ಕರ್ನಾಟಕ ಬಂದ್ ಸರ್ಕಾರಿ ಪ್ರಾಯೋಜಿತ ಅಲ್ಲ : ಗೃಹ ಸಚಿವ ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--02
ಬೆಂಗಳೂರು, ಜ.25- ಮಹದಾಯಿಗಾಗಿ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನಡೆಸಿದ ಇಂದಿನ ಕರ್ನಾಟಕ ಬಂದ್ ಸರ್ಕಾರಿ ಪ್ರಾಯೋಜಿತ ಅಲ್ಲ. ಬಂದ್‍ಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾವಿಧಿ ಸರ್ಕಾರಿ ನೌಕರರಿಗೆ ಬೋಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಪರ ಸಂಘಟನೆಗಳವರು, ರೈತಪರ ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿವೆ. ನಮ್ಮ ಅನುಮತಿಯನ್ನು ಕೇಳಿಲ್ಲ. 4ಸಾರಿಗೆ ನಿಗಮಗಳಲ್ಲಿ ವಿವಿಧ ಸಂಘಟನೆಗಳಿವೆ. ಅವರೆಲ್ಲ ಬಂದ್‍ನಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿಯವರು ಆಧಾರವಿಲ್ಲದೆ ಆರೋಪ ಮಾಡುತ್ತಿದ್ದಾರೆ. ಸುಳ್ಳು ಹೇಳುವುದೇ ಅವರ ಕಸುಬಾಗಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹತ್ತು ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಹಲವಾರು ಬಾರಿ ಬಂದು ಹೋಗಿದ್ದಾರೆ. ನೀರಿಗಿಂತ, ಉತ್ತರಕರ್ನಾಟಕದ ರೈತರ ಸಮಸ್ಯೆಗಿಂತ ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸಭೆಯೇ ಮುಖ್ಯವಾಗಿದ್ದರೆ ಅವರು ಕನ್ನಡಪರ ಸಂಘಟನೆಗಳೊಂದಿಗೆ ಮಾತನಾಡಿ ಬಂದ್ ಹಿಂತೆಗೆಯುವಂತೆ ಮನವೊಲಿಸಬೇಕಿತ್ತು. ಅನಗತ್ಯವಾಗಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡಬಾರದು ಎಂದು ತಿರುಗೇಟು ನೀಡಿದರು.
ಗೋವಾ ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಅವರನ್ನು ಕರೆಸಿ ಅಮಿತ್ ಷಾ ಮನೆಯಲ್ಲಿ ಸಭೆ ನಡೆಸುತ್ತಾರೆ. ಗೋವಾ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ ಎಂದು ಯಡಿಯೂರಪ್ಪನವರು ನಾಟಕವಾಡುತ್ತಾರೆ. ಬಿಜೆಪಿಯವರು ಕರ್ನಾಟಕ ರಾಜ್ಯದ ಪರವಾಗಿದ್ದಾರೆಯೋ ? ಗೋವಾ ಸರ್ಕಾರದ ಪರವಾಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಲಿ. ನಾವು ನಮ್ಮ ರಾಜ್ಯದ ರೈತರ ಪರವಾಗಿದ್ದೇವೆ ಎಂದರು.
ಕರ್ನಾಟಕ ಬಂದ್‍ಗೆ ಸಂಬಂಧಪಟ್ಟಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 65ಸಾವಿರ ಪೆÇಲೀಸರು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 15 ಪ್ಲಟೂನ್‍ಗಳನ್ನು ನಿಯೋಜಿಸಲಾಗಿದೆ. ಹೋಮ್‍ಗಾರ್ಡ್‍ಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಹೋರಾಟಗಾರರು ಸಮಾಜದ ಶಾಂತಿಗೆ ಧಕ್ಕೆ ತರದಂತೆ ಶಾಂತಿಯುತವಾಗಿ ಹೋರಾಟ ಮಾಡಬೇಕೆಂದು ರಾಮಲಿಂಗಾರೆಡ್ಡಿ ಹೇಳಿದರು.

Facebook Comments

Sri Raghav

Admin