ಅಲ್ಪಸಂಖ್ಯಾತರ ಮೇಲಿನ ಕೇಸ್ ಗಳಿಗೆ ಸರ್ಕಾರದ ಕ್ಲೀನ್‍ಚಿಟ್ ಭಾಗ್ಯ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

bjp-pro
ಬೆಂಗಳೂರು, ಜ.27-ಕೋಮುಗಲಭೆ ಮತ್ತಿತರ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆದು ಕ್ಲೀನ್‍ಚಿಟ್ ಭಾಗ್ಯ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿರೋಧಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿಯ ಚಿಕ್ಕಪೇಟೆ ನಾಗರಿಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಕಾಪೋರೇಟರ್ ಲೀಲಾ ಶಿವಕುಮಾರ್ 22-12-2017ರಲ್ಲಿ ಸರ್ಕಾರ ಪೊಲೀಸ್ ಮಹಾನಿರ್ದೇಶಕರಿಗೆ ಅಲ್ಪಸಂಖ್ಯಾತರ ಮೇಲಿರುವ ಕ್ರಿಮಿನಲ್ ಮೊಕದ್ದಮೆಯ ವರದಿಯನ್ನು ನೀಡುವಂತೆ ಸುತ್ತೋಲೆ ಹೊರಡಿಸಿತ್ತು.

ಇದರಂತೆ ಪೊಲೀಸ್ ಮಹಾನಿರ್ದೇಶಕರು ಜ.2ರಂದು 25 ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಲ್ಪಸಂಖ್ಯಾತರ ಮೇಲಿರುವ ಮೊಕದ್ದಮೆ ಪಟ್ಟಿಯನ್ನು ನೀಡುವಂತೆ ಸುತ್ತೋಲೆ ಹೊರಡಿಸಿದ್ದಾರೆ. ಇದು ವೋಟಿನ ರಾಜಕಾರಣವನ್ನು ಬಿಂಬಿಸುತ್ತದೆ ಎಂದು ಹೇಳಿದರು. ಕಾನೂನು ಎಲ್ಲರಿಗೂ ಒಂದೇ. ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ಬೇಧವಿಲ್ಲ. ಜಾತಿಧರ್ಮ, ಭಾಷೆ ಎನ್ನದೆ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ರಾಜ್ಯದಲ್ಲಿ ಈಗಾಗಲೇ ಅಲ್ಪಸಂಖ್ಯಾತರ ಮೇಲಿರುವ ಪ್ರಕರಣದಲ್ಲಿ 172 ಪ್ರಕರಣಗಳನ್ನು ರಾಜ್ಯ ಸರ್ಕಾರ ಖುಲಾಸೆಗೊಳಿಸಿದೆ.

ಈ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಕ್ಲೀನ್‍ಚಿಟ್ ನೀಡುವ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು. ಈಗಾಗಲೇ ರಾಜ್ಯದಲ್ಲಿ 22 ಕೊಲೆಗಳು ನಡೆದಿವೆ. ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವಿರುದ್ದ ಪ್ರಕರಣಗಳನ್ನು ಹಿಂಪಡೆದರೆ ಮತ್ತಷ್ಟು ಕೋಮುಗಲಭೆ ಸೃಷ್ಟಿಯಾಗುತ್ತದೆ ಎಂದರು. ಮಹದಾಯಿ ಮತ್ತು ಕಳಸಾಬಂಡೂರಿ ನೀರಿಗಾಗಿ ಹೋರಾಟ ಮಾಡಿದ ರೈತರ ಮೇಲೆ ಲಾಠಿ ಪ್ರಹಾರ ನಡೆಸಿ ಪ್ರಕರಣಗಳನ್ನು ದಾಖಲಿಸಿದ ಸರ್ಕಾರ ಮೊಕದ್ದಮೆಯನ್ನು ವಾಪಸ್ ಪಡೆಯದೆ ಅನ್ಯಾಯ ಮಾಡಿದೆ. ಇಂತಹ ಸಂದರ್ಭದಲ್ಲಿ ಕೋಮುಗಲಭೆ ಸೃಷ್ಟಿಸಿದ ಅಲ್ಪಸಂಖ್ಯಾತರಿಗೆ ಕ್ಲೀನ್‍ಚಿಟ್ ಭಾಗ್ಯ ಯಾಕೆ ನೀಡುತ್ತಿದೆ ಎಂದು ವೇದಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿನಗರ ಮಂಡಳಿ ಅಧ್ಯಕ್ಷ ಪಳನಿ, ಬಿಜೆಪಿ ಮುಖಂಡ ಗೋವಿಂದ್ ಮತ್ತಿತರರು ಇದ್ದರು.

Facebook Comments

Sri Raghav

Admin