮಾಡಿದ ರೀತಿಯಲ್ಲೇ ಶಾಸಕರು ಈ ಕ್ಷೇತ್ರದಲ್ಲಿ ಶಕುನಿ ರೀತಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಯನ್ನು ಹಾಳುಗೆಡವಿದ್ದಾರೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ಪಾಂಡವರ ಪಕ್ಷ, ಬಿಜೆಪಿ ಕೌರವರ ಪಕ್ಷ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಇಂಥಾ ಶಕುನಿಗಳಿಂದ ಕೌರವರ ಪಕ್ಷ ಬಿಜೆಪಿ ನಾಶವಾಗುತ್ತದೆ. ಆ ಪಕ್ಷವನ್ನು ನಾಶ ಮಾಡಲು ಬೇರೆಯವರ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಶಾಸಕರು ಹೇಳಿರುವುದು ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗಿದೆ. ಕೌರವರ ರಾಜ್ಯದಲ್ಲಿ ಆಡಳಿತ ನಡೆಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಿರುವ ಯಾವ ಯಾವ ಮಂತ್ರಿಗಳು ಹಾಗೂ ಯಾವ ಮುಖ್ಯ ಮಂತ್ರಿ ಜೈಲು ಸೇರಿ ಬಂದಿದ್ದಾರೆ ಎಂಬುದನ್ನು ರಾಜ್ಯದ ಜನರು ಬಲ್ಲವರಾಗಿದ್ದಾರೆ ಎಂದು ಛೇಡಿಸಿದ್ದಾರೆ.

ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ರಾಜಕೀಯ ಜೀವನದಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ಇಲ್ಲದಿದ್ದರೂ ಮೊಸರಿನಲ್ಲಿ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಷ್ಟು ಅಭಿವೃದ್ಧಿ ಕಾರ್ಯಗಳು, ಜನಪರ, ಸಮಾಜಮುಖಿ ಕಾರ್ಯಗಳು ಮುಖ್ಯ ಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಿವೆ ಎಂದು ಹೇಳಿದರು. ಕೊಟ್ಟ ಮಾತಿಗೆ ತಪ್ಪದ ರಾಜ್ಯ ಸರ್ಕಾರ ನಮ್ಮದು. ಚುನಾವಣೆಯಲ್ಲಿ ಕೊಟ್ಟಿದ್ದ ಭರವಸೆಗಳಲ್ಲಿ ಬಹುತೇಕ ಈಡೇರಿವೆ ಎಂಬುದು ಹೆಮ್ಮೆಪಡುವ ವಿಚಾರ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin