ಕರ್ನಾಟಕ ಬಂದ್ : ಸ್ತಬ್ಧವಾದ ಹುಬ್ಬಳ್ಳಿ-ಧಾರವಾಡ ನಗರಗಳು

ಈ ಸುದ್ದಿಯನ್ನು ಶೇರ್ ಮಾಡಿ

Hubli--02
ಹುಬ್ಬಳ್ಳಿ, ಜ.25- ಮಹದಾಯಿ ಯೋಜನೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಹುಬ್ಬಳ್ಳಿಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಕನ್ನಡಪರ ಸಂಘಟನೆಗಳು ಪ್ರತಿಭಟಿಸಿ ಮೆರವಣಿಗೆ, ರ್ಯಾಲಿ ನಡೆಸಿದರಲ್ಲದೆ, ಸಂಸದ ಪ್ರಹ್ಲಾದ್ ಜೋಷಿ ಅವರ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು.  ನಗರದ ಲ್ಯಾಮಿಂಗ್‍ಟನ್ ರಸ್ತೆಯಲ್ಲಿರುವ ಅವರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಹಲವರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಕೆಲವರು ಬ್ಯಾರಿಕೇಡ್ ತಳ್ಳಿ ಒಳಹೋಗಲು ಪ್ರಯತ್ನಿಸಿದರು. ಪೊಲೀಸರು ಅವರನ್ನು ತಡೆದರು. ಇನ್ನು ಕೆಲವು ಸಂಘಟನೆಗಳವರು ಕೇಂದ್ರ ಸರ್ಕಾರಿ ಸೌಮ್ಯದ ಕಚೇರಿಗಳಾದ ಅಂಚೆಕಚೇರಿ, ಬಿಎಸ್‍ಎನ್ ಕಚೇರಿಗೆ ಮುತ್ತಿಗೆ ಹಾಕಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.
ಮೋದಿ ಅವರು ಮಹದಾಯಿ ವಿಷಯದಲ್ಲಿ ಮಧ್ಯಪ್ರವೇಶಿಸಿ ವಿವಾದವನ್ನು ಕೂಡಲೇ ಇತ್ಯರ್ಥ ಮಾಡಬೇಕೆಂದು ಆಗ್ರಹಿಸಿದರು.

ಜನಸಾಮಾನ್ಯರು ತತ್ತರ:

ಕಳಸ-ಬಂಡೂರಿ-ಮಹದಾಯಿ ಯೋಜನೆಗಾಗಿ ಕರ್ನಾಟಕ ಬಂದ್ ನಡೆದ ಪರಿಣಾಮ ಜನಸಾಮಾನ್ಯರಿಗೆ ಆಟೋ, ಬಸ್ ಸಿಗದೆ ಬಳಲಿದರು. ಬಿಸಿಲಿನ ತಾಪ ತಾಳಲಾರದೆ ವ್ಯಕ್ತಿಯೊಬ್ಬ ಅಸ್ವಸ್ಥಗೊಂಡು ಬಿದ್ದ ಘಟನೆ ನಗರದ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿದ ಸಾರ್ವಜನಿಕರು ಅಸ್ವಸ್ಥಗೊಂಡ ವ್ಯಕ್ತಿಯನ್ನು ಉಪಚರಿಸಿ ಆ್ಯಂಬುಲೆನ್ಸ್‍ನಲ್ಲಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದರು.

Facebook Comments

Sri Raghav

Admin