ಕೊರಟಗೆರೆಯಲ್ಲಿ ಈ ಬಾರಿಯೂ ಪರಮೇಶ್ವರ್’ಗೆ ಅಗ್ನಿ ಪರೀಕ್ಷೆ ..!

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

– ಸಿ.ಎಸ್.ಕುಮಾರ್/ ಉಮೇಶ್ ಕೋಲಿಗೆರೆ

ಕೊರಟಗೆರೆ ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣೆ ಈ ಬಾರಿ ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿದೆ. ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿರುವ ಕೆ.ಪಿ.ಸಿ.ಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಸ್ಪರ್ಧೆಯಿಂದ ಕೊರಟಗೆರೆ ಚಿತ್ರಣವೇ ಬದಲಾಗಿದೆ. ಕಳೆದ ಬಾರಿ ಜೆಡಿಎಸ್‍ನ ಸುಧಾಕರ್ ಲಾಲ್ ವಿರುದ್ಧ ಸೋಲು ಕಂಡು ಮರೆಯಲಾಗದ ರಾಜಕೀಯ ಪಾಠ ಕಲಿತ ಪರಮೇಶ್ವರ್, ತಮ್ಮೆಲ್ಲಾ ತಪ್ಪುಗಳನ್ನು ತಿದ್ದಿಕೊಂಡು ಜನರ ನಡುವೆ ಹೋಗುವ ಮೂಲಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಈವರೆಗೆ ತಮಗೆ ಅಂಟಿದ್ದ ವೈಟ್ ಕಾಲರ್ ಪೊಲಿಟಿಷಿಯನ್ ಎಂಬ ಹಣೆಪಟ್ಟಿಯನ್ನು ಕಳೆದುಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ.

ಕೊರಟಗೆರೆ ಕ್ಷೇತ್ರಕ್ಕೆ ಮೂರು ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆ ಬಹುತೇಕ ಖಚಿತವಾಗಿದೆ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದು ಬೇರೆ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಸ್ಥಾನದಲ್ಲಿರುವುದರಿಂದ ತಮಗೆ ಟಿಕೆಟ್ ಪಡೆದುಕೊಳ್ಳುವುದು ಕಷ್ಟವಲ್ಲ. ಇನ್ನೂ ಜೆಡಿಎಸ್‍ನಿಂದ ಕಳೆದ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಧಾಕರ್ ಲಾಲ್ ಎರಡನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿಯಿಂದ ವೈ.ಎಚ್.ಹುಚ್ಚಯ್ಯ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿದ್ದು, ಈಗಾಗಲೇ ಅವರು ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

2013ರ ಚುನಾವಣೆ ಪರಮೇಶ್ವರ್ ಅವರಿಗೆ ಸಿಹಿ ಕಹಿ ಎರಡನ್ನು ನೀಡಿತು. ತಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯಾ ದ್ಯಂತ ಭರ್ಜರಿ ಗೆಲವು ಸಾಧಿಸಿ ಅತ್ಯಧಿಕ ಬಹುಮತದಿಂದ ಅಧಿಕಾರಕ್ಕೆ ಬಂದರೆ, ಕೊರಟಗೆರೆ ಕ್ಷೇತ್ರದ ಜನ ಪರಮೇಶ್ವರ್ ಅವರಿಗೆ ಸೋಲಿನ ರುಚಿ ತೋರಿಸಿದರು. ಇದರಿಂದ ಕೂದಲೆಳೆಯ ಅಂತರದಲ್ಲಿ ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆಯಿಂದ ವಂಚಿತರಾದರು. ಅನಂತರ ಕ್ಷೇತ್ರದ ಮೇಲೆ ಮುನಿಸಿಕೊಂಡು ಎರಡುವರೆ ವರ್ಷ ಕೊರಟಗೆರೆಯತ್ತ ತಲೆ ಹಾಕಿರಲಿಲ್ಲ. ಕೊನೆಗೆ ಪ್ರಮುಖ ನಾಯಕರು ಪರಮೇಶ್ವರ್ ಅವರ ಮನವೋಲಿಸಿ ಮತ್ತೆ ಕ್ಷೇತ್ರದತ್ತ ಬರುವಂತೆ ಮಾಡಿದ್ದರು.   ಕಳೆದ ಬಾರಿ ಜನ ಕಲಿಸಿದ ಪಾಠದಿಂದ ಎಚ್ಚೆತ್ತುಕೊಂಡ ಪರಮೇಶ್ವರ್, ಈ ಬಾರಿ ತಾವೇ ಖುದ್ದಾಗಿ ಜನರ ಬಳಿ ಹೋಗುತ್ತಿದ್ದಾರೆ. ಜನ ಸಾಮಾನ್ಯರೊಂದಿಗೆ ಬೆರೆಯುತ್ತಿದ್ದಾರೆ. ಗ್ರಾಮ ವಾಸ್ತವ್ಯದ ಮೂಲಕ ತಡರಾತ್ರಿವರೆಗೂ ಜನರೊಂದಿಗೆ ಸಂವಾದಗಳನ್ನು ಮಾಡುತ್ತಿದ್ದಾರೆ.

ಬಹುತೇಕ ದಿನಗಳನ್ನು ಕ್ಷೇತ್ರದಲ್ಲೇ ಕಳೆಯಲಾರಭಿಸಿದ್ದಾರೆ. ಈ ಬಾರಿ ಹೇಗಾದರೂ ಮಾಡಿ ಕೊರಟಗೆರೆ ಕ್ಷೇತ್ರದ ಜನರ ಮನಗೆದ್ದು, ಕೈ ತಪ್ಪಿ ಹೋಗಿರುವ ಮುಖ್ಯಮಂತ್ರಿ ಹುದ್ದೆಯನ್ನು ಪಡೆಯುವ ಉಮೇದಿನಲ್ಲಿ ಪರಮೇಶ್ವರ್ ಇದ್ದಾರೆ. ಇತ್ತ ಜೆಡಿಎಸ್‍ನ ಸುಧಾಕರ್ ಲಾಲ್ ಕೂಡ ತಣ್ಣಗೆ ಕ್ಷೇತ್ರ ಸುತ್ತಲಾರಂಭಿಸಿದ್ದಾರೆ. ಕಳೆದ ವರ್ಷದಷ್ಟು ಸುಲಭವಾಗಿ ಈ ಬಾರಿ ಗೆಲ್ಲಲು ಸಾಧ್ಯವಿಲ್ಲ ಎಂಬ ವಾಸ್ತವದ ಅರಿವಿನೊಂದಿಗೆ ಜನರ ಜೊತೆ ತಾವು ಮೊದಲಿನಿಂದಲೂ ಇರುವ ಶಾಸಕ. ಚುನಾವಣೆಯ ಕಾರಣಕ್ಕೆ ನಿಮ್ಮಲ್ಲಿ ಬಂದಿಲ್ಲ. ಮೊದಲಿನಿಂದಲೂ ನಿಮ್ಮೊಂದಿಗಿದ್ದೇನೆ. ನನ್ನ ಕೈ ಬಿಡಬೇಡಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಗಂಗಹನುಮಯ್ಯ ಈ ಬಾರಿ ಜೆಡಿಎಸ್ ಜೊತೆಗಿದ್ದಾರೆ. ಇದು ಸುಧಾಕರ್ ಲಾಲ್ ಅವರಿಗೆ ಒಂದಿಷ್ಟು ಬಲವನ್ನು ಹೆಚ್ಚಿಸಿದೆ.

ಬಿಜೆಪಿಯ ವೈ.ಎಚ್.ಹುಚ್ಚಯ್ಯ ಒಂದಷ್ಟು ದಿನ, ಒಳ ಮೀಸಲಾತಿಗೆ ಪರಮೇಶ್ವರ್ ವಿರೋಧವಿದ್ದಾರೆ ಎಂದು ಪ್ರಚಾರ ಮಾಡಿ ಪರಿಶಿಷ್ಠ ಸಮುದಾಯದ ಪೈಕಿ ಎಡಗೈ ಸಮುದಾಯದ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಅದಕ್ಕೆ ಕಾಂಗ್ರೆಸ್‍ನಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು.  ಈಗಾಗಲೇ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಸಾಕಷ್ಟು ರಾಜಕೀಯದ ಅನುಭವ ಇರುವ ಹುಚ್ಚಯ್ಯ ಅವರು ಮೋದಿ ಅಲೆಯ ಮೇಲೆ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಹೊಂದಿದ್ದಾರೆ. ಇವರೊಂದಿಗೆ ನೆಲಮಂಗಲದ ಲಕ್ಷ್ಮೀಕಾಂತ್ ಹಾಗೂ ಆರತಿ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಪೆದ್ದರಾಜ್, ಜೆಡಿಎಸ್‍ನಿಂದ ಸುಧಾಕರ್ ಲಾಲ್, ಕಾಂಗ್ರೆಸ್‍ನಿಂದ ಡಾ.ಪರಮೇಶ್ವರ್, ಕೆಜೆಪಿಯಿಂದ ವಾಲೆ ಚಂದ್ರು ಸ್ಪರ್ಧಿಸಿದ್ದರು. ಜೆಡಿಎಸ್ ಅತ್ಯಂತ ಜಾಣತನ ಪ್ರದರ್ಶಿಸಿ ಮೂರು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಹಾಗೂ ಸ್ಥಳೀಯ ಜನರ ನಡುವೆ ಬೆಳೆದು ಬಂದ ಸುಧಾಕರ್‍ಲಾಲ್ ಅವರಿಗೆ ಟಿಕೆಟ್ ನೀಡಿತ್ತು. ಆ ಕಾಲಕ್ಕೆ ಪರಮೇಶ್ವರ್ ಅವರಿಗೆ ವೈಟ್‍ಕಾಲರ್ ರಾಜಕಾರಣಿ, ಬಡವರಿಗೆ ಸಿಗೋಲ್ಲ, ಅವರ ಸುತ್ತಮುತ್ತ ಮಧ್ಯವರ್ತಿಗಳೇ ತುಂಬಿರುತ್ತಾರೆ ಎಂಬ ಅಪ ಕೀರ್ತಿಗಳಿದ್ದವು. ಪರಮೇಶ್ವರ್ ಅವರನ್ನು ಭೇಟಿ ಮಾಡಬೇಕಾದರೆ ಮೂರನೆಯ ವ್ಯಕ್ತಿಯನ್ನು ಆಶ್ರಯಿಸಬೇಕು ಎಂಬ ಆಕ್ಷೇಪವಿತ್ತು. ಈ ಎಲ್ಲಾ ಅಪವಾದಗಳ ಬಗ್ಗೆ ಮಾಹಿತಿಯಿದ್ದರೂ ಪರಮೇಶ್ವರ್ ಎಚ್ಚೆತ್ತುಕೊಳ್ಳಲಿಲ್ಲ. ಅದರ ಪರಿಣಾಮ ಸೋಲಬೇಕಾಯಿತು. ಪರಮೇಶ್ವರ್ ಗೆದ್ದರೆ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಲು ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಕೆಲವು ನಾಯಕರು ಷ್ಯಡ್ಯಂತ್ರ ಮಾಡಿ ಸೋಲಿಸಿದರು ಎಂಬ ಮಾತುಗಳು ಕೇಳಿ ಬಂದವು.

ಆರೋಪಗಳು ಏನೇ ಇದ್ದರೂ ಪರಮೇಶ್ವರ್‍ರನ್ನು ಜನ ಕೈ ಹಿಡಿಯಲಿಲ್ಲ ಎಂಬುದಂತು ನಿಜವಾಗಿತ್ತು. ಜೆಡಿಎಸ್‍ನ ಸುಧಾಕರ್ ಲಾಲ್ 72229 ಮತಗಳನ್ನು ಪಡೆದರೆ, ಪರಮೇಶ್ವರ್ 54074 ಮತಗಳನ್ನು ಪಡೆದು 18000 ಮತಗಳ ಅಂತರದಲ್ಲಿ ಸೋಲು ಕಂಡರು. ಬಿ ಜೆ ಪಿ ಯ ಪೆದ್ದರಾಜ್ 3088, ಕೆ ಜೆ ಪಿ ವಾಲೆ ಚಂದ್ರು 15738 ಮತಗಳನ್ನು ಪಡೆದಿದ್ದರು. ಈ ಬಾರಿ ಕಳೆದ ಬಾರಿ ನಡೆದಿದ್ದ ತಪ್ಪುಗಳನ್ನು ಪರಮೇಶ್ವರ್ ಅವರು ತಿದ್ದಿಕೊಂಡಂತೆ ಕಾಣುತ್ತಿದೆ. ಹೆಚ್ಚಾಗಿ ಜನರ ನಡುವೆ ಕಾಣಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಅವರ ಹಿಂದೆ ಸಾಲು ಸಾಲಾಗಿ ಹೋಗುತ್ತಿರುವ ಕಾರುಗಳು ಜನರಿಗೆ ಮತ್ತೆ ಅನುಮಾನ ಬರುವಂತೆ ಮಾಡುತ್ತಿದೆ. ಯಾವುದೇ ಜನ ನಾಯಕ, ಜನರಿಗೆ ಸುಲಭವಾಗಿ ಕೈಗೆಟುಕಬೇಕು ಎಂಬುದು ಜನರ ನಿರೀಕ್ಷೆ. ಅದನ್ನು ಬಯಸುವುದು ಕೊರಟಗೆರೆ ಜನರ ಹಕ್ಕಲ್ಲವೇ.

ಕ್ಷೇತ್ರದ ರಾಜಕೀಯ ಪರಿಚಯ: ಕೊರಟಗೆರೆ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದೆ. ತಾಲ್ಲೂಕು ಪಂಚಾಯಿತಿಯಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಒಟ್ಟು 24 ಗ್ರಾಮ ಪಂಚಾಯತ್‍ಗಳಲ್ಲಿ 12 ಜೆಡಿಎಸ್, 12 ಕಾಂಗ್ರೆಸ್ ಪಕ್ಷ ದ ಪ್ರತಿನಿಧಿಗಳು ಅಧಿಕಾರದಲ್ಲಿದ್ದಾರೆ. ಬಿಜೆಪಿ ಶೂನ್ಯ ಸಂಖ್ಯೆಯಲ್ಲಿದೆ.  2006ರಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದ ಕೊರಟಗೆರೆಯಲ್ಲಿ ಜೆಡಿಎಸ್‍ನ ಸಿ.ಚೆನ್ನಿಗಪ್ಪ ಗೆದ್ದಿದ್ದರು. 2008ರಲ್ಲಿ ಪರಮೇಶ್ವರ್ ಆಯ್ಕೆಯಾಗಿದ್ದರು. 2013ರಲ್ಲಿ ಸುಧಾಕರ್‍ಲಾಲ್ ಗೆದ್ದಿದ್ದರು.

Facebook Comments

Sri Raghav

Admin