‘ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಕೆನಡಾದಲ್ಲಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

chandru
ಟೊರೊಂಟೊ/ಬೆಂಗಳೂರು, ಜ.27- ಹಿರಿಯ ನಟ ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಕೂದುವಳ್ಳಿ ಚಂದ್ರಶೇಖರ್ ಅವರು ಹೃದಯಾಘಾತದಿಂದ ಕೆನಡಾದಲ್ಲಿ ಇಂದು ಮುಂಜಾನೆ ವಿಧಿವಶರಾದರು.   ಅವರು ಪತ್ನಿ ಶೀಲಾ ಮತ್ತು ಪುತ್ರಿ ತಾನಿಯಾ, ಬಂಧು-ಮಿತ್ರರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ಕೆಲವು ವರ್ಷಗಳಿಂದ ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರ ಕಾಲಿನಲ್ಲಿ ರಕ್ತಹೆಪ್ಪುಗಟ್ಟಿ, ಕ್ರಮೇಣ ಸಮಸ್ಯೆ ಉಲ್ಬಣಗೊಂಡಿತ್ತು. ಹಾಗಾಗ ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದ ಅವರು ಕೆನಡಾದ ಟೊರೊಂಟೊದಲ್ಲಿ ಹೃದಯಾಘಾತದಿಂದ ಇಂದು ನಿಧನರಾದರು.

ಅತ್ಯಂತ ಸ್ಪುರದ್ರೂಪಿ ಮತ್ತು ಪ್ರತಿಭೆಯ ಸಂಗಮದಂತಿದ್ದ ಚಂದ್ರಶೇಖರ್ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದರು. ವರನಟ ಡಾ.ರಾಜ್‍ಕುಮಾರ್, ಹಿರಿಯ ನಟರಾದ ಡಾ.ವಿಷ್ಣುವರ್ಧನ್, ರಾಜೇಶ್, ಅನಂತನಾಗ್, ಡಾ.ಶಿವರಾಜ್‍ಕುಮಾರ್ ಸೇರಿದಂತೆ ಹಲವು ಖ್ಯಾತ ನಟರೊಂದಿಗೆ ಅವರು ನಟಿಸಿದ್ದರು. ಹೆಸರಾಂತ ನಿರ್ದೇಶಕ ಪುಟ್ಟಣ ಕಣಗಾಲ್ ಗರಡಿಯಲ್ಲಿ ಪಳಗಿ ಅರಳಿದ ಪ್ರತಿಭೆ ಇವರು. 1969ರಲ್ಲಿ ನಮ್ಮ ಮಕ್ಕಳು ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರು ಸುಮಾರು 50 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಸಂಸ್ಕಾರ, ಪಾಪಪುಣ್ಯ, ವಂಶವೃಕ್ಷ, ಸೀತೆಯಲ್ಲ ಸಾವಿತ್ರಿ, ಎಡಕಲ್ಲು ಗುಡ್ಡದ ಮೇಲೆ, ಸಂಪತ್ತಿಗೆ ಸವಾಲ್, ಕಸ್ತೂರಿ ವಿಜಯ, ಒಂದೇ ರೂಪ ಎರಡು ಗುಣ, ಮನೆ ಬೆಳಕು, ಹಂಸಗೀತೆ, ಬೆಳುವಲದ ಮಡಿಲಲ್ಲಿ, ಸೂತ್ರದ ಗೊಂಬೆ, ಪರಿವರ್ತನೆ, ರಾಜಾ ನನ್ನ ರಾಜಾ, ಕನಸು ನನಸು, ಬೆಸುಗೆ, ಶ್ರೀಮಂತನ ಮಗಳು, ಸೊಸೆ ತಂದ ಸೌಭಾಗ್ಯ, ಶನಿ ಪ್ರಭಾವ, ದೇವರ ದುಡ್ಡು, ಸಂದರ್ಭ, ಶಂಕರ್‍ಗುರು, ಮುಯ್ಯಿಗೆ ಮುಯ್ಯಿ, ಖಂಡವಿದಿಕೋ ಮಾಂಸವಿದಿಕೋ, ಕಮಲಾ, ಧರ್ಮಸೆರೆ, ಪಾಯಿಂಟ್ ಪರಿಮಳ, ಶ್ರೀರಾಘವೇಂದ್ರ ವೈಭವ, ಶಿಕಾರಿ, ನಾಗ ಕಾಳ ಬೈರವ, ಗುರು ಶಿಷ್ಯರು, ವಸಂತ ನಿಲಯ, ಬೂದಿ ಮುಚ್ಚಿದ ಕೆಂಡ, ಹಾಲು ಜೇನು, ಧರ್ಮ ದಾರಿ ತಪ್ಪಿತು, ದೇವರ ತೀರ್ಪು, ಧರಣಿ ಮಂಡಲ ಮಧ್ಯದೊಳಗೆ, ಒಲವೇ ಬದುಕು, ನಾನೇ ರಾಜ, ಮಳೆ ಬಂತು ಮಳೆ, ಬೆಂಕಿ ಬಿರುಗಾಳಿ, ಆರಾಧನೆ, ಮಹಾಪುರುಷ, ಗುರು-ಜಗದ್ಗುರು, ಈ ಜೀವ ನಿನಗಾಗಿ, ಮಾನಸ ಸರೋವರ, ತರ್ಕ, ಪೂರ್ವಾಪರ, ಹಾಗೇ ಸುಮ್ಮನೇ, ಶಿವಲಿಂಗ, ಅಸ್ತಿತ್ವ, ರೋಸ್, ಕಾರಂಜಿ, ಜೀವ ಇವು ಚಂದ್ರಶೇಖರ್ ನಟಿಸಿದ ಸಿನಿಮಾಗಳು.

ಎಡಕಲ್ಲು ಗುಡ್ಡದ ಮೇಲೆ ಸಿನಿಮಾದಲ್ಲಿ ನಂಜುಂಡಿ ಪಾತ್ರ ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತು. ವಿವಾಹಿತ ಸ್ತ್ರೀಯರನ್ನು ಮೋಹಿಸುವ ಪ್ಲೇಬಾಯ್ ಪಾತ್ರ ಆಗಿನ ಸಂದರ್ಭದಲ್ಲಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದರೂ. ಆ ರೋಲ್‍ನಲ್ಲಿ ಚಂದ್ರು ಮಿಂಚಿದ್ದರು. ಅವರು ಹಲವಾರು ಪ್ರಶಸ್ತಿ-ಪುರಸ್ಕಾರ, ಸನ್ಮಾನ ಗೌರವಗಳಿಗೂ ಪಾತ್ರರಾಗಿದ್ದರು. ಚಂದ್ರಶೇಖರ್ ಅವರು ಹಲವು ಪ್ರಶಸ್ತಿ-ಪುರಸ್ಕಾರಗಳು ಮತ್ತು ಗೌರವ-ಸನ್ಮಾನಗಳಿಗೂ ಪಾತ್ರರಾಗಿದ್ದರು. 3 ಗಂಟೆ 30 ದಿನ 30 ಸೆಕೆಂಡ್ ಅವರು ನಟಿಸಿದ ಕೊನೆ ಸಿನಿಮಾ. ಕೆಲವು ದಿನಗಳ ಹಿಂದಷ್ಟೇ ಅವರು ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ನಂತರ ಅವರು ಬೆಂಗಳೂರಿನಿಂದ ಕೆನಡಾಗೆ ತೆರಳಿದ್ದರು.

ಸಿಎಂ ಸಂತಾಪ :

ಹಿರಿಯ ನಟ ಚಂದ್ರಶೇಖರ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಹಿರಿಯ ನಟಿ ಜಯಂತಿ, ಶಿವರಾಜ್‍ಕುಮಾರ್ ಮೊದಲಾದ ಗಣ್ಯರು ಮತ್ತು ಚಿತ್ರತಂಡದ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಕೆನಡಾದಿಂದ ಚಂದ್ರಶೇಖರ್ ಅವರ ಪಾರ್ಥಿವ ಶರೀರವನ್ನು ತಂದು ಇಲ್ಲೇ ಅಂತ್ಯಕ್ರಿಯೆ ವಿಧಿವಿಧಾನ ನಡೆಸುವ ಸಂಬಂಧ ಅವರ ಕುಟುಂಬದವರು ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯಗೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

Facebook Comments

Sri Raghav

Admin