ಜೈಲಿನಿಂದ ಪೆರೋಲ್ ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದ ಆರೋಪಿಗಳು ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Jail--01

ಬೆಂಗಳೂರು, ಜ.27- ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿ ಪೆರೋಲ್ ರಜೆ ಮೇಲೆ ಹೊರ ಬಂದು 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೇರಿದಂತೆ ಈತನಿಗೆ ಜಾಮೀನು ನೀಡಿದ್ದ ಸಹೋದರನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೆಂಕಟೇಶ್ (40) ಮತ್ತು ಸಹೋದರ ಮುರಳಿ (38) ಬಂಧಿತರು.  2005ರಲ್ಲಿ ಪೀಣ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಆರೋಪಿ ವೆಂಕಟೇಶ್ ಮೂಲತಃ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯವನಾಗಿದ್ದು, ಈತ ತುರ್ತು ಪೆರೋಲ್ ರಜೆ ಮೇಲೆ ಹೊರಬಂದು ನಿಗದಿತ ದಿನಾಂಕದಂದು ಕಾರಾಗೃಹಕ್ಕೆ ಶರಣಾಗದೆ ತಲೆಮರೆಸಿಕೊಂಡಿದ್ದನು.

ಶಿಕ್ಷೆಗೊಳಗಾಗಿದ್ದ ವೆಂಕಟೇಶ್ ಮತ್ತು ಜಾಮೀನುದಾರರಾದ ಸಹೋದರ ಮುರಳಿ ವಿರುದ್ಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ರಜೆ ಮೇಲೆ ಹೊರ ಹೋಗಿ ಎಂಟು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವೆಂಕಟೇಶ್ ಮತ್ತು ಜಾಮೀನುದಾರ ಈತನ ಸಹೋದರ ಮುರಳಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸುವಲ್ಲಿ ಆರ್‍ಎಂಸಿ ಯಾರ್ಡ್ ಮತ್ತು ಪೀಣ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯು ಪೊಲೀಸರಿಗೆ ಗುರುತು ಸಿಗದಂತೆ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ. ಯಶವಂತಪುರ ಉಪವಿಭಾಗದ ಎಸಿಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ ಪೀಣ್ಯ ಠಾಣೆ ಸಬ್‍ಇನ್ಸ್‍ಪೆಕ್ಟರ್ ವಸೀಂವುಲ್ಲಾ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments

Sri Raghav

Admin