ತಾರ್ಕಿಕ ಅಂತ್ಯ ಕಾಣುವವರೆಗೂ ಮಹದಾಯಿ ಹೋರಾಟ ಬಿಡಲ್ಲ : ವಾಟಾಳ್ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

Vataqla--02
ಬೆಂಗಳೂರು, ಜ.25- ಮಹದಾಯಿ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಬಿಡುವುದಿಲ್ಲ. ಸಂಸತ್ ಮುಂದೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ, ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಗುಡುಗಿದರು. ಕಳಸಾ-ಬಂಡೂರು, ಮಹದಾಯಿಗಾಗಿ ಆಗ್ರಹಿಸಿ ಪ್ರಧಾನಿ ಮಧ್ಯ ಪ್ರವೇಶಕ್ಕಾಗಿ ಒತ್ತಾಯಿಸಿ ಇಂದು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಕನ್ನಡಿಗರ ಶಕ್ತಿ ಪ್ರದರ್ಶನ, ಕೇಂದ್ರ ಮತ್ತು ಗೋವಾ ಸರ್ಕಾರಕ್ಕೆ ರವಾನೆಯಾಗಿದೆ. ಕೂಡಲೇ ಪ್ರಧಾನಿ ಮಧ್ಯಪ್ರವೇಶಿಸಿ ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಹದಾಯಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟವನ್ನು ಕೈ ಬಿಡುವುದಿಲ್ಲ ಎಂದರು.

ರಾಜ್ಯದ ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯೊತ್ತೇವೆ. ಪಾರ್ಲಿಮೆಂಟ್ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ವಾಟಾಳ್ ಹೇಳಿದರು. ಉತ್ತರ ಕರ್ನಾಟಕ ಭಾಗದ ಜನ ಕುಡಿಯುವ ನೀರಿಗಾಗಿ ಕಳೆದ ಮೂರು ವರ್ಷಗಳಿಂದ ಸತ್ಯಾಗ್ರಹ ಮಾಡುತ್ತಿದ್ದಾರೆ. ಯಾವ ಸಂಸದರೂ ಈ ಬಗ್ಗೆ ದನಿ ಎತ್ತಲಿಲ್ಲ. ಅದರಲ್ಲೂ ಕೇಂದ್ರದಲ್ಲಿ ಆಡಳಿತವಿರುವ ಮತ್ತು ರಾಜ್ಯದಲ್ಲಿ ಹೆಚ್ಚಾಗಿರುವ ಬಿಜೆಪಿ ಸಂಸದರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಾಟಾಳ್ ಗಂಭೀರ ಆರೋಪ ಮಾಡಿದರು.

ಕರ್ನಾಟಕ ಬಂದ್ ಮಾಡುವ ಬಗ್ಗೆ ಅಪಪ್ರಚಾರ ಮಾಡಿರುವವರಿಗೆ ಬಂದ್ ಯಶಸ್ವಿಯಾಗಿರುವುದು ತಕ್ಕ ಉತ್ತರವಾಗಿದೆ. ಮಹದಾಯಿ, ಕಾವೇರಿ, ಮೇಕೆದಾಟು ಎಲ್ಲಾ ನಮ್ಮ ರಾಜ್ಯದ ಸಮಸ್ಯೆಗಳು. ಇವುಗಳು ಬಗೆಹರಿಯಬೇಕೆಂದು ಅಖಂಡ ಕರ್ನಾಟಕ ದೃಷ್ಟಿಯಿಂದ ನಾವು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಇಂದಿನ ಬಂದ್‍ಗೆ ಚಿತ್ರೋದ್ಯಮ, ಸಾರಿಗೆ ಇಲಾಖೆ, ಲಾರಿ ಮಾಲೀಕರ ಸಂಘ, ಆಟೋಚಾಲಕರ ಸಂಘ ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು, ಚಲನಚಿತ್ರ ಮಂದಿರಗಳು, ಮಾಲ್‍ಗಳು, ಐಟಿ-ಬಿಟಿ ಕಂಪೆನಿಗಳು, ಶಾಲಾ-ಕಾಲೇಜಿನವರು, ಟ್ಯಾಕ್ಸಿ, ಟೆಂಪೋಗಳವರು ಎಲ್ಲರೂ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.

ನಾಡಿನ ಹಿತಕ್ಕಾಗಿ ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಭವಣೆ ನೀಗಿಸಲು ಒಟ್ಟಾಗಿ ಹೋರಾಟ ಮಾಡುವ ಅಗತ್ಯ ಮತ್ತು ಅನಿವಾರ್ಯತೆ ನಮ್ಮ ಮುಂದಿದೆ. ನಮ್ಮ ಹೋರಾಟಕ್ಕೆ ಯಾರೂ ರಾಜಕೀಯ ಬೆರಸಬೇಡಿ ಎಂದು ವಾಟಾಳ್ ಮನವಿ ಮಾಡಿದರು.
ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು. ಟೌನ್‍ಹಾಲ್‍ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಸಾವಿರಾರು ಕನ್ನಡಪರ ಹೋರಾಟಗಾರರು ಮತ್ತು ಬೆಂಬಲಿಗರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಹದಾಯಿ ನಮ್ಮ ಹಕ್ಕು, ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂಬ ಘೋಷಣೆಗಳು ಕೇಳಿ ಬಂದವು.

Facebook Comments

Sri Raghav

Admin