ಶ್ರೀ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ, ಇಂದು ಅಥವಾ ನಾಳೆ ಡಿಸ್ಚಾರ್ಜ್ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Shree--02

ಬೆಂಗಳೂರು, ಜ.27- ಶತಾಯುಷಿ, ನಡೆದಾಡುವ ದೇವರು, ಭಕ್ತರ ಪಾಲಿನ ಆರಾಧ್ಯ ದೈವ ತುಮಕೂರಿನ ಶ್ರೀ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇಂದು ಸಂಜೆ ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಅನಾರೋಗ್ಯದಿಂದ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು, ನಿನ್ನೆ ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿ ಎಂಡೋಸ್ಕೋಫಿ ಮೂಲಕ ಸ್ಟಂಟ್ ಅಳವಡಿಸಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದ್ದು, ಶ್ರೀಗಳು ಚೇತರಿಸಿಕೊಂಡಿದ್ದಾರೆ.   ರಕ್ತದೊತ್ತಡ, ಸಕ್ಕರೆ ಪ್ರಮಾಣ ಸಾಮಾನ್ಯವಾಗಿದ್ದು, ಎಂದಿನಂತೆ ಶ್ರೀಗಳು ಆಸ್ಪತ್ರೆಯಲ್ಲಿಯೇ ಪೂಜಾ ಕೈಂಕರ್ಯ ನೆರವೇರಿಸಿದರು ಎಂದು ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ರವೀಂದ್ರ ತಿಳಿಸಿದ್ದಾರೆ.

ಶ್ರೀಗಳಿಗೆ ವಿಶ್ರಾಂತಿ ಅಗತ್ಯವಿದ್ದು, ಇನ್ನೂ ಕೆಲವು ಚಿಕಿತ್ಸೆಗಳನ್ನು ನೀಡಬೇಕಿದೆ. ಆದರೆ, ಆಸ್ಪತ್ರೆಯಲ್ಲಿರಲು ಅವರು ಒಪ್ಪುತ್ತಿಲ್ಲ. ಚಿಕಿತ್ಸೆ ನೀಡುವುದಾದರೆ ಮಠಕ್ಕೇ ಬಂದು ನೀಡಿ ಎಂದು ವೈದ್ಯರಿಗೆ ಒತ್ತಾಯ ಮಾಡಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯ ಪರಿಸ್ಥಿತಿಯನ್ನು ನೋಡಿಕೊಂಡು ಇನ್ನೊಮ್ಮೆ ಸ್ಕ್ಯಾನ್ ಮಾಡಿ ಇಂದು ಸಂಜೆ ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಹಾಗೂ ಮಠದಲ್ಲೇ ಇನ್ನೆರಡು ದಿನಗಳ ಕಾಲ ಚಿಕಿತ್ಸೆ ಮುಂದುವರಿಸಲಾಗುವುದು.
ಶ್ರೀಗಳು ಗುಣಮುಖರಾಗಿದ್ದು, ಯಾವುದೇ ಭಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅನಾರೋಗ್ಯದಿಂದ ಶ್ರೀಗಳನ್ನು ನಗರದ ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ಭಕ್ತರ ದಂಡೇ ಆಸ್ಪತ್ರೆಯತ್ತ ಧಾವಿಸಿತ್ತು.  ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಾರ್ಜ್, ಮಾಜಿ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ, ಮೇಯರ್ ಸಂಪತ್‍ರಾಜ್ ಮುಂತಾದವರು ಆಗಮಿಸಿ ಆರೋಗ್ಯ ವಿಚಾರಿಸಿದರು.

ಇತ್ತ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮಠಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಏನಾಯಿತೋ ಏನೋ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು. ಇಂದು ಬೆಳಗ್ಗೆ ವೈದ್ಯರು, ಶ್ರೀಗಳು ಆರೋಗ್ಯವಾಗಿದ್ದಾರೆ. ಅವರಿಗೆ ನಡೆಸಿದ ಸಣ್ಣ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೇಳಿದ ಮೇಲೆ ಭಕ್ತರು ನಿರಾಳರಾಗಿದ್ದಾರೆ.   ಮಠದಲ್ಲಿ ಅವರು ಪ್ರತಿದಿನ ಕೂರುತ್ತಿದ್ದ ಪೀಠಕ್ಕೆ ನಮಸ್ಕರಿಸಿ ಹೋಗುತ್ತಿದ್ದಾರೆ.

Facebook Comments

Sri Raghav

Admin