ಕರ್ನಾಟಕದ ಅಭಿವೃದ್ಧಿಯನ್ನು ಕೊಂಡಾಡಿದ ರಾಜ್ಯಪಾಲ ವಿ.ಆರ್.ವಾಲಾ

ಈ ಸುದ್ದಿಯನ್ನು ಶೇರ್ ಮಾಡಿ

Vala--02

ಬೆಂಗಳೂರು, ಜ.26- ಕರ್ನಾಟಕ ದೇಶದಲ್ಲೇ ಅಭಿವೃದ್ಧಿಹೊಂದಿದ ರಾಜ್ಯಗಳಲ್ಲಿ ಒಂದಾಗಿದ್ದು, ಬಂಡವಾಳ ಹೂಡಿಕೆಯ ಆಕರ್ಷಣೆಯಲ್ಲಿ ಈ ವರ್ಷವೂ ಮೊದಲ ಸ್ಥಾನದಲ್ಲಿದೆ ಎಂದು ಹೇಳುವ ಮೂಲಕ ರಾಜ್ಯಪಾಲ ವಿ.ಆರ್.ವಾಲಾ ಅವರು ಕರ್ನಾಟಕದ ಅಭಿವೃದ್ಧಿಯನ್ನು ಕೊಂಡಾಡಿದರು. ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಾಣಿಕ್ ಷಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ರಕ್ಷೆ ಸ್ವೀಕರಿಸಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಭಿವೃದ್ಧಿಯ ದಿಕ್ಕಿನತ್ತ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಎರಡನೇ ಬಾರಿಯೂ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ ಎಂದರು.

ಮಹಿಳೆಯರ ಸಬಲೀಕರಣ ಮತ್ತು ಘನತೆಯ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ರಾಜ್ಯ ಸರ್ಕಾರ ಪ್ರತ್ಯೇಕವಾದ ದತ್ತಾಂಶ ಸಂಗ್ರಹ ಕೇಂದ್ರವನ್ನು ಸ್ಥಾಪಿಸಿದ್ದು, ಅದು 2್ಡ47 ರೀತಿಯಲ್ಲಿ ಸರ್ಕಾರದ ದಾಖಲೆಗಳ ರಕ್ಷಣೆಯಾಗಿ ಕೆಲಸ ಮಾಡುತ್ತಿದೆ. ಐಟಿ-ಬಿಟಿ ವಲಯದಲ್ಲಿ ಕರ್ನಾಟಕ ಯಾವಾಗಲೂ ಮುಂಚೂಣಿಯಲ್ಲಿದ್ದು, ಐಟಿ ಉದ್ಯಮದ ದಕ್ಷತೆಯಿಂದಾಗಿ 2017ನೇ ಸಾಲಿಗೆ ಮೂರು ಲಕ್ಷ ಕೋಟಿ ರೂ. ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಜತೆಗೆ ಜೈವಿಕ ತಂತ್ರಜ್ಞಾನ ಉದ್ಯಮದ ಆದಾಯಕ್ಕೆ ಶೇ.35ರಷ್ಟು ಕೊಡುಗೆ ನೀಡಲಾಗಿದೆ ಎಂದು ಹೇಳಿದರು. ರಸ್ತೆ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಿದ್ದು, ವಿವಿಧ ಯೋಜನೆಗಳಡಿ 2,147ಕಿ.ಮೀ. ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. 4014 ಕಿ.ಮೀ. ಜಿಲ್ಲಾ ರಸ್ತೆಗಳು ಸಹ ಅಭಿವೃದ್ಧಿಯಾಗಿವೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ ನೀಡುತ್ತಿದ್ದ 5ಕೆಜಿ ಆಹಾರವನ್ನು 7ಕೆಜಿಗೆ ಹೆಚ್ಚಿಸಲಾಗಿದೆ. ಶೇ.50ರಷ್ಟು ಕಡಿಮೆ ದರದಲ್ಲಿ ಒಂದು ಕೆಜಿ ತೊಗರಿ ಬೇಳೆಯನ್ನೂ ಪೂರೈಸಲಾಗಿದೆ. ಮಾತೃಪೂರ್ಣ ಯೋಜನೆಯಡಿ ಪೌಷ್ಠಿಕಾಂಶ ಯುಕ್ತ ಮಧ್ಯಾಹ್ನದ ಬಿಸಿಯೂಟವನ್ನು 8.70ಲಕ್ಷ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ 198 ಇಂದಿರಾ ಕ್ಯಾಂಟೀನ್ ಸ್ಥಾಪಿಸಿ ರಿಯಾಯ್ತಿ ದರದಲ್ಲಿ ತಿಂಡಿ, ಊಟ ನೀಡಲಾಗುತ್ತಿದೆ. ಈ ಯೋಜನೆಯನ್ನು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಹಸಿವು ಮುಕ್ತ ಕರ್ನಾಟಕದತ್ತ ಹೆಜ್ಜೆ ಹಾಕಲಾಗಿದೆ. ಬೆಂಗಳೂರು ನಗರವು ಜಗತ್ತಿನ 5ಕ್ರಿಯಾತ್ಮಕ ನಗರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಗರದ ಜನಸಂಖ್ಯೆಗೆ ಅನುಗುಣವಾಗಿ ಸೇವೆ ಒದಗಿಸಲು ಮೆಟ್ರೋ 2ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ 72 ಕಿ.ಮೀ. ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.

ಡಿಜಿಟಲ್ ಆಡಳಿತದ ಅಂಗವಾಗಿ 5353 ಗ್ರಾಮ ಪಂಚಾಯ್ತಿಗಳಲ್ಲಿ ವೈಫೈ ಸೇವೆ ಒದಗಿಸಲಾಗಿದೆ. ಅರಣ್ಯ ಅಭಿವೃದ್ಧಿಯಿಂದ ಆನೆ ಮತ್ತು ಹುಲಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಿದೆ. 22.35 ಲಕ್ಷ ಕೃಷಿಕರ 2165 ಕೋಟಿ ಸಾಲವನ್ನು, 19440 ನೇಕಾರರ 53.54ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ. ಕರ್ನಾಟಕ ಶೈಕ್ಷಣಿಕ ಕೇಂದ್ರವಾಗಿದ್ದು, ಈಗ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲೂ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಭಾರತದ ಜ್ಞಾನ, ಕೌಶಲ್ಯ ಮತ್ತು ಮಾನವ ಸಂಪನ್ಮೂಲಕ್ಕೆ ಭಾರೀ ಬೇಡಿಕೆ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬನೆ ಸಾಧಿಸಲು ನಾವು ಒಟ್ಟಾಗಿ ಶ್ರಮಿಸಬೇಕಾಗಿದೆ. ವಿವಿಧ ಧರ್ಮ, ಸಮಾಜ, ಸಂಸ್ಕøತಿ ಮತ್ತು ಭಾಷೆಗಳು ಒಂದರೊಡನೆ ಮತ್ತೊಂದು ಸಾಮರಸ್ಯದಿಂದ ಕೂಡಿರುವ ನಮ್ಮ ಭಾರತ ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರುತ್ತಿದೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರು ಮತ್ತು ಭದ್ರತಾ ಸಿಬ್ಬಂದಿಗಳ ತ್ಯಾಗ ಮನೋಭಾವನೆಗೆ ಕೃತಜ್ಞತೆ ಸಲ್ಲಿಸುವುದಾಗಿ ರಾಜ್ಯಪಾಲರು ತಿಳಿಸಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments

Sri Raghav

Admin