400 ಥಿಯೇಟರ್ ಗಳಲ್ಲಿ ಅಣ್ಣಾವ್ರ ಅಭಿಮಾನಿ ‘ಕನಕ’ನ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

kanaka

ಸ್ಯಾಂಡಲ್‍ವುಡ್‍ನಲ್ಲಿ ಈ ವಾರ ಅದ್ಧೂರಿಯಾಗಿ ಕನಕನ ದರ್ಶನವಾಗಲಿದೆ. ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕನಕನ ಆರ್ಭಟ ಜೋರಾಗಲಿದೆ.
ತಾಜ್‍ಮಹಲ್ ಖ್ಯಾತಿಯ ನಿರ್ದೇಶಕ ಆರ್. ಚಂದ್ರು ಹಾಗೂ ನಟ ದುನಿಯಾ ವಿಜಿ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಕನಕ ಚಿತ್ರ ಬಹಳಷ್ಟು ವಿಶೇಷತೆಗಳನ್ನು ಹೊಂದಿದೆ. ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ದಿನವೇ ಈ ಕನಕ ಚಿತ್ರ ಬೆಳ್ಳಿ ಪರದೆ ಮೇಲೆ ಬರುತ್ತಿದೆ. 2007ರಲ್ಲಿ ತಾಜ್‍ಮಹಲ್ ಎಂಬ ಚಿತ್ರ ನಿರ್ದೇಶನ ಮಾಡುವ ಮೂಲಕ ಆರಂಭವಾದದ್ದು, ಆರ್. ಚಂದ್ರು ಅವರ ಸಿನಿಯಾತ್ರೆ ದಶಕದ ಹಾದಿಯಲ್ಲಿ ಕನಕ ಅವರ ನಿರ್ದೇಶನದ 10ನೆ ಚಿತ್ರವಾಗಿದೆ. ಸ್ಯಾಂಡಲ್‍ವುಡ್‍ನಲ್ಲಿ ಯೋಗರಾಜ್ ಭಟ್, ಸೂರಿಯಂಥ ಸ್ಟಾರ್ ನಿರ್ದೇಶಕರ ಸಾಲಿನಲ್ಲಿ ಚಂದ್ರು ನಿಂತಿದ್ದಾರೆ. ಅವರು ಮಾಡುವ ಯಾವುದೇ ಚಿತ್ರವಿರಲಿ ಅದು ಒಂದು ರೀತಿಯ ಹವಾ ಕ್ರಿಯೇಟ್ ಮಾಡುತ್ತದೆ. ಹಾಗೇ ಈ ವರ್ಷ ಕನಕನ ಹವಾ ಆರಂಭವಾಗಿದೆ.

ತಾಜ್‍ಮಹಲ್ ಹಾಗೂ ಮಳೆ ನಂತರ ಚಂದ್ರು ಅವರ ಸಿದ್ದೇಶ್ವರ ಎಂಟರ್‍ಪ್ರೈಸಸ್ ಬ್ಯಾನರ್‍ನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದೆ. ಈ ಹಿಂದೆ ನವೀನ್ ಸಜ್ಜು ಅವರ ಎಣ್ಣೆ ಸಾಂಗನ್ನು ಪ್ರಮೋಷನ್‍ಗೆ ಮಾತ್ರ ಬಳಸಿಕೊಂಡು ಸಿನಿಮಾ ರಿಲೀಸಾದ ನಂತರ 2ನೇ ವಾರದಲ್ಲಿ ಅದನ್ನು ಸೇರಿಸುವುದೆಂದು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಈಗ ಆ ಹಾಡು ಎಲ್ಲಾ ಕಡೆ ಪಾಪ್ಯುಲರ್ ಆಗಿರುವುದರಿಂದ ಚಿತ್ರ ಬಿಡುಗಡೆಯಾದ ದಿನದಿಂದಲೇ ತೆರೆಮೇಲೆ ಮೂಡಿಬರಲಿದೆ.
ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಂದಷ್ಟು ಮಾಹಿತಿಗಳನ್ನು ನಿರ್ದೇಶಕ ಆರ್. ಚಂದ್ರು ಹಾಗೂ ಚಿತ್ರತಂಡ ಹಂಚಿಕೊಂಡಿತು. ನಿರ್ದೇಶಕ ಆರ್. ಚಂದ್ರು, ಈ ಚಿತ್ರದ ಮೂಲಕ ಡಾ.ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯೊಬ್ಬನ ಕತೆಯನ್ನು ತೆರೆಮೇಲೆ ತೆರೆದಿಡುತ್ತಿದ್ದಾರೆ. ಒಬ್ಬ ಸಾಮಾನ್ಯ ಆಟೋ ಚಾಲಕನ ಜೀವನದ ವಿವಿಧ ಮಜಲುಗಳನ್ನು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ಆಟೋಚಾಲಕ ಹಾಗೂ ಅಣ್ಣಾವ್ರ ಅಭಿಮಾನಿಯಾಗಿ ದುನಿಯಾ ವಿಜಯ್ ಅವರು ಪ್ರಬುದ್ದ ಅಭಿನಯ ನೀಡಿದ್ದಾರೆ. 14 ವರ್ಷಗಳ ನಂತರ ಚಿನ್ನದ ಉದ್ಯಮಿ ಕೆ.ಪಿ.ನಂಜುಂಡಿ ಈ ಚಿತ್ರದ ಮೂಲಕ ಬಣ್ಣ ಹಚ್ಚಿದ್ದಾರೆ.
ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬರುವ ಕಥೆಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಹರಿಪ್ರಿಯಾ ಹಾಗೂ ಕೆಂಡಸಂಪಿಗೆ ಬೆಡಗಿ ಮಾನ್ವಿತಾ ಹರೀಶ್ ಇಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನವೀನ್ ಸಜ್ಜು ಎಂಬ ನವ ಪ್ರತಿಭೆ ಪ್ರಥಮ ಬಾರಿಗೆ ಸಂಗೀತ ನೀಡುವುದರ ಮೂಲಕ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್‍ವುಡ್‍ಗೆ ಮತ್ತೆ ಪರಿಚಯವಾಗುತ್ತಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದ್ದು, ಚಿತ್ರಕ್ಕೆ ಕತೆ-ಚಿತ್ರಕತೆ ಬರೆದು ನಿರ್ದೇಶನದ ಹೊಣೆಯನ್ನು ಚಂದ್ರು ಅವರೇ ನಿಭಾಯಿಸಿದ್ದಾರೆ. ಚಿತ್ರದ ವಿಶೇಷತೆಗಳ ಬಗ್ಗೆ ಚಂದ್ರು ಹೀಗೆ ಹೇಳುತ್ತಾರೆ. ನಾನು ಈ ಸಿನಿಮಾ ನಿರ್ಮಾಣ ಮಾಡಲು ಒಬ್ಬ ಆಟೋಡ್ರೈವರ್ ಜೀವನದ ಕಥೆಯೇ ಸ್ಪೂರ್ತಿ. ಈ ಪಾತ್ರವನ್ನು ದುನಿಯಾ ವಿಜಯ್ ಅವರಿಂದಲೇ ಮಾಡಿಸಬೇಕು ಎಂದು ಆರಂಭದಲ್ಲೇ ನಿರ್ಧರಿಸಿದ್ದೆ. ಶಂಕರ್‍ನಾಗ್ ಅವರಷ್ಟೇ ಪರಿಣಾಮಕಾರಿಯಾಗಿ ವಿಜಯ್ ಅವರು ಈ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಮುಖ್ಯವಾಗಿ ಎಲ್ಲಾ ಹಂತದಲ್ಲೂ ನನ್ನನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದ ಕೆ.ಪಿ.ನಂಜುಂಡಿ ಅವರು ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಆಟೋಚಾಲಕನ ಪಾತ್ರವನ್ನು ನಿರ್ವಹಿಸಿರುವ ನಟ ದುನಿಯಾ ವಿಜಯ್ ಈ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಅವರ ಅಭಿಮಾನಿ ಹಾಗೂ ಕನ್ನಡ ಪ್ರೇಮಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರ ನೋಡುತ್ತಿರುವವರಿಗೆ ಒಮ್ಮೊಮ್ಮೆ ಇದು ಡಾ.ರಾಜ್‍ಕುಮಾರ್ ಅವರ ಚಿತ್ರವನ್ನು ನೋಡುತ್ತಿದ್ದವೇನೋ ಎನ್ನುವ ಭಾವನೆ ಮೂಡುತ್ತದೆ.

ವಿಜಯ್ ಅವರು ಭಾವನಾತ್ಮಕ ಸನ್ನಿವೇಶಗಳಲ್ಲಿ ಅಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕ ಚಂದ್ರು ಹೇಳಿದರು. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಕೆ.ಪುರ ಕಾರ್ಯನಿರ್ವಹಿಸಿದ್ದಾರೆ. ಸುಪ್ರೀತ್ ಈ ಚಿತ್ರದ ವಿತರಣೆಯನು ಮಾಡುತ್ತಿದ್ದಾರೆ. ಗುರುಕಿರಣ್ ಹಿನ್ನೆಲೆ ಸಂಗೀತ ಅಳವಡಿಸಿದ್ದಾರೆ. ಈ ಚಿತ್ರದಲ್ಲಿ ಮನ ಮಿಡಿಯುವ ದೃಶ್ಯದೊಂದಿಗೆ ಆ್ಯಕ್ಷನ್ ದೃಶ್ಯಕ್ಕೂ ಕೂಡ ಅಷ್ಟೇ ಒತ್ತು ನೀಡಿದ್ದು, ಅದ್ಧೂರಿಯಾಗಿ ಚಿತ್ರವನ್ನು ಸಿದ್ಧಪಡಿಸಿದ್ದಾರಂತೆ. ಬಹಳಷ್ಟು ನಿರೀಕ್ಷೆಯೊಂದಿಗೆ ವಿಜಿ ಅಭಿಮಾನಿಗಳು ಕಾಯುತ್ತಿರುವ ಕನಕ ಚಿತ್ರ ಪರದೆ ಮೇಲೆ ಅಬ್ಬರಿಸಲು ಸಿದ್ಧವಾಗಿದೆ.

Facebook Comments

Sri Raghav

Admin